More

    ಕಳ್ಳಮಾರ್ಗಗಳು ಮತ್ತೆ ಮುಕ್ತ ಮುಕ್ತ…

    ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

    ಇಲ್ಲಿಯ ಎಪಿಎಂಸಿ ಆವರಣ ಈಗ ಹಲವು ಅಕ್ರಮಗಳ ತಾಣವಾಗತೊಡಗಿದೆ. ಇಲ್ಲಿನ ಜನರು ಮಧ್ಯಾಹ್ನವೇ ಮದ್ಯದ ಕಿಕ್ಕೇರಿಸಿಕೊಳ್ಳತೊಡಗಿದ್ದಾರೆ. ಹಿಂಭಾಗಲಿನಿಂದ ಲಾರಿಗಳು ಪ್ರವೇಶಿಸದಂತೆ ಅಳವಡಿಸಲಾಗಿದ್ದ ಗೇಟ್ ತೆರವು ಮಾಡಲಾಗಿದೆ. ಮುಂಭಾಗದಿಂದ ಒಳಬರುವ ಲಾರಿಗಳ ದಾಖಲೀಕರಣ ಸರಿಯಾಗಿ ಆಗುತ್ತಿಲ್ಲ…

    ಇಲ್ಲಿನ ಎಪಿಎಂಸಿ ಕಾರ್ಯದರ್ಶಿ ಸತೀಶಕುಮಾರ ಎತ್ತಂಗಡಿ ಆದ ತಕ್ಷಣವೇ ಎಪಿಎಂಸಿ ಆವರಣದಲ್ಲಿ ಕಂಡುಬಂದಿರುವ ಬದಲಾವಣೆಗಳು ಇವು. ಈ ಬದಲಾವಣೆಗಳೇ ಇದೀಗ ಕಾರ್ಯದರ್ಶಿ ಎತ್ತಂಗಡಿ ಹಿಂದಿನ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

    ಒತ್ತಾಯ ತಂದು ತೆರವು: ಎಪಿಎಂಸಿಗೆ ಮುಂಭಾಗ, ಹಿಂಭಾಗ ಸೇರಿ ಒಟ್ಟು 3 ದಾರಿಗಳಿದ್ದವು. ಈ ಹಿಂದೆ ಯಾವ ಕಾರ್ಯದರ್ಶಿ ಬಂದರೂ ಅವುಗಳನ್ನು ಬಂದ್ ಮಾಡಿರಲಿಲ್ಲ. ಆದರೆ, ಸತೀಶಕುಮಾರ ಅವರು ಕಾರ್ಯದರ್ಶಿಗಳಾಗಿ ಇಲ್ಲಿಗೆ ಬಂದ ನಂತರ ಎಪಿಎಂಸಿಗೆ ಸೇಸ್ (ಶುಲ್ಕ) ತುಂಬದೇ ಯಾವ ಲಾರಿಗಳು ಹೊರಗಡೆ ಹೋಗಬಾರದು ಎಂಬ ಕಾರಣಕ್ಕೆ ಮುಖ್ಯದ್ವಾರ ಹೊರತುಪಡಿಸಿ ಇನ್ನುಳಿದ ಎರಡು ಬಾಗಿಲುಗಳಿಗೆ ಅಡ್ಡಲಾಗಿ ಕಬ್ಬಿಣದ ಕಂಬ ಅಳವಡಿಸಿ ಲಾರಿಗಳು ಓಡಾಡದಂತೆ ಮಾಡಿದ್ದರು.

    ಆದರೆ, ಕೆಲ ಸದಸ್ಯರು, ವರ್ತಕರು, ರೈತರು ಉತ್ಪನ್ನ ತರಲು ತೊಂದರೆ ಆಗುತ್ತದೆ ಎನ್ನುವ ಕಾರಣ ನೀಡಿ ಸತೀಶಕುಮಾರ ಮೇಲೆ ಒತ್ತಡ ತಂದು, ಅವರು ರಜೆ ಹೋಗುವ ಮುನ್ನ ಹಿಂಬಾಗಿಲಿಗೆ ಅಳವಡಿಸಿದ ಕಬ್ಬಿಣದ ಕಂಬವನ್ನು ತೆರವುಗೊಳಿಸಿದ್ದಾರೆ. ‘ಇದನ್ನು ತಡೆಯುವಲ್ಲಿ ನಾನೂ ಸಹ ಹೆಲ್ಪ್​ಲೆಸ್ ಆಗಿದ್ದೇನೆ’ ಎಂದು ಸ್ವತಃ ಎಪಿಎಂಸಿ ಅಧ್ಯಕ್ಷ ಚಂದ್ರಶೇಖರಪ್ಪ ಕಳಸದ ಅವರು ‘ವಿಜಯವಾಣಿ’ಗೆ ತಿಳಿಸಿದರು.

    ಒಳಬರುವ ಲಾರಿಗಳಿಗಿಲ್ಲ ದಾಖಲೆ: ಕಾರ್ಯದರ್ಶಿ ಸತೀಶಕುಮಾರ ಇದ್ದಾಗ ಎಪಿಎಂಸಿಗೆ ಒಳಬರುವ-ಹೊರ ಹೋಗುವ ಲಾರಿಗಳ ದಾಖಲೀಕರಣ ಮಾಡಿಕೊಳ್ಳಲಾಗುತ್ತಿತ್ತು. ಸೆಸ್ ತುಂಬದೇ ಹೊರ ಹೋಗುವ ಲಾರಿಗಳಿಂದ ದಂಡ ಸಹ ವಸೂಲಿ ಮಾಡಲಾಗುತ್ತಿತ್ತು. ಆದರೀಗ ಒಳ ಬರುವ ಲಾರಿಗಳ ದಾಖಲೀಕರಣ ಕೈಬಿಡಲಾಗಿದೆ. ಹೊರ ಹೋಗುವ ಲಾರಿಗಳ ದಾಖಲೀಕರಣ ಮಾತ್ರ ಮಾಡಲಾಗುತ್ತಿದೆ ಎಂದು ಎಪಿಎಂಸಿ ಅಧಿಕಾರಿಗಳೇ ಹೇಳುತ್ತಿದ್ದಾರೆ. ಆದರೆ, ಒಳಬರುವ ಲಾರಿಗಳ ದಾಖಲೀಕರಣ ಏಕೆ ಮಾಡುತ್ತಿಲ್ಲ ಎಂದು ಕೇಳಿದರೆ, ಅಧಿಕಾರಿಗಳು ಉತ್ತರಿಸದೇ ಮೌನವಾಗುತ್ತಿದ್ದಾರೆ.

    ಎಪಿಎಂಸಿಗೆ ನಿತ್ಯವೂ ನೂರಾರು ಲಾರಿಗಳು ಬಂದು ಹೋಗುತ್ತವೆ. ಆದರೆ, ಸೋಮವಾರ ಮಧ್ಯಾಹ್ನದವರೆಗೆ ಕೇವಲ 42 ಹೊರ ಹೋಗುವ ಲಾರಿಗಳ ದಾಖಲೀಕರಣ ಮಾಡಿಕೊಳ್ಳಲಾಗಿದೆ. ಹಾಗಾದರೆ ಇನ್ನುಳಿದ ಲಾರಿಗಳು ಸೆಸ್​ನಿಂದ ತಪ್ಪಿಸಿಕೊಳ್ಳಲು ಎಪಿಎಂಸಿ ಹಿಂಭಾಗದ ಕಳ್ಳ ರಸ್ತೆ ಮೂಲಕ ಹೋಗುತ್ತಿವೆಯೇ ಎಂಬ ಅನುಮಾನ ಶುರುವಾಗಿದೆ.

    ಕಾರ್ಯದರ್ಶಿ ವಗಾವಣೆಗಾಗಿ ಸದಸ್ಯರು, ವರ್ತಕರು ಪಟ್ಟು ಹಿಡಿದಿದ್ದರು. ಕಾರ್ಯದರ್ಶಿಗಳಿಂದ ಇವರಿಗೆ ಸಮಸ್ಯೆ ಆಗುತ್ತಿದೆ ಎಂದೇ ಆಗ ಜನತೆ ನಂಬಿದ್ದರು. ಆದರೀಗ ಮಾರುಕಟ್ಟೆಯಲ್ಲಿ ಆಗಿರುವ ಬದಲಾವಣೆ ನೋಡಿದರೆ,

    ಎಲ್ಲೆಂದರಲ್ಲಿ ಮದ್ಯದ ಕಿಕ್: ಎಪಿಎಂಸಿ ಆವರಣದ ಎಲ್ಲೆಂದರಲ್ಲಿ ಹಾಡಹಗಲೇ ಮದ್ಯ ಸೇವಿಸಲಾಗುತ್ತಿದೆ. ಮದ್ಯ ಪ್ರಿಯರು ತಮಗಿಷ್ಟವಾದ ಜಾಗದಲ್ಲಿ ಮದ್ಯ ಸೇವಿಸಿ ಬಾಟಲ್, ಪ್ಯಾಕೆಟ್​ಗಳನ್ನು ಎಸೆದು ಹೋಗುತ್ತಿದ್ದಾರೆ. ಕುಡುಕರ ಕಾಟದಿಂದ ಮಹಿಳೆಯರು ಎಪಿಎಂಸಿ ಸುತ್ತ ಸುಳಿಯದಂತಾಗಿದೆ. ಆದರೆ, ಈಗಿನ ಅಧ್ಯಕ್ಷರು, ಅಧಿಕಾರಿಗಳು ಇದನ್ನು ಸರಿಪಡಿಸಲು ಸೂಕ್ತ ಕ್ರಮಕ್ಕೆ ಮುಂದಾಗದಿರುವುದು ಟೀಕೆಗೆ ಗುರಿಯಾಗುತ್ತಿದೆ. ಹಲವು ಅನುಮಾನಗಳು ಹುಟ್ಟಿವೆ.

    ವರ್ಗಾವಣೆಗೆ ತಡೆ: ಇಲ್ಲಿಯ ಎಪಿಎಂಸಿ ಕಾರ್ಯದರ್ಶಿ ಸತೀಶಕುಮಾರ ಅವರನ್ನು ಮೇ 29ರಂದು ಹುಬ್ಬಳ್ಳಿಗೆ ವರ್ಗಾವಣೆ ಮಾಡಲಾಗಿತ್ತು. ಆದರೆ, ಸಹಕಾರ ಸಚಿವರ ಆಪ್ತ ಕಾರ್ಯದರ್ಶಿ ಕೆ.ಎಸ್. ನವೀನ್ ಅವರು ಮೇ 30ರಂದು ಮುಂದಿನ ಆದೇಶದವರೆಗೆ ವರ್ಗಾವಣೆಯನ್ನು ತಡೆಹಿಡಿದು ಆದೇಶಿಸಿದ್ದಾರೆ.

    ನಾನು ಸರ್ಕಾರಿ ನೌಕರ. ರಾಣೆಬೆನ್ನೂರಿನಲ್ಲಿ ಕಾನೂನು ಪ್ರಕಾರ ಕೆಲಸ ಮಾಡಿದ್ದೇನೆ. ಈಗ ಬೇರೆಡೆ ಕೊಟ್ಟರೂ ಕಾನೂನು ಬದ್ಧವಾಗಿ ಕೆಲಸ ಮಾಡುತ್ತೇನೆ. ಸದ್ಯ ರಜೆಯಲ್ಲಿದ್ದೇನೆ.

    | ಸತೀಶಕುಮಾರಎಪಿಎಂಸಿ ಕಾರ್ಯದರ್ಶಿ

    ಎಪಿಎಂಸಿಯಲ್ಲಿನ ಈ ಹಿಂದಿನ ಸಿಸ್ಟಮ್ ಅನ್ನು ಬದಲಾವಣೆ ಮಾಡೋಕೆ ಆಗುತ್ತಿಲ್ಲ. ಹಿಂದಿನ ಬಾಗಿಲು ಓಪನ್ ಮಾಡಿಸಿದ್ದನ್ನು ಮತ್ತು ಒಳಬರುವ ಲಾರಿಗಳ ದಾಖಲೀಕರಣ ಕೈ ಬಿಟ್ಟಿದ್ದನ್ನು ನೋಡಿದರೆ, ಇದು ಸೆಸ್ ತುಂಬದೇ ಲಾರಿ ಕಳುಹಿಸಲು ಮಾಡಿಕೊಂಡ ಮಾರ್ಗ ಅಂತಾ ನನಗೆ ಮೇಲ್ನೋಟಕ್ಕೆ ಅನಿಸುತ್ತಿದೆ. ಎಪಿಎಂಸಿ ಕಾರ್ಯದರ್ಶಿ ವರ್ಗಾವಣೆ ಹಿಂದಿರುವ ಉದ್ದೇಶವೇ ಬೇರೆಯಿದೆ. ಇದರ ಹಿಂದೆ ಕಾಣದ ಕೈಗಳಿವೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾದರೆ ನಾನೊಬ್ಬನೇ ಇಲ್ಲ. ಸಮಿತಿಯಿದೆ. ಸದಸ್ಯರು ಇದ್ದಾರೆ. ನಾನೊಬ್ಬನೇ ಏನೂ ಮಾಡಲು ಸಾಧ್ಯ. ನಾನೂ ಒಂಥರಾ ಕೈಗೊಂಬೆಯಾಗಿದ್ದೇನೆ.

    | ಚಂದ್ರಶೇಖರಪ್ಪ ಕಳಸದ ಎಪಿಎಂಸಿ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts