More

    ಕೆಜಿಎಫ್​ನಲ್ಲಿ ಅಕ್ರಮ 140 ಸಿಲಿಂಡರ್ ವಶ; ರೀಫಿಲ್ಲಿಂಗ್ ದಂಧೆ ವಿರುದ್ಧ ಪೊಲೀಸರ ಕಾರ್ಯಾಚರಣೆ

    ಕೆಜಿಎಫ್: ಗೃಹಬಳಕೆ ಸಿಲಿಂಡರ್‌ಗಳ ಅಕ್ರಮ ರೀಫಿಲ್ಲಿಂಗ್ ದಂಧೆ ನಡೆಯುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಆಧಾರದ ಮೇಲೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಾಣಿಜ್ಯ ಬಳಕೆಯ 80, ಗೃಹಬಳಕೆಯ 60 ಸಿಲಿಂಡರ್ ಸೇರಿ ಒಟ್ಟು 140 ಸಿಲಿಂಡರ್‌ಗಳನ್ನು ವಶಪಡಿಸಿಕೊಂಡು ಆ್ಯಂಡರ್‌ಸನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ಕುಪ್ಪಂ ಮುಖ್ಯ ರಸ್ತೆಯ ಕಾಂಗ್ರೆಸ್ ಮುಖಂಡ ರಶೀದ್‌ಖಾನ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ರೀಫಿಲ್ಲಿಂಗ್ ದಂಧೆ ಅವ್ಯಾಹತವಾಗಿ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರ ಸಹಕಾರದೊಂದಿಗೆ ರೀಫಿಲ್ಲಿಂಗ್ ಅಡ್ಡೆಯ ಮೇಲೆ ದಾಳಿ ನಡೆಸಿ ಭಾರತ್ ಗ್ಯಾಸ್ ಕಂಪನಿಯ 51 ಕಮರ್ಷಿಯಲ್ ಸಿಲಿಂಡರ್, ಎಚ್‌ಪಿ ಕಂಪನಿಯ ಗೃಹ ಬಳಕೆಯ 50, ಕಮರ್ಷಿಯಲ್ 13, ಇಂಡೇನ್ ಕಂಪನಿಯ 10 ಕರ್ಮಷಿಯಲ್ ಸಿಲಿಂಡರ್‌ಗಳು, 10 ಖಾಲಿ ಗೃಹ ಬಳಕೆಯ ಸಿಲೆಂಡರ್‌ಗಳು, 4 ಗ್ಯಾಸ್ ರೀಫಿಲ್ಲಿಂಗ್ ಯಂತ್ರಗಳು, 2 ಗ್ಯಾಸ್ ತೂಕ ಮಾಡುವ ಯಂತ್ರಗಳು, ಒಂದು ಮೊಬೈಲ್ ೆನ್ ಹಾಗೂ ಒಂದು ಕ್ಯಾಂಟರ್ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಕೆಜಿಎಫ್​ನಲ್ಲಿ ಅಕ್ರಮ 140 ಸಿಲಿಂಡರ್ ವಶ; ರೀಫಿಲ್ಲಿಂಗ್ ದಂಧೆ ವಿರುದ್ಧ ಪೊಲೀಸರ ಕಾರ್ಯಾಚರಣೆ

    ಸುಸೈಪಾಳಂನ ಮದನ್‌ಸ್ವಾಮಿ ಎಂಬುವವರ ತಮ್ಮ ವೆಂಕಟೇಶ್ ಹಾಗೂ ಕಾಂಗ್ರೆಸ್ ಮುಖಂಡ ರಶೀದ್‌ಖಾನ್ ಮಗ ನೌಷದ್ ಕೆಜಿಎಫ್ ನಗರದ ಎಚ್.ಪಿ ಹಾಗೂ ಇತರ ಗ್ಯಾಸ್ ಡೀಲರ್‌ಗಳ ಬಳಿ ಗೃಹಬಳಕೆ ಸಿಲಿಂಡರ್‌ಗಳನ್ನು ಮಾರುಕಟ್ಟೆ ದರಕ್ಕಿಂತ 200 ರೂ. ಹೆಚ್ಚಿಗೆ ಕೊಟ್ಟು ಗ್ಯಾಸ್ ರೀಫಿಲ್ಲಿಂಗ್ ಮಾಡಿ ಬೆಂಗಳೂರು ನಗರದಲ್ಲಿ ಹೋಟೆಲ್ ಮತ್ತು ಇತರೆಡೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.

    ಸಾರ್ವಜನಿಕ ಸ್ಥಳದಲ್ಲಿ ರೀಫಿಲ್ಲಿಂಗ್
    ನಗರದ ಪಾರಂಡಹಳ್ಳಿ ರಸ್ತೆ, ಸ್ವರ್ಣಕುಪ್ಪಂ, ಸಲ್ಡಾನ್ಹಾ ವೃತ್ತ, 4ನೇ ಬ್ಲಾಕ್ ಉರಿಗಾಂ ರಸ್ತೆ ಸೇರಿದಂತೆ ಅನೇಕ ಕಡೆ ಪ್ರತಿನಿತ್ಯ ಆಟೋ ರಿಕ್ಷಾಗಳಿಗೆ ರಾಜರೋಷವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ವಿಪರ್ಯಾಸದ ಸಂಗತಿಯಾಗಿದೆ. ಪ್ರತಿ ದಿನ ಸಾವಿರಾರು ಜನರು ಓಡಾಡುವ ರಸ್ತೆ, ವಸತಿ ಪ್ರದೇಶಗಳಲ್ಲಿ ಗ್ಯಾಸ್ ರೀಫಿಲ್ಲಿಂಗ್ ಅಪಾಯಕಾರಿ ಎಂದು ತಿಳಿದಿದ್ದರೂ ಸಂಬಂಧಪಟ್ಟವರು ಏಕೆ ಕ್ರಮ ಕೈಗೊಂಡಿಲ್ಲವೆಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ. ಅಧಿಕಾರಿಗಳ ಸಹಕಾರ ಇಲ್ಲದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಿಲಿಂಡರ್‌ಗಳ ದಂಧೆ ನಡೆಯಲು ಹೇಗೆ ಸಾಧ್ಯವೆಂದು ಸಾರ್ವಜನಿಕರ ಪ್ರಶ್ನಿಸುತ್ತಿದ್ದಾರೆ.

    ನಿಯಮ ಗಾಳಿಗೆ
    ನಗರದಿಂದ 5 ಕಿ.ಮೀಟರ್ ದೂರದಲ್ಲಿ ಗ್ಯಾಸ್ ಸಿಲಿಂಡರ್ ದಾಸ್ತಾನು ಮಾಡಬೇಕೆಂದು ಸರ್ಕಾರದ ನಿಯಮವಿದ್ದರೂ ಕೆಜಿಎಫ್ ನಗರದ ಗ್ಯಾಸ್ ಡೀಲರ್‌ಗಳು ನಿಯಮ ಪಾಲನೆ ಮಾಡುತ್ತಿಲ್ಲ. ನಗರದಲ್ಲಿ ಎರಡು ಕಿ.ಮೀ.ವ್ಯಾಪ್ತಿಯಲ್ಲಿ ಗ್ಯಾಸ್ ಸಿಲೆಂಡರ್ ಗೋಡನ್‌ಗಳಿದ್ದು ಅಗ್ನಿ ಅವಘಡಗಳು ಏನಾದರೂ ಉಂಟಾದಲ್ಲಿ ಸಂಭವಿಸಬಹುದಾದ ಹಾನಿಗೆ ಯಾರು ಹೊಣೆ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.

    ಅಕ್ರಮ ಸಿಲಿಂಡರ್ ರೀಫಿಲ್ಲಿಂಗ್ ಮಾಡುವುದು ಕಾನೂನುಬಾಹಿರ ಈಗಾಗಲೇ ಆ್ಯಂಡರ್‌ಸನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಂಧೆಕೋರರನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
    ಶಾಂತರಾಜು, ಪೊಲೀಸ್ ವರಿಷ್ಠಾಧಿಕಾರಿ, ಕೆಜಿಎಫ್

    ಖಚಿತ ಮಾಹಿತಿಯನ್ನು ಆಧರಿಸಿ ಆ್ಯಂಡರ್ ಸನ್‌ಪೇಟೆಯ ರಷೀದ್ ಖಾನ್ ಅವರ ಜಮೀನಿನ ಶೆಡ್ ಒಂದರ ಮೇಲೆ ದಾಳಿ ನಡೆಸಿದಾಗ ಅಕ್ರಮ ರೀಫಿಲ್ಲಿಂಗ್ ದಂಧೆ ಕಂಡುಬಂತು. ಸ್ಥಳದಲ್ಲಿ ಒಟ್ಟು 140 ಸಿಲೆಂಡರ್‌ಗಳು ಪತ್ತೆಯಾಗಿದ್ದು ಎಲ್ಲವನ್ನು ವಶಪಡಿಸಿಕೊಂಡಿದ್ದೇವೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
    ಮಲ್ಲಿಕಾರ್ಜುನ್, ಉಪ ನಿರ್ದೇಶಕ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕೆಜಿಎಫ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts