More

    ಕನ್ನಡ ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ

    ಇಳಕಲ್ಲ: ನಾಡಿನ ಹಿರಿಯ ಸಾಹಿತಿಗಳು, ಶರಣರು, ಸೂಫಿ-ಸಂತರ ಕೊಡುಗೆಯಿಂದಾಗಿ ಕನ್ನಡ ಶ್ರೀಮಂತ ಭಾಷೆಯಾಗಿದೆ. ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗರದ್ದಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

    ಪಟ್ಟಣದ ಎಸ್. ಗೊಂಗಡಶೆಟ್ಟಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಹಾಗೂ ಇಳಕಲ್ಲ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಶನಿವಾರ ಹಮ್ಮಿಕೊಂಡಿದ್ದ 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ-2020 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಇಂತಹ ಸಮ್ಮೇಳನಗಳ ಮೂಲಕ ಭಾರತೀಯ ಸಂಸ್ಕೃತಿ, ಆಚಾರ ವಿಚಾರಗಳನ್ನು ಎಲ್ಲರ ಮನಸ್ಸಿನಲ್ಲಿ ತುಂಬುವ ಕಾಯಕ ಮೇಲಿಂದ ಮೇಲೆ ನಡೆಯಬೇಕು. ಭಾಷೆ, ನೆಲ, ಜಲ, ಗಡಿ ಸಮಸ್ಯೆಗಳು ಬಂದಾಗ ಎಲ್ಲರೂ ಒಗ್ಗಟ್ಟಿನಿಂದ ಹೋರಾಡಬೇಕು ಎಂದರು.

    ತಾಲೂಕಿನ ಹನಿ ನೀರಾವರಿ ಯೋಜನೆ ಕಳಪೆ ಕಾಮಗಾರಿಯಾಗಿದ್ದು, ಅದನ್ನು ತನಿಖೆಗೆ ಒಳಪಡಿಸಬೇಕೆಂದು ಒತ್ತಾಯಿಸಿದಾಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ತನಿಖೆಗೆ ಆದೇಶ ಮಾಡಿದ್ದಾರೆ. ತಾಲೂಕಿನ ಕೆರೆ ತುಂಬುವ ಯೋಜನೆಗೆ ಟೆಂಡರ್ ಕೂಡ ಕರೆಯಲಾಗಿದ್ದು, ಶೀಘ್ರ ಮುಖ್ಯಮಂತ್ರಿ ಅವರು ಚಾಲನೆ ನೀಡುವರು. ಕಸಾಪದ ಎಲ್ಲ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡಲಾಗುವುದು ಎಂದರು.

    ಎಸ್‌ಆರ್‌ಎನ್‌ಇ ೌಂಡೇಷನ್ ಅಧ್ಯಕ್ಷ ಎಸ್.ಆರ್. ನವಲಿಹಿರೇಮಠ ಅವರು ವಿವಿಧ ಲೇಖಕರ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ಸರ್ಕಾರ ಪ್ರತಿ ಶಾಲೆಯಲ್ಲಿ ಸುಸಜ್ಜಿತ ಆಧುನಿಕ ಸೌಲಭ್ಯವುಳ್ಳ ಕೊಠಡಿಗಳನ್ನು ನಿರ್ಮಿಸಿ ಅದಕ್ಕೆ ತಕ್ಕಂತೆ ಶಿಕ್ಷಕರನ್ನು ನೇಮಿಸಿದರೆ ಮಾತ್ರ ಸರ್ಕಾರಿ ಶಾಲೆಗಳು ಉಳಿಯಲು ಸಾಧ್ಯ ಎಂದರು.

    ಸಮ್ಮೇಳನಾಧ್ಯಕ್ಷ ಜಿ.ಎಚ್. ಹನ್ನೆರಡುಮಠ ಮಾತನಾಡಿ, ಮಹಾಂತ ಶಿವಯೋಗಿಗಳು ಜೀವನ ಪರಿಯಂತ ವಚನ ಕಟ್ಟುಗಳನ್ನು ಬೆನ್ನಿಗೆ ಕಟ್ಟಿಕೊಂಡು ಕನ್ನಡ ಅಕ್ಷರ ತೇರನ್ನು ಆ ಕಾಲದಲ್ಲೇ ಎಳೆದರು. ಕನ್ನಡಕ್ಕೆ ಅರ್ಥಪೂರ್ಣವಾದ ವೇದಿಕೆಯನ್ನು ರಾಜ್ಯಾದ್ಯಾಂತ ನಿರ್ಮಿಸಿದ ಮಾಜಿ ಎಸ್.ಆರ್. ಕಂಠಿ ಅವರು ಇದೇ ನೆಲದವರು ಎಂದು ಹೇಳಲು ಹೆಮ್ಮೆ ಎನ್ನಿಸುತ್ತಿದೆ ಎಂದು ಹೇಳಿದರು.

    ಬಸವ ಸೇವಾ ಸಮಿತಿ ಅಧ್ಯಕ್ಷ ಶಿವರುದ್ರಪ್ಪ ಗೊಂಗಡಶೆಟ್ಟಿ ಅವರು ಪುಸ್ತಕಗಳ ಮಳಿಗೆ ಹಾಗೂ ಗ್ರಾನೈಟ್ ಉದ್ಯಮಿ ಪ್ರವೀಣ ಹೂಲಗೇರಿ ಅವರು ಕಲಾ ಮಳಿಗೆಗಳನ್ನು ಉದ್ಘಾಟಿಸಿದರು. ನಂದವಾಡಗಿಯ ಮಹಾಂತಲಿಂಗ ಶಿವಾಚಾರ್ಯರು, ಇಳಕಲ್ಲದ ಗುರುಮಹಾಂತ ಶ್ರೀಗಳು, ಶಿರೂರಿನ ಡಾ.ಬಸವಲಿಂಗ ಶ್ರೀಗಳು, ಮಾಜಿ ಶಾಸಕ ಎಸ್.ಜಿ. ನಂಜಯ್ಯನಮಠ, ಸಿದ್ದಾರ್ಥ ಪ್ರೌಢಶಾಲೆ ಚೇರ್ಮನ್ ಸಿದ್ದಣ್ಣ ಆಮದಿಹಾಳ, ದಿಲೀಪ ದೇವಗಿರಿಕರ, ಡಾ.ಶಂಭು ಬಳಿಗಾರ, ಗುರುದಾಸ ನಾಗಲೋಟಿ, ಎಂ.ವಿ. ಪಾಟೀಲ, ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ, ಕೇಶವ ಕಂದಿಕೊಂಡ ಸೇರಿ ಜಿಲ್ಲಾ ಹಾಗೂ ತಾಲೂಕು ಕಸಾಪ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು. ಕಸಾಪ ತಾಲೂಕು ಅಧ್ಯಕ್ಷ ಸಂಗಣ್ಣ ಗದ್ದಿ ಸ್ವಾಗತಿಸಿದರು.

    ಕೂಡಲಸಂಗಮದಲ್ಲಿ ಬರುವ ಏಪ್ರಿಲ್ ಅಥವಾ ಮೇದಲ್ಲಿ ಅಖಿಲ ಭಾರತ ನಡುಗನ್ನಡ ಸಮ್ಮೇಳನ ಹಮ್ಮಿಕೊಳ್ಳುವುದು ಕಸಾಪ ಆಸೆಯಾಗಿದೆ. ಅದಕ್ಕೆ ಶಾಸಕರು, ಇತರ ಜನಪ್ರತಿನಿಧಿಗಳು, ಅಧಿಕಾರಿಗಳು ಸೇರಿ ಎಲ್ಲರ ಸಹಕಾರ ಅಗತ್ಯ.
    – ಶ್ರೀಶೈಲ ಕರಿಶಂಕರಿ ಕಸಾಪ ಜಿಲ್ಲಾಧ್ಯಕ್ಷ

     
     
     
     
     
     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts