More

    ಒಗ್ಗಟ್ಟಾಗಿ ಹೋರಾಟ ನಡೆಸಿದರೆ ಜಯ

    ಧಾರವಾಡ: ಸಮಾಜದ ಎಲ್ಲ ಉಪಜಾತಿಗಳು ಸೇರಿ ಒಂದೇ ವೇದಿಕೆಯಲ್ಲಿ ಹೋರಾಟ ನಡೆಸಬೇಕು. ಅಂದಾಗ ಮಾತ್ರ ನಮ್ಮ ಹೋರಾಟಕ್ಕೆ ಯಶಸ್ಸು ಸಿಗಲು ಸಾಧ್ಯ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

    ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ಮಾದರ ಪದವೀಧರ ಸಂಘದ ಉದ್ಘಾಟನೆ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಸಂಘದ ಫಲಕ ಅನಾವರಣಗೊಳಿಸಿ ಅವರು ಮಾತನಾಡಿದರು.

    ಕೇವಲ ಸಂಘದ ಸ್ಥಾನ ಮಾನಕ್ಕಾಗಿ ಹೋರಾಟ ನಡೆಸದೆ ಸಮಾಜದ ಉದ್ಧಾರಕ್ಕಾಗಿ ಹೋರಾಡುವುದು ಮುಖ್ಯ. ಸರ್ಕಾರ ನೀಡುವ ಯೋಜನೆಗಳನ್ನು ಸಮಾಜದ ಜನರಿಗೆ ಕೊಡಿಸುವ ಕೆಲಸವೂ ಆಗಬೇಕು. ನಮ್ಮ ಸರ್ಕಾರ ಸಾಮಾಜಿಕ ನ್ಯಾಯಕ್ಕಾಗಿ ಸದಾ ಬದ್ಧ ಎಂದರು.

    ಸಂಸದ ಎ. ನಾರಾಯಣಸ್ವಾಮಿ ಮಾತನಾಡಿ, ಸಮಾಜದಲ್ಲಿ ಹತ್ತು ಹಲವು ಸಂಘಟನೆ ಪ್ರಾರಂಭಿಸಿ ಹೋರಾಟ ನಡೆಸುವ ಬದಲು, ಒಂದೇ ಸಂಘಟನೆ, ಒಬ್ಬ ನಾಯಕನ ನೇತೃತ್ವದಲ್ಲಿ ಹೋರಾಟ ನಡೆಸಬೇಕು ಎಂದರು.

    ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಚಿವ ಆರ್.ಬಿ. ತಿಮ್ಮಾಪುರ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್. ಹನುಮಂತಪ್ಪ ಮಾತನಾಡಿದರು. ಹಿರಿಯೂರು ಆದಿಜಾಂಬವ ಮಠದ ಶ್ರೀ ಷಡಕ್ಷರಿಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಘದ ಅಧ್ಯಕ್ಷ ಸಿ.ಬಿ. ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು.

    ನಿಗಮ ಮಂಡಳಿಗಳ ನೂತನ ಅಧ್ಯಕ್ಷರಾದ ಎಂ. ಶಿವಣ್ಣ, ಎಚ್. ಹನುಮಂತಪ್ಪ, ದುರ್ಯೋಧನ ಐಹೊಳೆ, ಲಿಂಗಣ್ಣ, ಎಚ್. ಹನುಮಂತಪ್ಪ, ಯಲ್ಲಪ್ಪ ಬೆಂಡಿಗೇರಿ, ಸವಿತಾ ಅಮರಶೆಟ್ಟಿ, ಈರಣ್ಣ ಜಡಿ ಹಾಗೂ ಎಸ್ಸೆಸ್ಸೆಲ್ಸಿ, ಪಿಯು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

    ಶಾಸಕ ಶಂಕರ ಪಾಟೀಲ ಮುನೇನಕೊಪ್ಪ, ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ವೆಂಕಟೇಶ ದೊಡ್ಡೇರಿ, ಗಣೇಶ ಪೂಜಾರ, ಡಾ. ಎನ್.ವೈ. ಮಟ್ಟಿಹಾಳ, ಸುರೇಶ ಕೋಟೂರ, ಎಸ್.ಎನ್. ಬಿದರಳ್ಳಿ, ಎಂ.ವೈ. ಬ್ಯಾಲಾಳ, ಬಸವರಾಜ ಪೂಜಾರ, ಸಂಘದ ಪದಾಧಿಕಾರಿಗಳು, ಇತರರು ಇದ್ದರು.

    ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರು ಹುಲೇನ್ನವರ ಸ್ವಾಗತಿಸಿದರು. ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ನಮ್ಮ ಸಮಾಜ ಸಂಘಟಿತವಾಗದ ಕಾರಣಕ್ಕೆ ಸರ್ಕಾರ ನಮ್ಮ ಬೇಡಿಕೆಗಳಿಗೆ ಕಿವಿಗೊಡುತ್ತಿಲ್ಲ. ಸದಾಶಿವ ಆಯೋಗದ ವರದಿ ಜಾರಿಗೆ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ನಾವೆಲ್ಲ ಒಗ್ಗಟ್ಟಾಗಿ ಹೋರಾಡಿದಾಗ ಮಾತ್ರ ಸರ್ಕಾರಕ್ಕೆ ಒಂದು ಒಳ್ಳೆ ಸಂದೇಶ ನೀಡುವ ಜತೆಗೆ, ನಮ್ಮ ಬೇಡಿಕೆ ಈಡೇರಿಸಿಕೊಳ್ಳಲು ಸಾಧ್ಯ.
    | ಎಲ್. ಹನುಮಂತಯ್ಯ, ರಾಜ್ಯಸಭಾ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts