More

    ಎಣ್ಣೆ, ತುಪ್ಪ ತಿಂದರೆ ಬೊಜ್ಜು ಬರುತ್ತೆ ಅಂತ ಹೇಳ್ತಾರೆ; ಆದರೆ ಅವುಗಳಿಂದಲೇ ದೇಹದ ಬೊಜ್ಜು ಕರಗಿಸಲು ಸಾಧ್ಯ!

    ಡಾ. ಗಿರಿಧರ ಕಜೆ

    ಮನೆಯಲ್ಲಿ ಯಾರಿಗಾದರೂ ಅರಶಿನ ಕಾಮಾಲೆ ರೋಗ ಬಂದರೆ ಮನೆಯ ಹಿರಿಯರು ತುಪ್ಪ, ಎಣ್ಣೆಯಂತಹ ಜಿಡ್ಡು ಪದಾರ್ಥಗಳ ನೆರಳೂ ರೋಗಿಗೆ ಸೋಕದ ರೀತಿಯಲ್ಲಿ ಕಟ್ಟೆಚ್ಚರ ವಹಿಸುತ್ತಾರೆ. ಜಿಡ್ಡಿನ ಅಂಶದ ಬಳಕೆ ಯಕೃತ್‌ನ ಯಾವುದೇ ಕಾಯಿಲೆ ಇದ್ದಾಗಲೂ ಬೇಡವೆಂಬ ಆಯುರ್ವೇದದ ಮಾಹಿತಿ ಜನಪದರಲ್ಲಿ ಸೇರಿ ಪರಂಪರಾಗತವಾಗಿ ಹರಿದು ಬಂದಿದೆ. ಅಕ್ಷರಾಭ್ಯಾಸವೇ ಇಲ್ಲದ, ಯಾವುದೋ ಹಳ್ಳಿಯ ಮೂಲೆಯಲ್ಲಿ ವಾಸಿಸುತ್ತಿರುವ ಹಿರಿಯರಿಗೆ ಇದೆಲ್ಲ ತಿಳಿದಿದೆಯೆಂಬುದು ಆಯುರ್ವೇದದ ಆರೋಗ್ಯಕರ ಮಾಹಿತಿ ಹೇಗೆ ದೇಶಪೂರ್ತಿ ಪಸರಿಸಿತ್ತು ಎಂಬುದಕ್ಕೆ ನೇರ ನಿದರ್ಶನ.

    ಇಲ್ಲೊಂದು ಅಚ್ಚರಿಯ ವಿಷಯವನ್ನು ಗಮನಿಸಲೇಬೇಕು. ಕಾಮಾಲೆ ಚಿಕಿತ್ಸೆಗೆ ಹಲವಾರು ಔಷಧಗಳನ್ನು ಆಯುರ್ವೇದ ವಿವರಿಸಿದೆ. ಅದರಲ್ಲಿ ಹದಿನೈದಕ್ಕೂ ಹೆಚ್ಚು ಔಷಧೀಯ ತುಪ್ಪಗಳನ್ನೂ ಉಪದೇಶಿಸಲಾಗಿದೆ! ಆರ್ದ್ರಕ ಘೃತ, ಅಶೋಕ ಘೃತ, ಬೃಹತ್ ಶತಾವರಿ ಘೃತ, ದಾಡಿಮಾದ್ಯ ಘೃತ, ದಂತಿ ಘೃತ, ದ್ರಾಕ್ಷಾದಿ ಘೃತ, ಹರಿದ್ರಾದಿ ಘೃತ, ಕಾಮದೇವ ಘೃತ, ಕಲ್ಯಾಣಕ ಘೃತ, ಕಟುಕಾದ್ಯ ಘೃತ, ಮಹಾತಿತ್ತಕ ಘೃತ, ಪಂಚಗವ್ಯ ಘೃತ, ಪಟೋಲಾದಿ ಘೃತ, ಪಥ್ಯ ಘೃತ, ರೋಹಿತಕ ಘೃತ, ತ್ರಿಫಲಾ ಘೃತ ಹೀಗೆ ಪಟ್ಟಿ ಉದ್ದಗೆ ಸಾಗುತ್ತದೆ! ಇಲ್ಲಿ ತುಪ್ಪದ ಬಳಕೆ ಸಲ್ಲದು ಎಂಬ ವಿಚಾರವನ್ನೂ ಆಯುರ್ವೇದ ಎಂದೋ ಹೇಳಿದೆ, ಇಂದಿನ ಆಧುನಿಕ ವೈದ್ಯಲೋಕಕ್ಕೂ ತಿಳಿದಿದೆ. ಜಿಡ್ಡಿನ ಉಪಯೋಗ ಅಪಥ್ಯ ಎಂದು ಗೊತ್ತಿದ್ದೂ ಅದು ಹೇಗೆ ಔಷಧೀಯ ತುಪ್ಪವನ್ನು ಅದೇ ರೋಗವನ್ನು ಗುಣಪಡಿಸಲು ನೀಡಬಹುದೆಂದು ಹೇಳಿದ್ದರ ಹಿಂದೆ ಕೌತುಕವೊಂದು ಮಿಳಿತವಾಗಿದೆ. ಬೆಂಕಿಯನ್ನು ಬೆಂಕಿಯಿಂದಲೇ ನಂದಿಸುವಂತಹ ಕಾರ್ಯಶೈಲಿಯಿದೆ!

    ಈ ಔಷಧೀಯ ತುಪ್ಪಗಳನ್ನು ವಿಶ್ಲೇಷಿಸಿದರೆ ಅದರಲ್ಲಿರುವುದು ತುಪ್ಪವೇ! ಆದರೆ ಅದರ ತಯಾರಿಯಲ್ಲಿ ಬಳಸಲಾಗುವ ಹಲವಾರು ಔಷಧೀಯ ಸಸ್ಯಗಳಿಂದಾಗಿ ಬಣ್ಣ, ವಾಸನೆಗಳು ಬದಲಾಗಿರುತ್ತದೆ. ಬಹುತೇಕ ತುಪ್ಪಗಳು ಸೇವಿಸಲು ಸಾಧ್ಯವಾಗದಷ್ಟು ಕಹಿಯೋ, ಒಗರೋ ಆಗಿರುತ್ತದೆ. ಏಕೆಂದರೆ ಅದು ಆಹಾರವಲ್ಲ, ಔಷಧ! ಇಲ್ಲಿ ತುಪ್ಪದೊಳಗೆ ಅವಿತು ಕುಳಿತಿರುವ ಸಸ್ಯಗಳು ಮಾಡಿರುವ ಕರಾಮತ್ತು ಊಹೆಗೂ ನಿಲುಕದ್ದು. ಔಷಧೀಯ ತುಪ್ಪದಲ್ಲಿ ಕೇವಲ ಐದು ಶೇಕಡಾದಷ್ಟು ಪ್ರಮಾಣದಲ್ಲಿರುವ ಸಸ್ಯಗಳು ತುಪ್ಪದ ಜಿಡ್ಡಿನ ಗುಣವನ್ನು ನಗಣ್ಯ ಮಾಡಿ ತಾವೇ ಕಾರ್ಯಭಾರ ಮಾಡುವುದೆಂದರೇನು?! ಇವೆಲ್ಲವನ್ನು ಕಂಡುಕೊಂಡ ರೀತಿ ಹೇಗೆಂಬುದೇ ಯಕ್ಷಪ್ರಶ್ನೆ.

    ಸುಮಾರು ಮೂರು ದಶಕಗಳ ಹಿಂದೆ ರಾಜ್ಯದ ಪ್ರಸಿದ್ಧ ಫಾರ್ಮಸಿ ಕಾಲೇಜೊಂದರಲ್ಲಿ ನಡೆದ ಪ್ರಯೋಗವೊಂದು ಸಸ್ಯಗಳ ಕಾರ್ಯದಕ್ಷತೆಯ ವಿಚಾರದಲ್ಲಿ ಕುತೂಹಲಕಾರಿ ಅಂಶಗಳನ್ನು ಹೊರಚೆಲ್ಲಿದೆ. ಆ ಪ್ರದೇಶದ ಹಳ್ಳಿಯ ಜನರು ಚಕ್ರಮರ್ದ ಎಂಬ ಸಸ್ಯವನ್ನು ಇಡಿಯಾಗಿ ಬಳಸಿಕೊಂಡು ಕಷಾಯ ಮಾಡಿ ಟೈಫಾಯ್ಡ ಜ್ವರ ಗುಣಪಡಿಸಿಕೊಳ್ಳುತ್ತಿದ್ದರು. ಕನ್ನಡದಲ್ಲಿ ತಗಚೆ ಎನ್ನಲಾಗುವ ಆ ಸಸ್ಯಕ್ಕೆ ಅಂತಹ ಶಕ್ತಿಯಿರುವುದು ವೈಜ್ಞಾನಿಕವಾಗಿಯೂ ನಿಜವೇ. ಅದರಲ್ಲಿರುವ ಮುಖ್ಯ ರಾಸಾಯನಿಕ ಘಟಕಾಂಶಗಳನ್ನು ಪ್ರತ್ಯೇಕಿಸಿ ಪ್ರಯೋಗಾಲಯದಲ್ಲಿ ಟೈಫಾಯ್ಡ ರೋಗಾಣುಗಳ ಮೇಲೆ ಹರಿಯಬಿಟ್ಟರೆ ಪರಿಣಾಮ ಶೂನ್ಯ! ತಾಜಾ ಗಿಡವನ್ನು ಪೂರ್ತಿಯಾಗಿ ಔಷಧವಾಗಿಸಿ ನೀಡಿದರೆ ರೋಗ ಸಂಪೂರ್ಣ ನಾಶ!! ರಾಸಾಯನಿಕಗಳು ಸೋಲುವುದು, ಸಸ್ಯಗಳು ಗೆಲ್ಲುವುದೇ ಇಲ್ಲಿ.

    ಈ ರೀತಿಯಲ್ಲಿ ಸಸ್ಯಗಳು ವೈದ್ಯವಿಜ್ಞಾನಕ್ಕೆ ಬಿಡಿಸಲಾಗದ ಕಗ್ಗಂಟಾಗಿವೆ. ಒಂದೇ ಸಸ್ಯವು ಹಲವಾರು ವಿಧದ ರೋಗಗಳಲ್ಲಿ ವಿಭಿನ್ನ ಸೂಕ್ಷ್ಮರೋಗಾಣುಗಳ ಮೇಲೆ ಕಾರ್ಯ ಎಸಗುವುದೂ ಗುಣಧರ್ಮಗಳ ಇನ್ನೊಂದು ಹಂತದ ಉತ್ಕೃಷ್ಟತೆ. ಉದಾಹರಣೆಗೆ ಅರಿಶಿನ ಅಥವಾ ಕಹಿಬೇವು. ಯಾವುದೇ ವೈರಾಣುಗಳಿರಲಿ, ಬ್ಯಾಕ್ಟೀರಿಯಾ ಇರಲಿ, ಶಿಲೀಂಧ್ರ ಆಗಿರಲಿ, ಪ್ರೊಟೊಜೋವಾ ಇರಲಿ ಅಥವಾ ಪಾಚಿಯೇ ಆಗಿರಲಿ ಬಹುಮುಖಿಯಾಗಿ ಕಾರ್ಯವೆಸಗುವ ದಕ್ಷತೆಯನ್ನು ಅವು ಹೊಂದಿವೆೆ. ನಾಲ್ಕಾರು ಬಿಡಿ, ಎರಡು ವಿಧವಾದ ಸೂಕ್ಷ್ಮಜೀವಿಗಳ ಮೇಲೆ ಕಾರ್ಯವೆಸಗಬಲ್ಲ ಒಂದೇ ಒಂದು ರಾಸಾಯನಿಕ ಔಷಧವೂ ಸಿಗುವುದಿಲ್ಲ! ಮನುಷ್ಯರು ನೂರಾರು ಪೀಳಿಗೆ ದಾಟಿ ಬಂದರೂ ಅದೇ ಔಷಧ ಇನ್ನೂ ಚೆನ್ನಾಗಿ ಕೆಲಸ ಮಾಡುತ್ತದೆ, ಆದರೆ ರಾಸಾಯನಿಕ ಔಷಧಗಳ ಅನೇಕ ಪೀಳಿಗೆಗಳನ್ನು ಒಂದೇ ಜನ್ಮದಲ್ಲಿ ಕಾಣಬೇಕಾಗುತ್ತದೆ. ತೈಲಗಳಿಂದ ದೇಹದ ಕೊಬ್ಬು ಹೆಚ್ಚಾಗುತ್ತದೆ ಎಂಬುದೂ ತಿಳಿದಿರುವ ವಿಚಾರ. ಆದರೆ ಲವಣ ತೈಲ, ಮೇದಾಂತಕ ತೈಲ, ಸೈಂಧವ ತೈಲ, ಮೂರ್ಛಿತ ತಿಲತೈಲಗಳಂತಹ ಔಷಧೀಯ ಎಣ್ಣೆಗಳನ್ನು ಬಳಸಿ ಬೊಜ್ಜು ಕರಗಿಸಬಹುದೆಂದರೆ ಆಶ್ಚರ್ಯವಾಗುತ್ತದೆ. ಇಲ್ಲೂ ಔಷಧೀಯ ತೈಲದಲ್ಲಿರುವ ಸಸ್ಯದ ಭಾಗ ಚಿಕ್ಕದಾಗಿದ್ದರೂ ತೈಲವನ್ನೇರಿ ರಾಜ್ಯಭಾರ ಮಾಡುವ ಸಸ್ಯಗಳ ಹಾಗೂ ಅವುಗಳನ್ನು ಅನ್ವೇಷಿಸಿದ ಋಷಿಗಳಿಗೆ ದೊಡ್ಡ ಸಲಾಮ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts