More

    ರೈತ ಮಕ್ಕಳ ಸಮಸ್ಯೆ ಬಗೆಹರಿಸದಿದ್ದಲ್ಲಿ ಪ್ರತಿಭಟನೆ ತೀವ್ರ

    ಮೈಸೂರು: ಭೂಮಿ ಕಳೆದುಕೊಂಡವರಿಗೆ ನಂಜನಗೂಡು ತಾಲೂಕು ಬಣ್ಣಾರಿ ಅಮ್ಮನ್ ಸಕ್ಕರೆೆ ಕಾರ್ಖಾನೆ ಆಡಳಿತ ಮಂಡಳಿ ಒಪ್ಪಂದದಂತೆ ಕೆಲಸ ನೀಡದ ಕುರಿತು ನಡೆಯುತ್ತಿರುವ ಹೋರಾಟ 91 ದಿನ ಕಳೆದಿದ್ದು, ಸಮಸ್ಯೆ ಬಗೆಹರಿಸದಿದ್ದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಕೆಐಎಡಿಬಿಗೆ ಭೂಮಿ ನೀಡಿದ ರೈತರ ಹಕ್ಕುಗಳ ಹೋರಾಟ ಸಮಿತಿ ಎಚ್ಚರಿಸಿದೆ.
    ಕಾರ್ಖಾನೆ ನಿರ್ಮಾಣಕ್ಕಾಗಿ 1992ರಲ್ಲಿ ರೈತರಿಂದ 326 ಎಕರೆ ಭೂಮಿ ಪಡೆಯಲಾಗಿದ್ದರೂ, ಒಪ್ಪಂದದಂತೆ ಭೂಮಿ ಕಳೆದುಕೊಂಡ ರೈತರ ಕುಟುಂಬದವರಿಗೆ ಕೆಲಸ ನೀಡಿಲ್ಲ. 2008ರಲ್ಲಿ ಇದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದಾಗ 15 ಜನರಿಗೆೆ ಕಾಯಂ ಉದ್ಯೋಗ ನೀಡಲಾಯಿತು. ಆದರೆ, ಇನ್ನೂ ಹಲವಾರು ಕುಟುಂಬಗಳು ವಂಚಿತವಾಗಿವೆ ಎಂದು ಹೋರಾಟ ಸಮಿತಿ ಮುಖಂಡ ಉಗ್ರ ನರಸಿಂಹೇಗೌಡ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಈ ಸಂಬಂಧ ಕಳೆದ ಸೆಪ್ಟೆಂಬರ್‌ನಲ್ಲಿ ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸಿಇಒ ನೇತೃತ್ವದಲ್ಲಿ ನಡೆದ ಸಭೆ ವೇಳೆ ಕೆಲಸ ನೀಡಲು ಸೂಚಿಸಲಾಯಿತು. ಆದರೂ ಕಾರ್ಖಾನೆ ಪಾಲಿಸಲಿಲ್ಲ. ಅಕ್ಟೋಬರ್‌ನಲ್ಲಿ ಕಾರ್ಖಾನೆ ಎದುರು ಪ್ರತಿಭಟನೆ ನಡೆಸಲಾಯಿತು. ಅಲ್ಲದೆ ಡಿಸೆಂಬರ್‌ನಲ್ಲಿ ನಡೆದ ಕೈಗಾರಿಕಾ ಅದಾಲತ್ ವೇಳೆ ಕೂಡಲೇ ಕೆಲಸ ನೀಡುವಂತೆ ಸೂಚಿಸಲಾಗಿತ್ತಲ್ಲದೆ, ಜಿಲ್ಲಾಧಿಕಾರಿಯವರು ಎಚ್ಚರಿಕೆ ನೀಡಿದ್ದರೂ ಕಾರ್ಖಾನೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
    ಆಡಳಿತ ಮಂಡಳಿಯ ಕ್ರಮ ಖಂಡಿಸಿ 91 ದಿನಗಳಿಂದ ಕಾರ್ಖಾನೆ ಎದುರು ಹೋರಾಟ ನಡೆಸುತ್ತಿರುವ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರು, ತಾಳ್ಮೆಯಿಂದ ಇದ್ದಾರೆ. ಆದರೆ ಇನ್ನು ಮುಂದೆ ಹೋರಾಟ ತೀವ್ರಗೊಳಿಸಿ, ಕಾರ್ಖಾನೆ ಬಳಿಯ ಸೌಹಾರ್ಧಯುತ ವಾತಾವರಣ ಹದಗೆಟ್ಟಲ್ಲಿ ಕಾರ್ಖಾನೆಯೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
    ಮುಖಂಡ ಬೊಕ್ಕಳ್ಳಿ ನಂಜುಂಡಸ್ವಾಮಿ, ಬಸವರಾಜು, ಭೂಮಿ ಕಳೆದುಕೊಂಡ ರೈತ ಕುಟುಂಬದ ಬಸವರಾಜು, ರಾಜಮ್ಮ, ಪುಟ್ಟಮ್ಮ, ಪುನೀತ್, ಮಹೇಶ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts