More

    ಔಷಧ ಕೊರತೆಯಾದರೆ ಗಮನಕ್ಕೆ ತನ್ನಿ

    ಬ್ಯಾಡಗಿ: ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ವೈದ್ಯರು ಎಲ್ಲ ವ್ಯವಸ್ಥೆ ಮಾಡಿಕೊಳ್ಳಬೇಕು. ಔಷಧ, ಲಸಿಕೆ ಹಾಗೂ ಉಪಕರಣಗಳ ಕೊರತೆಯಿದ್ದಲ್ಲಿ ತಕ್ಷಣ ಗಮನಕ್ಕೆ ತರಬೇಕು ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು.

    ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಶುಕ್ರವಾರ ಭೇಟಿ ನೀಡಿ, ಕರೊನಾ ಚಿಕಿತ್ಸೆ ನೀಡುವಲ್ಲಿ ವೈದ್ಯರು ಕೈಗೊಂಡ ಕ್ರಮ ಪರಿಶೀಲಿಸಿ ಹಾಗೂ ಸಭೆ ನಡೆಸಿ ಅವರು ಮಾತನಾಡಿದರು. ತಾಲೂಕಿನಲ್ಲಿ 175 ಸಕ್ರಿಯ ಪ್ರಕರಣಗಳಿದ್ದು, 21 ಜನ ಮರಣ ಹೊಂದಿದ್ದಾರೆ. ಕರೊನಾ ತಡೆಗಟ್ಟುವಲ್ಲಿ ರಾಜ್ಯ ಸರ್ಕಾರ ಜನತಾ ಕರ್ಫ್ಯೂ ಜಾರಿಗೊಳಿಸಿ ಸಾಕಷ್ಟ ಮುಂಜಾಗ್ರತೆ ಕ್ರಮ ತೆಗೆದುಕೊಂಡಿದೆ. ಆದರೂ, ನಿಯಂತ್ರಣ ಸಮರ್ಪಕವಾಗಿ ಆಗುತ್ತಿಲ್ಲ. ಹೀಗಾದರೆ, ಸಮಸ್ಯೆ ಇನ್ನಷ್ಟು ಉಲ್ಬಣಿಸುವ ಸಾಧ್ಯತೆಯಿದೆ ಎಂದರು.

    ತಾಲೂಕಿನ ಸಾಕಷ್ಟು ಜನರು ಬೆಂಗಳೂರು ಹಾಗೂ ಹೊರರಾಜ್ಯಗಳಿಂದ ವಾಪಸು ಊರಿಗೆ ಬಂದಿದ್ದಾರೆ. ಅಂತಹವರನ್ನು ಗುರುತಿಸಿ ಆರೋಗ್ಯ ವಿಚಾರಿಸಬೇಕು. ಒಂದು ವೇಳೆ ಆರೋಗ್ಯದಲ್ಲಿ ವ್ಯತ್ಯಾಸವಿದ್ದಲ್ಲಿ ಪ್ರತ್ಯೇಕವಾಗಿ ಮನೆಯಲ್ಲಿಟ್ಟು, ಆರೋಗ್ಯ ಇಲಾಖೆ ನೀಡಿರುವ ಸೂಚನೆ ಪಾಲಿಸಲು ತಿಳಿಸಬೇಕು. ಅಲ್ಲದೆ, ಎರಡು ದಿನಗಳಿಗೊಮ್ಮ ಆಶಾ ಕಾರ್ಯಕರ್ತೆಯರು ಹಾಗೂ ಸ್ಥಳೀಯ ಆರೋಗ್ಯ ಕಾರ್ಯಕರ್ತೆಯರು ಭೇಟಿ ನೀಡಿ, ನಿಗಾ ವಹಿಸಬೇಕು ಎಂದು ಸೂಚಿಸಿದರು.

    ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬಾರದಂತೆ ಅವರ ಮನವೊಲಿಸಬೇಕು. ಕೋವಿಡ್ ನಿಯಮ ಉಲ್ಲಂಘನೆ ಮಾಡಿದಲ್ಲಿ ಸ್ಥಳೀಯ ಜಾಗೃತ ಸಮಿತಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದರಲ್ಲದೆ, ಅಧಿಕಾರಿಗಳು ಕಾರ್ಯವೈಖರಿ ಪ್ರಶಂಸಿಸಿದರು.

    ಕರೊನಾ ಲಸಿಕೆ, ಆಕ್ಸಿಜನ್ ವ್ಯವಸ್ಥೆ ಸೇರಿದಂತೆ ಇತ್ಯಾದಿ ಮಾಹಿತಿ ಪಡೆದರು. ಡಾ.ಪುಟ್ಟರಾಜ, ತಾಲೂಕು ಆರೋಗ್ಯಾಧಿಕಾರಿ ಡಾ. ಸುಹಿಲ್ ಹರವಿ, ಪುರಸಭೆ ಮುಖ್ಯಾಧಿಕಾರಿ ವಿ.ಎಂ. ಪೂಜಾರ, ಸಿಪಿಐ ಎ.ಎನ್. ಬಸವರಾಜ, ತಾಪಂ ಇಒ ಕೆ. ತಿಮ್ಮಾರೆಡ್ಡಿ, ಆರೋಗ್ಯ ಇಲಾಖೆ ಹಿರಿಯ ಸಹಾಯಕರಾದ ಸದಾರಾಧ್ಯ ಮಠದ, ಎಂ.ಎನ್. ಕಂಬಳಿ, ವೈ.ಹಿರಿಯಕ್ಕನವರ, ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ ಆಸಾದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts