More

    ಗ್ರಾಮವಾಸ್ತವ್ಯ ಸದುದ್ದೇಶವಿದ್ದರೆ ಪರಿಣಾಮಕಾರಿ ಪರಿಕಲ್ಪನೆ

    ಗ್ರಾಮವಾಸ್ತವ್ಯ ಸದುದ್ದೇಶವಿದ್ದರೆ ಪರಿಣಾಮಕಾರಿ ಪರಿಕಲ್ಪನೆಪ್ರಜಾಪರಿಪಾಲಕನಾದ ರಾಜ ತನ್ನ ಪ್ರಜೆಗಳ ಸ್ಥಿತಿಗತಿಯನ್ನರಿಯಲು ಮಾರುವೇಷ ದಲ್ಲಿ ಜನಗಳ ನಡುವೆ ಸಂಚರಿಸಿ ಅವರ ಕುಂದು ಕೊರತೆಗಳನ್ನು, ರಾಜಪರಿವಾರದಿಂದ ಆಗುತ್ತಿರುವ ಅನುಕೂಲ ಅಥವಾ ತೊಂದರೆಗಳನ್ನು ಸ್ವತಃ ತಾನೇ ಆಲಿಸಿ, ಪರಿಶೀಲಿಸಿ ನಂತರ ಅವುಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದನೆಂದು ಓದಿ, ಕೇಳಿದ್ದೇವೆ. ಏಕೆಂದರೆ ಅರಮನೆಯಲ್ಲಿ ಕುಳಿತ ಪ್ರಭುವಿಗೆ ಪ್ರಜೆಗಳ ಸಂಕಷ್ಟದ ವಾಸ್ತವ ಸ್ಥಿತಿ ಅರಿಯಲು ಸಾಧ್ಯವೇ ಇಲ್ಲ. ಎಲ್ಲ ಬಗೆಯ ಸವಲತ್ತುಗಳೊಡನೆ ಸುಖಸಂಕಥಾ ವಿನೋದದಲ್ಲಿ ಕಾಲ ಕಳೆಯುವ ಆತನಿಗೆ ಸಂಕಷ್ಟದ ಅರಿವಾಗುವುದಾದರೂ ಹೇಗೆ? ಜೊತೆಗೆ ಆತನ ಸುತ್ತ ವಂಧಿಮಾಗಧರ ದಂಡೇ ಇದ್ದು, ಪ್ರಭುವಿಗೆ ಪ್ರಿಯವಾಗುವ ಹಾಗೆ ಅವರು ಕಿವಿಯೂದುತ್ತಿರುತ್ತಾರೆ. ಅನೇಕ ರಾಜರು ಇಂಥವರ ಮಾತು ಕೇಳುತ್ತ ಭ್ರಮಾಲೋಕದಲ್ಲಿಯೇ ಇರುತ್ತಾರೆ.

    ಆಧುನಿಕ ಪ್ರಜಾಪ್ರಭುತ್ವದಲ್ಲಿಯೂ ಆಡಳಿತ ವೈಖರಿ ಭಿನ್ನವೇನಲ್ಲ; ಆಳುವವರ ಸುತ್ತ ಹಿಂಬಾಲಕರ ಗುಂಪೊಂದು ಸದಾ ಸುತ್ತುವರಿದಿರುತ್ತದೆ. ಅವರ ತುತ್ತೂರಿ ಬಾಯಿಗೆ ಕಿವಿಯಾಗುವ ನಾಯಕನಿಗೆ ಸುತ್ತಮುತ್ತಲಿನ ಜಗತ್ತಿನ ಪರಿವೆ ಇರುವುದಿಲ್ಲ; ಹಾಗೆ ಅರಿವಾಗಲು ಅವರು ಬಿಡುವುದೂ ಇಲ್ಲ. ಪ್ರಜೆಗಳ ಬಗ್ಗೆ ನಿಜಕಾಳಜಿ ಯುಳ್ಳ ನಾಯಕ ಮಾತ್ರ ಅವರೊಡನೆ ನಿಕಟ ಒಡನಾಟ ಹೊಂದಲು ಸದಾ ಪ್ರಯತ್ನಿಸುತ್ತಿರುತ್ತಾನೆ. ಇತ್ತೀಚೆಗೆ ನನ್ನ ಹುಟ್ಟೂರು ನರಹಳ್ಳಿಯಲ್ಲಿ ತಾಲೂಕು ಮಟ್ಟದ ಗ್ರಾಮವಾಸ್ತವ್ಯ ಕಾರ್ಯಕ್ರಮವಿತ್ತು. ಈಗಿನ ಸರ್ಕಾರ ‘ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ’ ಎಂಬ ಘೊಷವಾಕ್ಯವೊಂದನ್ನು ರೂಪಿಸಿದೆ. ಇಂತಹ ಘೊಷಣೆಗಳನ್ನು ರೂಪಿಸುವವರ ಮನಸ್ಸಿನಲ್ಲಿ ಕನಸೊಂದು ಇದ್ದು, ಅದು ಅನೇಕ ಕಾರಣಗಳಿಂದಾಗಿ ಸಾಕಾರಗೊಳ್ಳದಿರಬಹುದು; ಆದರೆ ಅದರ ಹಿಂದಿನ ಆಶಯದ ಪ್ರಾಮಾಣಿಕತೆಯನ್ನು ನಾವು ಸಂಶಯಿಸುವ ಅಗತ್ಯವಿಲ್ಲ. ಈ ಹಿಂದೆ ಮುಖ್ಯಮಂತ್ರಿಗಳೇ ‘ಗ್ರಾಮವಾಸ್ತವ್ಯ’ ಮಾಡಿದ್ದುಂಟು. ಅಧಿಕಾರದ ಮೇಲು ಹಂತದ ‘ಗ್ರಾಮವಾಸ್ತವ್ಯ’ ಅನೇಕ ವೇಳೆ ಪ್ರಚಾರದ ಸರಕಾಗುತ್ತದೆಯೇ ಹೊರತು ಅದರ ನಿರ್ದಿಷ್ಟ ಪ್ರಯೋಜನಗಳು ಕಡಿಮೆ. ಜಿಲ್ಲಾಧಿಕಾರಿ ಗಳ ವಾಸ್ತವ್ಯವೂ ಹೀಗಲ್ಲದಿದ್ದರೂ ಬಹುಮಟ್ಟಿಗೆ ಇದೇ ಮಾದರಿಯದಾಗಿರುತ್ತದೆ. ಎಷ್ಟೇ ಆದರೂ ಅವರು ಜಿಲ್ಲೆಯ ಧಣಿಗಳಲ್ಲವೇ? ಆದರೆ ತಾಲೂಕು ಮಟ್ಟದ ಅಧಿಕಾರಿಗಳ ‘ಗ್ರಾಮವಾಸ್ತವ್ಯ’ ಯಶಸ್ವಿಯಾಗುವ ಸಾಧ್ಯತೆ ಹೆಚ್ಚು. ಏಕೆಂದರೆ ಇವರಿಗೆ ಜನರೊಡನೆ ಹೆಚ್ಚು ಒಡನಾಟವಿರುತ್ತದೆ.

    ಸುಮಾರು ಆರು ದಶಕಗಳಿಂದ ನರಹಳ್ಳಿಯಲ್ಲಿ ಅಂತಹ ಗಮನಾರ್ಹವಾದ ಯಾವುದೇ ಬದಲಾವಣೆಯೂ ಆದಂತಿಲ್ಲ. ತಲೆಮಾರುಗಳ ಅಂತರ ಕಣ್ಣಿಗೆ ರಾಚುತ್ತದೆ, ನಿಜ. ಹೊಸ ತಲೆಮಾರಿನವರಲ್ಲಿ ಹಣದ ಹರಿವು ಮೊದಲಿಗಿಂತ ಹೆಚ್ಚಿರುವುದು ಕಾಣಿಸುತ್ತದೆ. ಅನೇಕ ಯುವಕರು ನಗರದತ್ತ ವಲಸೆ ಬಂದು, ಹಣ ಸಂಪಾದಿಸುತ್ತ, ಹಳ್ಳಿಯಲ್ಲಿ ತಮ್ಮ ಕುಟುಂಬದ ಸ್ಥಿತಿ ಸುಧಾರಿಸುತ್ತಿರುವುದು ಒಂದು ಇತ್ಯಾತ್ಮಕ ಬೆಳವಣಿಗೆ. ಆದರೆ ಕುಡಿತದ ಚಟಕ್ಕೆ ವಯಸ್ಸಿನ ಅಂತರವಿಲ್ಲದೆ ಎಲ್ಲರೂ ಬಲಿಯಾಗುತ್ತಿರುವುದು ಮತ್ತೊಂದು ಅಪಾಯಕಾರಿ ಬೆಳವಣಿಗೆ. ನಾವು ಚಿಕ್ಕವರಿದ್ದಾಗ ಇದರ ಸುದ್ದಿಯೇ ಇರಲಿಲ್ಲ. ವೈಯಕ್ತಿಕ ಬದುಕಿನಲ್ಲಿ ಬೆಳವಣಿಗೆ ಕಂಡರೂ ಸಮುದಾಯದ ಸುಧಾರಣೆ ಬಗ್ಗೆ ಯಾರಿಗೂ ಕಾಳಜಿ ಇದ್ದಂತಿಲ್ಲ. ಸಾರ್ವಜನಿಕ ರಂಗವನ್ನೂ ವೈಯಕ್ತಿಕ ಅನುಕೂಲಕ್ಕೆ ಬಳಸಿಕೊಳ್ಳುವ ಹುನ್ನಾರವೇ ಕಾಣಿಸುತ್ತದೆ.

    ಇತ್ತೀಚೆಗೆ ನನ್ನ ಗೆಳೆಯ ಲಯನ್ ದೇವೇಗೌಡರು ನಮ್ಮ ನರಹಳ್ಳಿ ಶಾಲೆಗೆ ಒಂದು ಲಕ್ಷ ರೂಪಾಯಿಗಳ ದೇಣಿಗೆ ನೀಡಿ ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಕಲಿಕೆಯ ಸಲಕರಣೆಗಳನ್ನು ಕೊಳ್ಳಲು ನೆರವಾದರು. ಸಿರಿವಂತರು ಹೀಗೆ ಸಮುದಾಯದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವ ಒಂದು ಮಾದರಿಯಿದು. ಆ ಸಂಬಂಧ ನಮ್ಮ ‘ನರಹಳ್ಳಿ ಅಭಿಮಾನಿಗಳ ಬಳಗ’ದ ಹುಡುಗರು ಸಮಾರಂಭ ಏರ್ಪಡಿಸಿ ಕ್ಷೇತ್ರದ ಶಾಸಕ ಪುಟ್ಟರಾಜು ಅವರನ್ನು ಆಹ್ವಾನಿಸಿದ್ದರು. ಆಗ ನಾನು ಪ್ರಾಸ್ತಾವಿಕವಾಗಿ ಮಾತನಾಡುತ್ತ, ನಮ್ಮ ನರಹಳ್ಳಿಯ ಬಗ್ಗೆ ಪ್ರಸ್ತಾಪಿಸಿ, ಯಾವುದಾದರೂ ರೀತಿಯಲ್ಲಿ ನನ್ನ ಹಳ್ಳಿಯ ಅಭಿವೃದ್ಧಿಗೆ ನೆರವಾಗಬೇಕೆಂದು ಎಲ್ಲರ ಪರವಾಗಿ ಮನವಿ ಮಾಡಿದ್ದೆ. ನನ್ನ ಮನವಿ ಅವರ ಮನಸ್ಸು ಮುಟ್ಟಿರಬೇಕು, ತಕ್ಷಣ ಕಾರ್ಯಪ್ರವೃತ್ತರಾಗಿ ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ರ್ಚಚಿಸಿದರು. ಅದರ ಫಲವೇ ತಹಸೀಲ್ದಾರರ ಈ ಗ್ರಾಮವಾಸ್ತವ್ಯ. ಇದರ ಸ್ವರೂಪ, ಪರಿಣಾಮವನ್ನು ಅರಿಯಲೆಂದೇ ಅಂದು ನಾನು ನರಹಳ್ಳಿಯಲ್ಲಿದ್ದೆ.

    ತಹಸೀಲ್ದಾರ್ ಪ್ರಮೋದ್ ಉತ್ಸಾಹಿ ಯುವ ಅಧಿಕಾರಿ. ಬೇರೆ ಬೇರೆ ಇಲಾಖೆಯ ಮೂವತೆôದು ಸಹೋದ್ಯೋಗಿ ಅಧಿಕಾರಿಗಳ ತಂಡದೊಡನೆ ಹಿಂದಿನ ಸಂಜೆಯೇ ನರಹಳ್ಳಿಗೆ ಬಂದು ಅಲ್ಲಿಯ ಶಾಲೆಯಲ್ಲಿ ವಾಸ್ತವ್ಯ ಹೂಡಿದರು. ಆ ಸಂಜೆ ಊರಿನಲ್ಲಿ ಸಂಚರಿಸಿ ಹಲವರೊಡನೆ ಪ್ರಾಸಂಗಿಕವಾಗಿ ಮಾತನಾಡಿದರು. ಸಮಸ್ಯೆಯ ವಾಸ್ತವ ಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದರು. ಮಾರನೆಯ ದಿನ ಶಾಸಕ ಪುಟ್ಟರಾಜು ಅವರೂ ಅಧಿಕಾರಿಗಳ ತಂಡವನ್ನು ಸೇರಿಕೊಂಡು ಸ್ಥಳೀಯ ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರ ಒದಗಿಸಲು ಪ್ರಯತ್ನಿಸಿದರು. ಇಡೀ ದಿನ ಶಾಲೆಯ ಬಯಲು ರಂಗಮಂದಿರದಲ್ಲಿ ಹದಿನೈದಕ್ಕೂ ಹೆಚ್ಚು ಇಲಾಖೆಗಳ ಸಭೆ ನಡೆಯಿತು. ಈ ಬಯಲು ರಂಗಮಂದಿರಕ್ಕೂ ಒಂದು ಹಿನ್ನೆಲೆಯಿದೆ. ಶಾಲೆಗೆ ದೇಣಿಗೆ ನೀಡುವ ಸಮಾರಂಭ ನಡೆದಾಗ ಅಲ್ಲಿ ರಂಗಮಂದಿರ ಇರಲಿಲ್ಲ. ಪೆಂಡಾಲ್ ಹಾಕಿ ಸಮಾರಂಭ ಏರ್ಪಡಿಸಿದ್ದರು. ಯಾವುದೇ ಸಮಾರಂಭ ಮಾಡಬೇಕಾದರೂ ಈ ಪೆಂಡಾಲ್​ಗೇ ಸಾಕಷ್ಟು ಹಣ ಖರ್ಚಾಗುತ್ತಿತ್ತು. ಆಗ ಅಲ್ಲಿ ಒಂದು ಬಯಲು ರಂಗಮಂದಿರ ಬೇಕೆಂದು ಶಾಸಕರಲ್ಲಿ ಮನವಿ ಮಾಡಿದ್ದೆವು. ಅವರು ತಕ್ಷಣ ಸ್ಪಂದಿಸಿ, ಸ್ವಂತ ಖರ್ಚಿನಲ್ಲಿಯೇ ಒಂದು ತಿಂಗಳೊಳಗೆ ರಂಗಮಂದಿರ ನಿರ್ವಿುಸಿಕೊಟ್ಟರು. ಮೇಲ್ನೋಟಕ್ಕೆ ಇದೊಂದು ಸಣ್ಣ ಸಹಾಯವೆನ್ನಿಸಿದರೂ ಅದರ ಪರಿಣಾಮ ದೀರ್ಘಕಾಲೀನವಾದುದು. ವಿದ್ಯಾರ್ಥಿಗಳ ಸಾಂಸ್ಕೃತಿಕ ಚಟುವಟಿಕೆಗಳಿಗೆ ಇದು ಪ್ರೇರಣೆ ನೀಡುತ್ತದೆ; ರಜೆಯ ದಿನಗಳಲ್ಲಿ ಹಳ್ಳಿಯ ಸಾಂಸ್ಕೃತಿಕ ಚಟುವಟಿಕೆಗಳಿಗೂ ಇಲ್ಲಿ ಅವಕಾಶ ಕಲ್ಪಿಸಬಹುದು. ಪ್ರತಿ ಹಳ್ಳಿಯಲ್ಲಿಯೂ ಇಂತಹದೊಂದು ಬಯಲು ರಂಗಮಂದಿರವಿದ್ದರೆ ಅಲ್ಲಿಯ ಸಾಂಸ್ಕೃತಿಕ ಬದುಕು ಜೀವಂತವಾಗಿರಬಲ್ಲುದು.

    ಹಳ್ಳಿಯ ಸಮಸ್ತರೂ ಸೇರಿದ್ದ ಸಭೆಯಲ್ಲಿ ಶಿಕ್ಷಣ, ಆರೋಗ್ಯ, ವಿದ್ಯುತ್, ರೇಷ್ಮೆ, ತೋಟಗಾರಿಕೆ, ಕೃಷಿ, ಅಬಕಾರಿ, ಅರಣ್ಯ, ಸಮಾಜಕಲ್ಯಾಣ, ಕಾರ್ವಿುಕ, ಮೀನುಗಾರಿಕೆ- ಹೀಗೆ ಹಲವು ಇಲಾಖೆಗಳ ಅಧಿಕಾರಿಗಳು ಅಲ್ಲಿದ್ದು, ಆಯಾ ಇಲಾಖೆಯಿಂದ ಯಾವ ಸವಲತ್ತುಗಳನ್ನು ರೈತರು ಪಡೆಯಬಹುದು, ಯಾವ ಬಗೆಯ ಅನುಕೂಲಗಳನ್ನು ಮಾಡಿಕೊಡಬಹುದು ಎಂಬುದನ್ನು ವಿವರಿಸಿದರು. ನಿಜಕ್ಕೂ ಇದೊಂದು ಉಪಯುಕ್ತ ತಿಳಿವಳಿಕೆಯ ಕಾರ್ಯಕ್ರಮ. ಸರ್ಕಾರದ ಅನೇಕ ಜನೋಪಯೋಗಿ ಕಾರ್ಯಕ್ರಮಗಳ ಬಗ್ಗೆ ಸಾಮಾನ್ಯ ಜನರಿಗೆ ತಿಳಿವಳಿಕೆಯೇ ಇರುವುದಿಲ್ಲ; ಯಾವ ಬಗೆಯಲ್ಲಿ ನೆರವು ಪಡೆಯಬಹುದು ಎಂಬುದೂ ಗೊತ್ತಿರುವುದಿಲ್ಲ. ಇಂಥಲ್ಲಿಯೇ ಮಧ್ಯವರ್ತಿಗಳ ಪ್ರವೇಶವಾಗುವುದು. ಇಂಥವರನ್ನು ನಮ್ಮ ಕಡೆ ದಲ್ಲಾಳಿಗಳು ಎನ್ನುತ್ತಾರೆ. ಇವರು ಶ್ರಮಜೀವಿಗಳಲ್ಲ; ಅನ್ಯರ ದುಡಿಮೆ ಅವಲಂಬಿಸಿ ಬದುಕುವಂಥವರು. ಸರ್ಕಾರದ ಯಾವ ಕೆಲಸ ಆಗಬೇಕಾದರೂ ಈ ದಳ್ಳಾಳಿಗಳದೇ ಪ್ರಮುಖ ಪಾತ್ರ.

    ‘ಗ್ರಾಮವಾಸ್ತವ್ಯ’ದಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳೂ ಇದ್ದುದರಿಂದ ಅಲ್ಲಿಂದಿಲ್ಲಿಗೆ ಅಲೆದಾಡುವ ಪ್ರಮೇಯವಿರಲಿಲ್ಲ. ತಾಲೂಕು ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳಬೇಕಾದ ತಹಸೀಲ್ದಾರ್ ಅಲ್ಲಿಯೇ ಇದ್ದುದರಿಂದ ನಿರ್ಣಯ ತೆಗೆದುಕೊಳ್ಳುವುದೂ ಸುಲಭವಾಗಿತ್ತು. ಜನಪ್ರತಿನಿಧಿ ಶಾಸಕರ ಉಪಸ್ಥಿತಿಯಿಂದಾಗಿ ಜನಸಾಮಾನ್ಯರ ಅಹವಾಲುಗಳಿಗೆ ಅಧಿಕಾರಿಗಳು ತಕ್ಷಣ ಸ್ಪಂದಿಸುತ್ತಿದ್ದರು. ಜನಸಾಮಾನ್ಯರ ಕೆಲ ಸಮಸ್ಯೆಗಳು ಅಲ್ಲಿಯೇ ಇತ್ಯರ್ಥವಾಗಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಯಿತು. ಅನೇಕ ವೇಳೆ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯೇ ಸಮಸ್ಯೆ ಸೃಷ್ಟಿಸುತ್ತದೆ. ಎಲ್ಲ ಇಲಾಖೆಯವರೂ ಹಾಜರಿದ್ದುದರಿಂದ ಪರಿಹಾರ ಸುಲಭವಾಯಿತು. ಒಬ್ಬ ಶಾಸಕರು ತಮ್ಮ ಅವಧಿಯಲ್ಲಿ ತಿಂಗಳಿಗೊಮ್ಮೆ ಇಂತಹ ‘ಗ್ರಾಮವಾಸ್ತವ್ಯ’ದ ಕಾರ್ಯಕ್ರಮ ಮಾಡಿದರೂ ಅವರ ಅವಧಿಯಲ್ಲಿ ಕನಿಷ್ಠ ಅರವತ್ತು ಹಳ್ಳಿಗಳ ಕೆಲವು ಸಮಸ್ಯೆಗಳು ಪರಿಹಾರವಾಗುತ್ತವೆ. ಸುತ್ತಮುತ್ತಲ ಹಳ್ಳಿಗಳನ್ನು ಸೇರಿಸಿಕೊಂಡು ಗ್ರಾಮ ಪಂಚಾಯಿತಿಯ ಹಂತದಲ್ಲಿ ಕಾರ್ಯಕ್ರಮ ರೂಪಿಸಿದರೆ ತಮ್ಮ ಕ್ಷೇತ್ರದ ಎಲ್ಲ ಹಳ್ಳಿಗಳ ಅಹವಾಲುಗಳನ್ನು ಒಮ್ಮೆಯಾದರೂ ತಾಲೂಕು ಆಡಳಿತ ಕೇಳಿಸಿಕೊಂಡು ಸ್ಥಳದಲ್ಲಿಯೇ ಪರಿಹಾರ ದೊರಕಿಸಿಕೊಡುವ ಪ್ರಾಮಾಣಿಕ ಪ್ರಯತ್ನ ಮಾಡಬಹುದು; ಮಧ್ಯವರ್ತಿಗಳ ಹಾವಳಿ ತಪ್ಪಿಸಬಹುದು. ಯಾವ ಪಕ್ಷ ಅಧಿಕಾರದಲ್ಲಿದ್ದರೂ ಸರ್ಕಾರದ ಸವಲತ್ತುಗಳು ಜನಸಾಮಾನ್ಯರನ್ನು ತಲುಪಬೇಕಾದರೆ ಅಧಿಕಾರಿ ವರ್ಗವೇ ಮುಖ್ಯ. ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗದಲ್ಲಿ ಅನ್ಯೋನ್ಯತೆ ಇದ್ದಾಗ ಜನೋಪಯೋಗಿ ಕೆಲಸಗಳು ಸುಲಭವಾಗಿ ಸಾಧ್ಯವಾಗುತ್ತವೆ. ಆದರೆ ಅವರಲ್ಲಿನ ಅನ್ಯೋನ್ಯತೆ ಅನೈತಿಕ ನೆಲೆಯಲ್ಲಿದ್ದಾಗ ಸರ್ಕಾರದ ಸವಲತ್ತು ತಲುಪಬೇಕಾದವರಿಗೆ ತಲುಪದೆ ಯಾರದೋ ಜೇಬು ಸೇರುತ್ತದೆ.

    ಈ ಗ್ರಾಮವಾಸ್ತವ್ಯದಲ್ಲಿ ವೈದ್ಯರ ತಂಡವೊಂದು ಇದ್ದು ಸಣ್ಣಪುಟ್ಟ ಸಮಸ್ಯೆಗಳಿಗೆ ಅಲ್ಲಿಯೇ ಪರಿಹಾರ ಒದಗಿಸಿ, ಕೋವಿಡ್ ವ್ಯಾಕ್ಸಿನೇಷನ್ ನೀಡಿದ್ದು; ಕಂದಾಯ ಇಲಾಖೆ ಕೆಲವು ದಾಖಲೆಗಳ ಸಮಸ್ಯೆಯನ್ನು ಪರಿಹರಿಸಿದ್ದು; ವಿದ್ಯುತ್ ಇಲಾಖೆ ಕೈಗೊಳ್ಳಬಹುದಾದ ತಕ್ಷಣದ ಕೆಲವು ಯೋಜನೆಗಳು; ಹಾಲಿನ ಡೇರಿಯ ಅಧ್ಯಕ್ಷ ರಾಮಚಂದ್ರ ಅಲ್ಲಿದ್ದು ಹೈನು ಅಭಿವೃದ್ಧಿಗೆ ಕೈಗೊಂಡ ನಿರ್ಣಯ; ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಹುಡುಕಿದ್ದು; ಜನರ ನಂಬಿಕೆಯ ಕೇಂದ್ರವಾದ ದೇವಸ್ಥಾನಗಳ ಜೀಣೋದ್ಧಾರ; ‘ನರಹಳ್ಳಿ ಅಭಿಮಾನಿಗಳ ಬಳಗ’ ನಿರ್ವಹಿಸುತ್ತಿರುವ ಗ್ರಂಥಾಲಯ ಹಾಗೂ ಉಚಿತ ವಾಚನಾಲಯದ ನವೀಕರಣ; ರಸ್ತೆಯ ಬದಿಯಲ್ಲಿ ಮರ ಬೆಳೆಸುವ ಕಾರ್ಯಕ್ರಮಕ್ಕೆ ಭರವಸೆ; ಕುಡಿತದ ಚಟ ತಪ್ಪಿಸಲು ಅಕ್ರಮ ಮದ್ಯ ಮಾರಾಟವನ್ನು ನಿಯಂತ್ರಿಸುವುದು; ಕುಡಿಯುವ ನೀರಿನ ಕಲ್ಯಾಣಿಯನ್ನು ಸುಸ್ಥಿತಿಗೆ ತರುವುದು; ವಿದ್ಯಾರ್ಥಿಗಳು ಶಾಲಾ, ಕಾಲೇಜಿಗೆ ಹೋಗಲು ಬಸ್ಸಿನ ಸಾರಿಗೆ ಸಂಪರ್ಕ; ಸಮುದಾಯದ ಅನುಕೂಲಕ್ಕೆಂದು ಬಿಟ್ಟಿದ್ದು, ಈಗ ಒತ್ತುವರಿಯಾಗಿದ್ದ ಸರ್ಕಾರಿ ಜಮೀನು ಅಲ್ಲಿಯೇ ಅಳತೆಯಾಗಿ ಸಾರ್ವಜನಿಕ ಉಪಯೋಗಕ್ಕೆ ಅದನ್ನು ಬಳಸಿ ಕೊಳ್ಳಲು ಚಿಂತನೆ; ಶಾಸಕ ಪುಟ್ಟರಾಜು ಸಮುದಾಯಕ್ಕೆ ಅನುಕೂಲವಾಗ ಬಹುದಾದ ಕೆಲವು ನಿರ್ಣಯಗಳನ್ನು ಜಿ.ಪಂ., ತಾ.ಪಂ. ಸದಸ್ಯರೊಡನೆ ಸ್ಥಳದಲ್ಲಿಯೇ ತೆಗೆದು ಕೊಂಡದ್ದು- ಈ ಸಂದರ್ಭದಲ್ಲಿ ಅರಿವಿಗೆ ಬಂದ ಕೆಲವು ಉಲ್ಲೇಖಾರ್ಹ ಸಂಗತಿಗಳು.

    ಇಂತಹ ಅನೇಕ ನಿರ್ಣಯಗಳನ್ನು ನಮ್ಮ ಅಧಿಕಾರಿವರ್ಗ, ಜನಪ್ರತಿನಿಧಿಗಳು ಕೈಗೊಳ್ಳುತ್ತಲೇ ಇರುತ್ತಾರೆ. ಆದರೆ ಅವು ಕಾರ್ಯಗತಗೊಳ್ಳುವುದು ಯಾವ ಕಾಲಕ್ಕೆ? ಕಾರ್ಯಗತಗೊಳ್ಳುತ್ತವೆಯೇ? ಇಂತಹ ಪ್ರಶ್ನೆಗಳನ್ನು ಕೇಳುವುದು ಸಿನಿಕತನದ ಸಂಗತಿಯೇನಲ್ಲ; ನಮ್ಮ ವ್ಯವಸ್ಥೆಯೇ ಹಾಗಿದೆ. ಆದರೆ ಪುಟ್ಟರಾಜು ತಾವು ನೀಡಿದ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸಿರುವುದನ್ನು ಬಲ್ಲೆ. ತಹಸೀಲ್ದಾರ್ ಪ್ರಮೋದ್ ಅವರ ಸಂಕಲ್ಪಬಲಕ್ಕೆ ಉಳಿದ ಅಧಿಕಾರಿಗಳೂ ಸ್ಪಂದಿಸಿದರೆ ಸರ್ಕಾರದ ಸವಲತ್ತುಗಳು ಸಾಮಾನ್ಯರನ್ನು ತಲುಪಬಹುದು. ಜೊತೆಗೆ ಜನರೂ ಜಾಗೃತರಾಗಿ, ಸಾಮಾಜಿಕ ಕಾಳಜಿ ಪ್ರಕಟಿಸಿದರೆ ಅಭಿವೃದ್ಧಿ ಸಾಧ್ಯವಾಗಬಹುದು.

    (ಲೇಖಕರು ಖ್ಯಾತ ವಿಮರ್ಶಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts