ಸಿನಿಮಾ

ಎಲ್ಲರ ಹಿತವೇ ಕಾಂಗ್ರೆಸ್ ಉದ್ದೇಶ

ಬೆಳಗಾವಿ: ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಕೃಷಿ, ಕೈಗಾರಿಕೆ, ಸಾರ್ವಜನಿಕ ಸೇವೆ, ಕಾನೂನು ಮತ್ತು ನ್ಯಾಯ, ನಗರಾಭಿವೃದ್ಧಿ, ಶಿಕ್ಷಣ, ಆರೋಗ್ಯ ಹೀಗೆ ಪ್ರತಿ ವಲಯಕ್ಕೂ ಆದ್ಯತೆ ನೀಡಿದ್ದೇವೆ. ಎಲ್ಲರ ಹಿತವೇ ಕಾಂಗ್ರೆಸ್‌ನ ಉದ್ದೇಶ ಎಂದು ಕೆಪಿಸಿಸಿ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ಪ್ರೊ. ಕೆ.ಈ. ರಾಧಾಕೃಷ್ಣ ಹೇಳಿದರು.

ನಗರದ ಕಾಂಗ್ರೆಸ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಪಿಎಲ್ ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತವಾಗಿ ನೀಡುವುದು, ಅಲ್ಪಸಂಖ್ಯಾತರಿಗೆ ಒಬಿಸಿ 2ಬಿ ವರ್ಗದಡಿ ಶೇ. 4 ಮೀಸಲಾತಿಯನ್ನು ಪುನಃ ನೀಡುವುದು, ಗೃಹಲಕ್ಷ್ಮೀ, ಶಕ್ತಿ ಯೋಜನೆಗಳ ಜಾರಿಗೆ ಬದ್ಧವಾಗಿದೆ ಎಂದರು.

ರೈತರಿಗೆ ಬಡ್ಡಿರಹಿತ ಸಾಲ 3 ಲಕ್ಷದಿಂದ 10 ಲಕ್ಷಕ್ಕೆ ವಿಸ್ತರಣೆ. ಶೇ. 3ರ ಬಡ್ಡಿದರದಲ್ಲಿ 15 ಲಕ್ಷ ರೂ. ವರೆಗೆ ಸಾಲ, ಸರ್ಕಾರದಿಂದಲೇ ಬಡ್ಡಿ ವ್ಯತ್ಯಾಸ ಪಾವತಿ, ಕೃಷಿ ಉತ್ಪನ್ನ ಮತ್ತು ಸಾಲ ಸಂಬಂಧಿತ ಕ್ಷೇತ್ರಗಳಲ್ಲಿ ಸ್ಟಾರ್ಟ್‌ಅಪ್ ಆರಂಭಿಸಲು ಹಾಗೂ ಸಂಶೋಧನೆಗಳ ಉತ್ತೇಜನಕ್ಕೆ 500 ಕೋಟಿ ರೂ.ಗಳ ‘ಕೃಷಿ ಉನ್ನತಿ ನಿಧಿ’ ಸ್ಥಾಪನೆ. ಜಾನುವಾರು ಖರೀದಿಗೆ ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂ.ವರೆಗೆ ಸಾಲ, ಮಹದಾಯಿ ಯೋಜನೆ ಪೂರ್ಣಗೊಳಿಸುವುದು. ಎತ್ತಿನಹೊಳೆ ಯೋಜನೆಯನ್ನು 2 ವರ್ಷದೊಳಗೆ ಸಂಪೂರ್ಣಗೊಳಿಸುವುದು ಸೇರಿ ಇನ್ನೂ ಹಲವಾರು ಪ್ರಣಾಳಿಕೆಗಳು ಇವೆ ಎಂದರು.

ವಿಧಾನ ಪರಿಷತ್ ಮಾಜಿ ಅಧ್ಯಕ್ಷ ವಿ.ಆರ್. ಸುದರ್ಶನ್ ಮಾತನಾಡಿ, ಬೆಂಗಳೂರು ನಗರ ಜಿಲ್ಲೆ ಹೊರತುಪಡಿಸಿದರೆ ಬೆಳಗಾವಿ ಜಿಲ್ಲೆ 18 ಮತಕ್ಷೇತ್ರಗಳನ್ನು ಹೊಂದಿದೆ. ಪ್ರಧಾನಿ ನರೇಂದ್ರ ಮೋದಿ ಎಷ್ಟೇ ಬಾರಿ ಕರ್ನಾಟಕಕ್ಕೆ ಬಂದರೂ ವರ್ಕೌಟ್ ನಡೆಯುವುದಿಲ್ಲ. ಬರಿ ರಾಜಕೀಯ ಭಾಷಣ ಮಾಡುವ ಪ್ರಧಾನಿ ಅವರ ಪ್ರಚಾರದಿಂದ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಸ್ಥಿತಿ ದುಸ್ಥಿತಿಗೆ ತಲುಪಿದೆ. ಬಿಜೆಪಿಯವರಿಗೆ ಮತ ಕೇಳಲು ಯಾವುದೇ ನೈತಿಕ ಹಕ್ಕಿಲ್ಲ ಎಂದು ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಲಾಗಿದೆ. ಆದರೆ ಬಿಜೆಪಿಯವರು ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಲ್ಲಿ ಶೇ.10 ಈಡೇರಿಸಲಿಲ್ಲ. ಹೀಗಾಗಿ ಜನಪರ ಕಾಳಜಿ ಇರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮನವಿ ಮಾಡಿದರು. ಬೆಳಗಾವಿ ಗ್ರಾಮೀಣ ಜಿಲ್ಲಾಅಧ್ಯಕ್ಷ ವಿನಯ ನಾವಲಗಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುನೀಲ್ ಹನಮಣ್ಣವರ ಇತರರಿದ್ದರು.

Latest Posts

ಲೈಫ್‌ಸ್ಟೈಲ್