More

    ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ವಿಹಾರಿ ಬದಲಿಗೆ ಜಡೇಜಾ ಆಡುವ ಸಾಧ್ಯತೆ

    ಅಡಿಲೇಡ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಕ್ಕೆ ಈಗಾಗಲೆ ಭಾರತ ತಂಡದಲ್ಲಿ 4 ಬದಲಾವಣೆ ಬಹುತೇಕ ನಿಶ್ಚಿತವೆನಿಸಿದ್ದು, ಇದೀಗ 5ನೇ ಬದಲಾವಣೆಯ ಸಾಧ್ಯತೆಯೂ ಗೋಚರಿಸಿದೆ. ಅದರನ್ವಯ ಹನುಮ ವಿಹಾರಿ ಬದಲಿಗೆ ಆಲ್ರೌಂಡರ್ ರವೀಂದ್ರ ಜಡೇಜಾ ಕಣಕ್ಕಿಳಿಯುವ ನಿರೀಕ್ಷೆ ಇದೆ. ಆದರೆ ಜಡೇಜಾ ಅವರ ಫಿಟ್ನೆಸ್ ಪ್ರಮುಖ ಪಾತ್ರ ವಹಿಸಲಿದೆ.

    ಪ್ರವಾಸದ ಮೊದಲ ಟಿ20 ಪಂದ್ಯದ ವೇಳೆ ಜಡೇಜಾ ಕನ್‌ಕಷನ್‌ಗೆ ಒಳಗಾಗಿದ್ದರು. ಜತೆಗೆ ಸ್ನಾಯುಸೆಳೆತದ ಸಮಸ್ಯೆಯೂ ಅವರನ್ನು ಕಾಡಿತ್ತು. ಬಳಿಕ 2 ಟಿ20 ಪಂದ್ಯ ಮತ್ತು ಟೆಸ್ಟ್ ಸರಣಿಯ ಮೊದಲ ಪಂದ್ಯಕ್ಕೂ ಅವರು ಅಲಭ್ಯರಾಗಿದ್ದರು. ಶನಿವಾರದಿಂದ ಮೆಲ್ಬೋರ್ನ್‌ನಲ್ಲಿ ನಡೆಯಲಿರುವ 2ನೇ ಟೆಸ್ಟ್‌ಗೆ ಅವರು ಫಿಟ್ ಆಗುವ ನಿರೀಕ್ಷೆ ಇಡಲಾಗಿದೆ.

    ಇದನ್ನೂ ಓದಿ: ದ್ರಾವಿಡ್ ಅವರನ್ನು ಕೂಡಲೆ ಆಸ್ಟ್ರೇಲಿಯಾಕ್ಕೆ ಕಳುಹಿಸಿ ಎಂದು ವೆಂಗ್ಸರ್ಕಾರ್ ಹೇಳಿದ್ದೇಕೆ?

    ಜಡೇಜ ಉತ್ತಮ ರೀತಿಯಲ್ಲಿ ಚೇತರಿಕೆ ಕಾಣುತ್ತಿದ್ದಾರೆ. ಆದರೆ ಪಂದ್ಯಕ್ಕೆ ಶೇ. 100 ಫಿಟ್ ಆಗುವರೆಂದು ಹೇಳಲಾಗದು ಎಂದು ಟೀಮ್ ಇಂಡಿಯಾದ ಮೂಲಗಳು ತಿಳಿಸಿವೆ. ಒಂದು ವೇಳೆ ಜಡೇಜಾ ಸಂಪೂರ್ಣ ಫಿಟ್ ಆದರೆ ಆಗ ಹನುಮ ವಿಹಾರಿ ಸ್ಥಾನ ಬಿಟ್ಟುಕೊಡಬೇಕಾಗುತ್ತದೆ. ಜಡೇಜಾ ಸಂಪೂರ್ಣ ಫಿಟ್ ಆದರೆ, ಆಲ್ರೌಂಡ್ ಸಾಮರ್ಥ್ಯದಿಂದಾಗಿ ತಂಡದಲ್ಲಿ ಸ್ಥಾನ ಪಡೆಯುವರು. ಇದರಿಂದ ಭಾರತ ತಂಡ ಐವರು ಬೌಲರ್‌ಗಳ ದಾಳಿಯನ್ನೂ ನಡೆಸಬಹುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಜಡೇಜಾ ಇದುವರೆಗೆ 49 ಟೆಸ್ಟ್ ಆಡಿದ್ದು 1869 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 14 ಅರ್ಧಶತಕಗಳು ಸೇರಿವೆ. ಹನುಮ ವಿಹಾರಿ ಆಡಿರುವ 10 ಟೆಸ್ಟ್‌ಗಳಲ್ಲಿ 1 ಶತಕದ ಸಹಿತ 576 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಕೌಶಲವನ್ನು ಪರಿಗಣನೆಗೆ ತೆಗೆದುಕೊಂಡರೆ ಜಡೇಜಾ-ವಿಹಾರಿ ನಡುವೆ ಹೆಚ್ಚಿನ ಅಂತರವಿಲ್ಲ ಎಂದೂ ಪರಿಗಣಿಸಲಾಗುತ್ತಿದೆ. ಹೀಗಾಗಿ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್ ವಿಹಾರಿಗೆ ಬದಲಾಗಿ ಆಲ್ರೌಂಡರ್ ಜಡೇಜಾ ಆದ್ಯತೆ ಸಿಗಬಹುದು. ಇನ್ನು ಅನುಭವಿ ವೇಗಿ ಮೊಹಮದ್ ಶಮಿ ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿರುವ ಕಾರಣ, ಬೌಲಿಂಗ್ ವಿಭಾಗವನ್ನು ಬಲಪಡಿಸಲು ಐವರು ಬೌಲರ್‌ಗಳ ದಾಳಿಯೂ ಅಗತ್ಯವೆನಿಸಲಿದೆ.

    ಇದನ್ನೂ ಓದಿ: ಅಬುಧಾಬಿ ಟಿ10 ಲೀಗ್‌ನಲ್ಲಿ ಆಡಲಿದ್ದಾರೆ ಟಿ20 ಸ್ಟಾರ್ ಕ್ರಿಕೆಟಿಗರು

    ಟೀಮ್ ಇಂಡಿಯಾ ಅಭ್ಯಾಸ ರದ್ದು
    ಅಡಿಲೇಡ್‌ನಲ್ಲಿ ಸೋಮವಾರ ಬಿದ್ದ ಮಳೆಯಿಂದಾಗಿ ಭಾರತ ತಂಡದ ಅಭ್ಯಾಸ ರದ್ದುಗೊಂಡಿತು. ಪಿತೃತ್ವ ರಜೆಯ ಮೇರೆ ನಾಯಕ ವಿರಾಟ್ ಕೊಹ್ಲಿ ಮಂಗಳವಾರ ತವರಿಗೆ ಪ್ರಯಾಣ ಬೆಳೆಸಲಿದ್ದು, ಇದಕ್ಕೆ ಮುನ್ನ ತಂಡದ ಆಟಗಾರರೊಂದಿಗೆ ಚರ್ಚಿಸಿದ್ದಾರೆ. ಈ ಮೂಲಕ, ಅಡಿಲೇಡ್‌ನಲ್ಲಿ 36 ರನ್‌ಗೆ ಆಲೌಟಾಗಿ ಕುಗ್ಗಿರುವ ಆಟಗಾರರ ಮಾನಸಿಕ ಸ್ಥೈರ್ಯ ಹೆಚ್ಚಿಸಲು ಪ್ರಯತ್ನಿಸಿದ್ದಾರೆ. ಭಾರತ ತಂಡ ಮಂಗಳವಾರ ಮೆಲ್ಬೋರ್ನ್‌ಗೆ ಪ್ರಯಾಣಿಸಲಿದೆ.

    ಜನವರಿ 3ರಿಂದ ರೋಹಿತ್ ಅಭ್ಯಾಸ
    ಗಾಯದಿಂದ ಚೇತರಿಕೆ ಕಂಡು ಈಗಾಗಲೆ ಆಸ್ಟ್ರೇಲಿಯಾಗೆ ತೆರಳಿರುವ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ, ಸಿಡ್ನಿಯ 2 ಕೊಠಡಿಗಳ ಅಪಾರ್ಟ್‌ಮೆಂಟ್‌ನಲ್ಲಿ ಹಾರ್ಡ್ ಕ್ವಾರಂಟೈನ್‌ನಲ್ಲಿದ್ದಾರೆ. 3ನೇ ಟೆಸ್ಟ್‌ಗೆ ಪೂರ್ವಭಾವಿಯಾಗಿ ಜನವರಿ 3ರಂದು ಅವರು ಅಭ್ಯಾಸ ಆರಂಭಿಸಲಿದ್ದಾರೆ. ಸದ್ಯ ಸಿಡ್ನಿಯಲ್ಲಿ ಕರೊನಾ ಪ್ರಕರಣಗಳ ಏರಿಕೆಯಿಂದ ಆತಂಕ ಮೂಡಿದ್ದು, ಒಂದು ವೇಳೆ ಸಿಡ್ನಿ ಟೆಸ್ಟ್ ಸ್ಥಳಾಂತರಗೊಂಡರೆ ರೋಹಿತ್ ಶರ್ಮ ಅವರನ್ನೂ ನ್ಯೂ ಸೌತ್ ವೇಲ್ಸ್ ಸರ್ಕಾರದ ಅನುಮತಿಯೊಂದಿಗೆ ಏರ್‌ಲಿಫ್ಟ್​ ಮಾಡುವ ನಿರೀಕ್ಷೆ ಇದೆ. ಸಿಡ್ನಿಯಲ್ಲಿದ್ದ ಆಸೀಸ್ ಆಟಗಾರರಾದ ಡೇವಿಡ್ ವಾರ್ನರ್ ಮತ್ತು ಸೀನ್ ಅಬೋಟ್ ಈಗಾಗಲೆ ಸಿಡ್ನಿಯಿಂದ ಮೆಲ್ಬೋರ್ನ್‌ಗೆ ಸ್ಥಳಾಂತರಗೊಂಡಿದ್ದಾರೆ. ಆದರೆ ರೋಹಿತ್‌ರನ್ನು 14 ದಿನಗಳ ಕ್ವಾರಂಟೈನ್ ನಡುವೆ ಸ್ಥಳಾಂತರ ಮಾಡಲು ಸಾಧ್ಯವಾಗಿಲ್ಲ.

    ಇದನ್ನೂ ಓದಿ: ಖೇಲೋ ಇಂಡಿಯಾ ಗೇಮ್ಸ್‌ಗೆ ಮಲ್ಲಕಂಬ ಸ್ಪರ್ಧೆ ಸೇರ್ಪಡೆ

    ರಾಹುಲ್ ಆರಂಭಿಕರಾಗಿ ಆಡಲಿ ಎಂದ ಗಾವಸ್ಕರ್
    ಕನ್ನಡಿಗ ಕೆಎಲ್ ರಾಹುಲ್ ಆಸೀಸ್ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಪೃಥ್ವಿ ಷಾ ಬದಲಿಗೆ ಆರಂಭಿಕರಾಗಿ ಆಡಬೇಕೆಂದು ಮಾಜಿ ನಾಯಕ ಸುನೀಲ್ ಗಾವಸ್ಕರ್ ಹೇಳಿದ್ದಾರೆ. ರಾಹುಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಭಾರತ ಉತ್ತಮ ಆರಂಭ ಪಡೆದರೆ ಎಲ್ಲವೂ ಬದಲಾಗಲಿದೆ. ಶುಭಮಾನ್ ಗಿಲ್ 5 ಅಥವಾ 6ನೇ ಕ್ರಮಾಂಕದಲ್ಲಿ ಆಡಲಿ ಎಂದು ಗಾವಸ್ಕರ್ ಹೇಳಿದ್ದಾರೆ. ಭಾರತ ತಂಡ ಸರಣಿಯ ಉಳಿದ ಪಂದ್ಯಗಳಲ್ಲಿ ಸಕಾರಾತ್ಮಕವಾಗಿ ಆಡದಿದ್ದರೆ, 0-4ರಿಂದ ಸರಣಿ ಸೋಲು ಕಾಣಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.

    ಟೀಮ್​ ಇಂಡಿಯಾ ಕೋಚ್ ರವಿಶಾಸ್ತ್ರಿ ವಜಾಗೊಳಿಸಲು ಕ್ರಿಕೆಟ್ ಪ್ರೇಮಿಗಳ ಆಗ್ರಹ

    ಬಾಕ್ಸಿಂಗ್ ಡೇ ಟೆಸ್ಟ್‌ಗೆ ಟೀಮ್ ಇಂಡಿಯಾದಲ್ಲಿ ಏನೇನು ಬದಲಾವಣೆಯಾಗಲಿದೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts