More

    ಹರ್ಭಜನ್‌ಗೆ ನಿಷೇಧ ಹೇರದಂತೆ ಶ್ರೀಶಾಂತ್​ ಬೇಡಿಕೊಂಡಿದ್ದೇಕೆ?

    ನವದೆಹಲಿ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದ ನಿಷೇಧ ಶಿಕ್ಷೆ ಮುಗಿಸಿ ಕ್ರಿಕೆಟ್‌ಗೆ ಮರಳಲು ಸಜ್ಜಾಗುತ್ತಿರುವ ವೇಗಿ ಎಸ್. ಶ್ರೀಶಾಂತ್ ಈ ಹಿಂದೆ ವೃತ್ತಿಜೀವನದಲ್ಲಿ ಹಲವಾರು ವಿವಾದಗಳನ್ನು ಎದುರಿಸಿದವರು. 2008ರ ಐಪಿಎಲ್‌ನಲ್ಲಿ ನಡೆದ ಸ್ಲ್ಯಾಪ್‌ಗೇಟ್ ಪ್ರಕರಣವೂ ಅದರಲ್ಲೊಂದು. ಸ್ಪಿನ್ನರ್ ಹರ್ಭಜನ್ ಸಿಂಗ್ ಐಪಿಎಲ್ ಪಂದ್ಯವೊಂದರ ಬಳಿಕ ಶ್ರೀಶಾಂತ್‌ಗೆ ಕಪಾಳಮೋಕ್ಷ ಮಾಡಿದ್ದು ಭಾರಿ ಗದ್ದಲ ಎಬ್ಬಿಸಿತ್ತು. ಆ ಪ್ರಕರಣವನ್ನು ಈಗ ಮೆಲುಕು ಹಾಕಿರುವ ಶ್ರೀಶಾಂತ್, ಹರ್ಭಜನ್ ಸಿಂಗ್ ಕಠಿಣ ಶಿಕ್ಷೆಯಿಂದ ಪಾರಾಗಿದ್ದು ಹೇಗೆ ಎಂಬುದನ್ನು ವಿವರಿಸಿದ್ದಾರೆ.

    2008ರ ಏಪ್ರಿಲ್‌ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಬಳಿಕ ಈ ಘಟನೆ ನಡೆದಿತ್ತು. ಆಗ ಪಂಜಾಬ್ ತಂಡದ ಪರ ಆಡುತ್ತಿದ್ದ ಶ್ರೀಶಾಂತ್‌ಗೆ ಮುಂಬೈ ಇಂಡಿಯನ್ಸ್ ಆಟಗಾರ ಹರ್ಭಜನ್ ಸಿಂಗ್ ಕೆನ್ನೆಗೆ ಹೊಡೆದಿದ್ದರು ಮತ್ತು ಶ್ರೀಶಾಂತ್ ಆಗ ಕಣ್ಣೀರು ಹಾಕಿದ್ದರು. ಪ್ರಕರಣದಲ್ಲಿ ಹರ್ಭಜನ್ ಸಿಂಗ್‌ಗೆ ನಿಷೇಧ ಶಿಕ್ಷೆ ವಿಧಿಸದಂತೆ ಬಿಸಿಸಿಐ ಎದುರು ಬೇಡಿಕೊಂಡಿದ್ದೆ ಮತ್ತು ಆಗಲೂ ಅತ್ತಿದ್ದೆ ಎಂದು ಶ್ರೀಶಾಂತ್ ಫೇಸ್‌ಬುಕ್ ಲೈವ್ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಕಿಂಗ್ಸ್ ಇಲೆವೆನ್ ಪಂಜಾಬ್ ಸುಂದರಿಯರಿಗೆ ಅಭಿಮಾನಿಗಳು ಫಿದಾ!

    ‘ನಾನು ಆಗ ತಮಾಷೆಯ ಮೂಡ್‌ನಲ್ಲಿದ್ದೆ ಮತ್ತು ಬಜ್ಜಿ (ಹರ್ಭಜನ್) ಕಾಲೆಳೆಯಲು ಮುಂದಾಗಿದ್ದೆ. ಆದರೆ ಬಜ್ಜಿ ಪಾ ಆಗ ಬೇರೆಯೇ ಮೂಡ್‌ನಲ್ಲಿದ್ದರು. ಹೀಗಾಗಿ ಅವರು ಸಿಟ್ಟಾಗಿದ್ದರು. ನನಗೆ ಆದ ಅದು ಅರ್ಥವಾಗಿರಲಿಲ್ಲ. ಬಳಿಕ ನಮ್ಮಿಬ್ಬರನ್ನೂ ಸಚಿನ್ ತೆಂಡುಲ್ಕರ್ ಸಮಾಧಾನ ಮಾಡಿದ್ದರು ಮತ್ತು ನೀವಿಬ್ಬರೂ ಒಂದೇ ತಂಡದ ಪರ ಆಡುವವರು ಎಂದಿದ್ದರು. ಬಳಿಕ ನಾವಿಬ್ಬರೂ ಜತೆಯಾಗಿಯೇ ರಾತ್ರಿಯ ಊಟ ಮಾಡಿದ್ದೆವು. ಆದರೆ ಮಾಧ್ಯಮಗಳು ಮಾತ್ರ ಅದನ್ನು ದೊಡ್ಡ ವಿವಾದವನ್ನಾಗಿ ಮಾಡಿದ್ದವು’ ಎಂದು ಶ್ರೀಶಾಂತ್ ಮೆಲುಕು ಹಾಕಿದ್ದಾರೆ.

    ಪ್ರಕರಣದಲ್ಲಿ ಐಪಿಎಲ್ ಶಿಸ್ತು ಸಮಿತಿ ನಡೆಸಿದ ವಿಚಾರಣೆಗೆ ಹರ್ಭಜನ್ ಮತ್ತು ಶ್ರೀಶಾಂತ್ ಇಬ್ಬರೂ ಹಾಜರಾಗಿದ್ದರು. ಆಗ ಐಪಿಎಲ್ ಕಮಿಷನರ್ ಎದುರು, ಹರ್ಭಜನ್‌ಗೆ ಏನೂ ಮಾಡದಂತೆ ಬೇಡಿಕೊಂಡಿದ್ದೆ. ಅವರಿಗೆ ನಿಷೇಧ ವಿಧಿಸುವುದು ಬೇಡವೆಂದು ಪ್ರಾರ್ಥಿಸಿದ್ದೆ. ಯಾಕೆಂದರೆ ಅವರೊಬ್ಬ ಮ್ಯಾಚ್ ವಿನ್ನರ್ ಮತ್ತು ನಾವಿಬ್ಬರೂ ಜತೆಯಾಗಿಯೇ ಭಾರತವನ್ನು ಪ್ರತಿನಿಧಿಸುವವರು ಎಂದು ಶ್ರೀಶಾಂತ್ ಹೇಳಿದ್ದಾರೆ. ಆದರೆ ಆಗ ಹರ್ಭಜನ್​ಗೆ 11 ಐಪಿಎಲ್​ ಪಂದ್ಯಗಳಿಂದ ನಿಷೇಧ ಹೇರಲಾಗಿತ್ತು.

    ಇದನ್ನೂ ಓದಿ: ಸಿಪಿಎಲ್‌ನತ್ತ ಮುಖ ಮಾಡಿದ ಪ್ರವೀಣ್ ತಂಬೆ

    ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿಕೊಂಡು ಸಂಕಷ್ಟದ ದಿನಗಳನ್ನು ಎದುರಿಸಿದ ಕಳೆದ 7 ವರ್ಷಗಳಲ್ಲಿ ಹರ್ಭಜನ್ ತಮಗೆ ಬೆಂಬಲವಾಗಿ ನಿಂತಿದ್ದರು ಎಂದೂ ಹೇಳಿಕೊಂಡಿರುವ ಶ್ರೀಶಾಂತ್, 2018ರಲ್ಲಿ ದುಲೀಪ್ ಟ್ರೋಫಿ ಪಂದ್ಯ ಕೇರಳದಲ್ಲಿ ನಡೆದಾಗ ಉತ್ತರ ವಲಯ ಪರ ಆಡುತ್ತಿದ್ದ ಹರ್ಭಜನ್ ಜತೆಗೆ ಗೌತಮ್ ಗಂಭೀರ್ ಮತ್ತು ವೀರೇಂದ್ರ ಸೆಹ್ವಾಗ್ ಅವರನ್ನೂ ಸ್ಥಳೀಯ ಹೋಟೆಲ್‌ನಲ್ಲಿ ಭೇಟಿಯಾಗಿದ್ದೆ ಎಂದು ಹೇಳಿದ್ದಾರೆ.

    ಬಾಬರ್ ಅಜಮ್‌ಗೆ ಸಾನಿಯಾ ಮಿರ್ಜಾ ಕೊಲೆ ಬೆದರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts