More

    ಪದ್ಮ ಪುರಸ್ಕಾರ ಗೋಸೇವೆಗೆ ಸಂದ ಗೌರವ ಎಂದ ಭಜನೆ ಗಾಯಕ ರಂಜಾನ್ ಖಾನ್​!

    ಜೈಪುರ: ಪದ್ಮಪುರಸ್ಕಾರದ ಗೌರವಕ್ಕೆ ಭಾಜನರಾದ ಎಲೆಮರೆಯ ಸಾಧಕರಲ್ಲಿ ಭಜನೆ ಗಾಯಕ ರಂಜಾನ್ ಖಾನ್ ಕೂಡ ಒಬ್ಬರು. ಅವರು ಈ ಗೌರವವನ್ನು ಗೋಸೇವೆಗೆ ಸಂದ ಗೌರವ ಎಂದು ಹೇಳಿಕೊಂಡು ದೇಶದ ಗಮನವನ್ನು ಗೋ ಸಂರಕ್ಷಣೆ ಕಡೆಗೆ ಸೆಳೆದಿದ್ದಾರೆ.

    ಕಳೆದ ವರ್ಷ ನವೆಂಬರ್​ನಲ್ಲಿ ಖಾನ್ ಪುತ್ರ ಫಿರೋಜ್ ಖಾನ್ ಬನಾರಸ್ ಹಿಂದು ಯೂನಿವರ್ಸಿಟಿಯಲ್ಲಿ ಸಂಸ್ಕೃತ ಪಾಠ ಮಾಡುವ ವಿಚಾರದಲ್ಲಿ ವಿವಾದಕ್ಕೀಡಾಗಿತ್ತು. ಈ ನಡುವೆ, ರಂಜಾನ್ ಖಾನ್​ಗೆ ಪದ್ಮ ಪುರಸ್ಕಾರದ ಗೌರವ ಲಭ್ಯವಾಗಿದ್ದು, ಅವರ ಗೋ ಸೇವೆ ಮತ್ತು ಕೃಷ್ಣ ಭಕ್ತಿ ಗಮನಸೆಳೆದಿದೆ.

    ನಾನು ಭಜನೆ ಹಾಡುವುದರ ಜತೆಗೆ ಕಳೆದ 15-16 ವರ್ಷಗಳಿಂದ ಗೋ ಶಾಲೆಗಳಲ್ಲಿ ಭಜನೆ ಹೇಳುತ್ತ ಗೋ ಸೇವೆ ಮಾಡುತ್ತಿದ್ದೆ. ಈ ಪುರಸ್ಕಾರ ನನಗೆ ಒಲಿಯುತ್ತದೆ ಎಂಬ ಕಲ್ಪನೆಯೂ ನನಗೆ ಇರಲಿಲ್ಲ. ಇದು ಗೋಸೇವೆ ಮಾಡಿದ್ದಕ್ಕೆ ಸಂದ ಗೌರವ ಎಂದೇ ನಾನು ಭಾವಿಸುತ್ತೇನೆ ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

    ಜೈಪುರದಿಂದ 35 ಕಿ.ಮೀ. ದೂರದ ಬಗ್ರು ಎಂಬಲ್ಲಿ ಮೂರು ರೂಮುಗಳ ಪುಟ್ಟ ಮನೆಯಲ್ಲಿ ಬದುಕು ಸಾಗಿಸುತ್ತಿರುವ ಖಾನ್, ಮುನ್ನಾ ಮಾಸ್ಟರ್ ಎಂದೇ ಗ್ರಾಮದಲ್ಲಿ ಜನಪ್ರಿಯರು. ಇಸ್ಲಾಂ ಧರ್ಮಾನುಯಾಯಿ ಆಗಿದ್ದರೂ, ಸಂಸ್ಕೃತ ಅಧ್ಯಯನ ಮಾಡಿರುವ ಅವರು ಶಾಸ್ತ್ರಿ ಪದವಿಯನ್ನು ಹೊಂದಿದ್ದಾರೆ. ಬಗ್ರುವಿನ ಶ್ರೀ ರಾಮದೇವ್ ಗೋಶಾಲಾ ಚೈತನ್ಯ ಧಾಮದಲ್ಲಿ ಸಂಜೆ ಆರತಿ ವೇಳೆ ಹಾರ್ಮೋನಿಯಂ ಹಿಡಿದು ಭಜನೆಗಳನ್ನು ಹಾಡುತ್ತಿರುತ್ತಾರೆ.

    ಮಗನ ವಿವಾದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ವಿವಾದದಿಂದ ದೂರ ಇರುವಂತೆ ಮಗನಿಗೆ ಹೇಳಿದ್ದೇನೆ. ನಾನು ಸಂಸ್ಕೃತ ಕಲಿತುದನ್ನು ಗಮನಿಸಿದ ಆತ ತಾನೂ ಸಂಸ್ಕೃತ ಕಲಿಯಬೇಕು ಎಂದು ಬಯಸಿದ. ಅವನು ಕಲಿತ. ಬಿಎಚ್​ಯುನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಕೂಡ ಆದ. ಅದೊಂದು ದೊಡ್ಡ ಸಾಧನೆಯೇ ಸರಿ ಎಂದು ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts