More

    ಒತ್ತಾಯದ ಮೇರೆಗೆ ಸ್ಪರ್ಧಿಸಿದ್ದೇನೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಈ ಬಾರಿ ಹುಬ್ಬಳ್ಳಿ ಅಂಜುಮನ್-ಎ-ಇಸ್ಲಾಂ ಸಂಸ್ಥೆಯ ಆಡಳಿತ ಮಂಡಳಿಯ ಚುನಾವಣೆಗೆ ಸ್ಪರ್ಧಿಸುವ ಉದ್ದೇಶ ಇರಲಿಲ್ಲ. ಮುತವಲ್ಲಿಗಳು ಹಾಗೂ ಸಮಾಜದ ಸ್ನೇಹಿತರ ಒತ್ತಾಯದ ಮೇರೆಗೆ ಸ್ಪರ್ಧೆ ಮಾಡಿದ್ದೇನೆ ಎಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಹೇಳಿದರು.

    ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಮಾತನಾಡಿದ ಅವರು, 1983ರಿಂದ ನಾನು ಎರಡು ಅವಧಿಗೆ ಅಂಜುಮನ್ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ, 1989ರ ಬಳಿಕ ಚುನಾವಣೆಯಲ್ಲಿ ನಾನು ನೇರವಾಗಿ ಸ್ಪರ್ಧೆ ಮಾಡಿಲ್ಲ. ಸಮಾಜದ ಹಿತ ಬಯಸುವ ತಂಡಕ್ಕೆ ಬೆಂಬಲ ನೀಡಿದ್ದೇನೆ. ಕಿರಿಯರಿಗೆ ಮಾರ್ಗದರ್ಶನ ಮಾಡುತ್ತ ಬಂದಿದ್ದೇವೆ. ಈ ಬಾರಿ ನೀವು ಬಂದರೆ ಎಲ್ಲವೂ ಸರಿ ಹೋಗುತ್ತದೆ ಎಂದು ಮುತವಲ್ಲಿಗಳು ಹಾಗೂ ಸಮಾಜದ ಹಿರಿಯರು ಒತ್ತಾಯ ಮಾಡಿದ್ದರು ಎಂದರು.

    ಕಳೆದ 25 ವರ್ಷಗಳಲ್ಲಿ ಅಂಜುಮನ್ ಸಂಸ್ಥೆ ಎಷ್ಟು ಬೆಳೆಯಬೇಕಿತ್ತು ಅಷ್ಟು ಬೆಳೆದಿಲ್ಲ. ಹಿಂದಿನ ಅಧ್ಯಕ್ಷ ರ ಅವಧಿ 2022ರ ಜೂನ್ ನಲ್ಲಿಯೇ ಮುಗಿದರೂ ಸಕಾಲಕ್ಕೆ ಚುನಾವಣೆ ನಡೆಯಲಿಲ್ಲ. ಕೆಲವೊಂದು ಕಾರಣಗಳಿಂದ ಕೋರ್ಟ್​ಗೆ ಹೋಗಿ ಚುನಾವಣೆಗೆ ತಡೆಯಾಜ್ಞೆ ತಂದರು. ಹಾಗಾಗಿ ಕಳೆದ 20 ತಿಂಗಳಿಂದ ಸಂಸ್ಥೆಯ ಆಡಳಿತ ಮಂಡಳಿಯ ಮಾಸಿಕ ಸಭೆ ಹಾಗೂ ಸಾಮಾನ್ಯ ಸಭೆ ನಡೆದಿಲ್ಲ ಎಂದರು.

    ಫೆ. 18ರಂದು ಮತದಾನ ನಡೆಯಲಿದೆ. ಈ ಚುನಾವಣೆಯಲ್ಲಿ ಗೆದ್ದು ನಮ್ಮ ತಂಡ ಅಧಿಕಾರಕ್ಕೆ ಬಂದ ತಕ್ಷಣ ಹುಬ್ಬಳ್ಳಿ ಸ್ಟೇಷನ್ ರಸ್ತೆಯಲ್ಲಿರುವ ಅಂಜುಮನ್ ಆಸ್ಪತ್ರೆಯನ್ನು ಬಂಕಾಪುರ ಚೌಕ ಬಳಿಯ ಅಂಜುಮನ್ ಸಂಸ್ಥೆಯ ಜಾಗಕ್ಕೆ ಸ್ಥಳಾಂತರಿಸುವ ಹಾಗೂ ಸ್ಟೇಷನ್ ರಸ್ತೆಯಲ್ಲಿನ ಆಸ್ಪತ್ರೆ ಕಟ್ಟಡವನ್ನು ವಾಣಿಜ್ಯ ಸಂಕೀರ್ಣವನ್ನಾಗಿ ಪರಿವರ್ತಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದರು.

    ಅಂಜುಮನ್ ಆಸ್ಪತ್ರೆಯಲ್ಲಿ ತಜ್ಞ ವೈದ್ಯರನ್ನು ನೇಮಿಸಿಕೊಳ್ಳಲು ಕ್ರಮ ಕೈಗೊಳ್ಳಲಾಗುವುದು. ತೀವ್ರ ನಿಗಾ ಘಟಕ, ವೆಂಟಿಲೇಟರ್, ಅಲ್ಟ್ರಾಸೊನೋಗ್ರಾಫಿಗಳಂಥ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಪ್ರತಿ ತಿಂಗಳು ಉಚಿತ ಆರೋಗ್ಯ ತಪಾಸಣೆ ಶಿಬಿರಗಳನ್ನು ಏರ್ಪಡಿಸಲಾಗುವುದು ಎಂದರು.

    ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿಗಳಾದ ದಾದಾಹಯಾತ್ ಕೈರಾತಿ, ಶಿರಾಜಅಹ್ಮದ್ ಕುಡಚಿವಾಲೆ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts