More

    ಬೀದಿನಾಯಿ ನಿಯಂತ್ರಣಕ್ಕೆ ಆಗ್ರಹ

    ತರೀಕೆರೆ: ಪಟ್ಟಣದ ಎಪಿಎಂಸಿ ಆವರಣದಲ್ಲಿ ಇತ್ತೀಚೆಗೆ ಕರುವೊಂದನ್ನು ಬೀದಿ ನಾಯಿಗಳು ಕೊಂದುಹಾಕಿವೆ. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ ಎಂದು ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್ ದೂರಿದರು.

    ಪುರಸಭೆ ಸಭಾಂಗಣದಲ್ಲಿ ಏರ್ಪಡಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಜನ ಆತಂಕಪಡುವಂತಾಗಿದೆ. ಹಾವಳಿ ನಿಯಂತ್ರಣಕ್ಕೆ ಪುರಸಭೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಟಿ.ಜಿ.ಲೋಕೇಶ್ ಮಾತನಾಡಿ, ಬೀದಿ ನಾಯಿಗಳ ಹಾವಳಿಯಿಂದ ಸಣ್ಣ ಮಕ್ಕಳು, ವೃದ್ಧರು ಮನೆಯಿಂದ ಹೊರಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಎಚ್ಚರ ತಪ್ಪಿದರೆ ಜೀವಕ್ಕೆ ಹಾನಿಯಾಗುವ ಸಾಧ್ಯತೆ ಇದೆ. ಪ್ರಾಣಿದಯಾ ಸಂಘದ ಅನ್ವಯ ರೂಪಿಸಿರುವ ಕಾನೂನಿನ ಹೊರತಾಗಿಯೂ ನಿಯಂತ್ರಣಕ್ಕೆ ಬೇಕಾದ ಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
    ಅಧ್ಯಕ್ಷ ಪರಮೇಶ ಮಾತನಾಡಿ, ಬೀದಿ ನಾಯಿಗಳನ್ನು ಸೆರೆಹಿಡಿಸಿ ಬೇರೆಡೆ ಸಾಗಿಸಲು ಟೆಂಡರ್ ಕರೆದರೂ ಗುತ್ತಿಗೆದಾರರು ಆಸಕ್ತಿ ವಹಿಸುತ್ತಿಲ್ಲ. ಸದ್ಯದಲ್ಲೇ ಪರ್ಯಾಯ ವ್ಯವಸ್ಥೆ ಮೂಲಕ ಹತೋಟಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
    ಟಿ.ಎಂ.ರಂಗನಾಥ್ ಮಾತನಾಡಿ, ಪಟ್ಟಣದ 3ನೇ ವಾರ್ಡ್‌ನಲ್ಲಿ ಮಂಗಳವಾರ ಕಿರು ನೀರು ಘಟಕಗಳ ಮೂಲಕ ಸರಬರಾಜು ಮಾಡಿದ ನೀರು ಶುದ್ಧೀಕರಿಸಿದ ಹೊರತಾಗಿಯೂ ಪಾಚಿ ಮಿಶ್ರಿತ ಹಸಿರು ಬಣ್ಣದಿಂದ ಕೂಡಿದ್ದು, ಜನ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಸಭೆಯ ಗಮನಕ್ಕೆ ತಂದರು.
    ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ, ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹೊಸದಾಗಿ ಹರಿಸಿರುವುದರಿಂದ ಹಸಿರು ಮಿಶ್ರಿತ ಬಣ್ಣಕ್ಕೆ ತಿರುಗಿದೆ. ಜಲಾಗಾರದಲ್ಲಿ ನೀರು ಶುದ್ಧೀಕರಿಸಿ ರಾಸಾಯನಿಕ ದ್ರಾವಣ (ಬ್ಲೀಚಿಂಗ್ ಪೌಡರ್) ಹಾಕಿದರೂ ನೀರಿನ ಬಣ್ಣ ಬದಲಾಗಲಿಲ್ಲ. ಹಾಗಾಗಿ ಸಂಜೆ ಹೊತ್ತಿಗೆ ಸಂಗ್ರಹಿಸಿದ್ದ ನೀರನ್ನು ಖಾಲಿ ಮಾಡಿಸಿ ಪುನಃ ಪಂಪ್‌ಮಾಡಿಕೊಂಡು ಶುದ್ಧ ನೀರು ಪೂರೈಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.
    ಟಿ.ಜಿ.ಲೋಕೇಶ್ ಮಾತನಾಡಿ, ಭದ್ರಾ ಜಲಾಶಯದಿಂದ ಬಲದಂಡೆ ನಾಲೆ ಮೂಲಕ ಪೂರೈಕೆಯಾಗುವ ನೀರು ಸ್ಥಗಿತವಾದಾಗಲೆಲ್ಲ ಪಟ್ಟಣದ ಜನತೆಯ ಅಗತ್ಯತೆ ಪೂರೈಸುತ್ತಿರುವ ಬೋರ್‌ವೆಲ್‌ಗಳ ಮೋಟಾರ್ ಕೆಟ್ಟು ನಿಂತರೆ ತಕ್ಷಣ ದುರಸ್ತಿಪಡಿಸಿ ನೀರು ಸರಬರಾಜು ಮಾಡಬೇಕು. ನೀರು ಪೂರೈಕೆ ಉದ್ದೇಶಕ್ಕೆ ಕಾಯ್ದಿರಿಸಿದ ಹಣ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಸಮಸ್ಯೆ ಉಲ್ಬಣಿಸದಂತೆ ಎಚ್ಚರವಹಿಸಬೇಕು ಅಧಿಕಾರಿಗಳಿಗೆ ಸೂಚಿಸಿದರು.
    ಮುಖ್ಯಾಧಿಕಾರಿ ಎಚ್.ಪ್ರಶಾಂತ್ ಮಾತನಾಡಿ, ಪಂಪ್‌ಸೆಟ್‌ಗೆ ಅಳವಡಿಸುವ ಮೋಟಾರ್ ದುರಸ್ತಿಗಾಗಿ ಪಾವತಿಸುವ ಹಣವನ್ನು ದುರುದ್ದೇಶದಿಂದ ಪೆಂಡಿಂಗ್ ಇಡುತ್ತಿಲ್ಲ. ಸಕಾಲದಲ್ಲೇ ಮೋಟಾರ್ ರಿಪೇರಿ ಮಾಡಿಸಿ ನೀರು ಸರಬರಾಜು ಮಾಡುವ ಪ್ರಯತ್ನ ಪುರಸಭೆಯಿಂದ ನಡೆಯುತ್ತಿದೆ ಎಂದು ತಿಳಿಸಿದರು.
    ಸ್ನಾನ, ವಸತಿಗೃಹ ಸರಿಪಡಿಸಿ: ಪೌರ ಕಾರ್ಮಿಕರ ವಾಸಕ್ಕೆ ನೀಡಿರುವ ವಸತಿಗೃಹಗಳು ಸಮಸ್ಯೆಯಿಂದ ಕೂಡಿವೆ. ಸ್ನಾನ, ಶೌಚಗೃಹಗಳು ಸಮರ್ಪಕವಾಗಿಲ್ಲ. ಅಲ್ಲಲ್ಲಿ ಪ್ರಚಾರಕ್ಕಾಗಿ ಅಳವಡಿಸಿ ತೆರವುಗೊಳಿಸಿರುವ ಹಳೇ ಬ್ಯಾನರ್‌ಗಳನ್ನು ಕಟ್ಟಿಕೊಂಡು ಸ್ನಾನ ಮಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ. ತಕ್ಷಣವೇ ಆಡಳಿತದ ಭಾಗವಾಗಿರುವ ಎಲ್ಲರೂ ಭೇಟಿ ನೀಡಿ ಸುಸಜ್ಜಿತ ವ್ಯವಸ್ಥೆ ರೂಪಿಸಿಕೊಡಬೇಕು ಎಂದು ಟಿ.ದಾದಾಪೀರ್ ಆಗ್ರಹಿಸಿದರು. ಎಚ್.ಪ್ರಶಾಂತ್ ಪ್ರತಿಕ್ರಿಯಿಸಿ, ಈಗಾಗಲೇ ಪೌರ ಕಾರ್ಮಿಕರ ವಸತಿ ಗೃಹಗಳಿರುವ ಸ್ಥಳಕ್ಕೆ 2 ಬಾರಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದೇವೆ. ಸ್ನಾನಗೃಹ ಇಲ್ಲದ ಕಡೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಸ್ಥಗಿತಗೊಂಡಿರುವ ಹೊಸ ವಸತಿ ಗೃಹ ನಿರ್ಮಾಣ ಕಾಮಗಾರಿಗೆ ವೇಗ ನೀಡಲಾಗಿದೆ. ಸದ್ಯದಲ್ಲೇ ಪೂರ್ಣವಾಗಲಿರುವ ವಸತಿಗೃಹಗಳನ್ನು 14 ಪೌರ ಕಾರ್ಮಿಕರಿಗೆ ಹಂಚಿಕೆ ಮಾಡಲಾಗುವುದು ಎಂದರು.
    ನಗರೋತ್ಥಾನ ಕಾಮಗಾರಿ ಶೀಘ್ರ ಪೂರ್ಣ: ಜಿಲ್ಲೆಯ ಎಲ್ಲ ಕಡೆ ಅಮೃತ್ ನಗರೋತ್ಥಾನದ 4ನೇ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಇಲ್ಲಿ ಶೇ.30ರಷ್ಟು ಮಾತ್ರ ಪೂರ್ಣವಾಗಿದೆ. ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಗುತ್ತಿಗೆದಾರರ ನಿರಾಸಕ್ತಿಗೆ ಕಾರಣವೇನು ಎಂದು ಟಿ.ಎಂ.ಭೋಜರಾಜ್ ಪ್ರಶ್ನಿಸಿದರು. ಮುಂದಿನ ಸಭೆಯೊಳಗೆ ಕಾಮಗಾರಿ ಮುಗಿಸದಿದ್ದರೆ ಕಪ್ಪುಪಟ್ಟಿ ಧರಿಸಿ ಸಭೆಗೆ ಆಗಮಿಸಲಾಗುವುದು ಎಂದು ಎಚ್ಚರಿಸಿದರು. ಅಧ್ಯಕ್ಷ ಪರಮೇಶ ಮಾತನಾಡಿ, ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಗುತ್ತಿಗೆದಾರರೊಂದಿಗೆ ಚರ್ಚಿಸಲಾಗಿದೆ. ಅವರು ಕೆಲಸಗಾರರ ಸಮಸ್ಯೆ ಇದೆ ಎನ್ನುತ್ತಿದ್ದಾರೆ. ಈ ವಿಚಾರವನ್ನು ಡಿಸಿ ಗಮನಕ್ಕೆ ತರಲಾಗಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳುವ ವಿಶ್ವಾಸವಿದೆ ಎಂದರು.
    ಎಲ್ಲರಿಗೂ ಸಮಾನ ಅನುದಾನ: 15ನೇ ವಾರ್ಡ್‌ನ ಅಭಿವೃದ್ಧಿ ಕಾಮಗಾರಿಗಳಿಗೆ 15ನೇ ಹಣಕಾಸು ಯೋಜನೆಯಡಿ ಬಿಡಿಗಾಸನ್ನೂ ಅನುದಾನ ನೀಡಿಲ್ಲ. ತಾರತಮ್ಯ ನೀತಿಯಿಂದ ಕೆಲಸಗಳು ಕುಂಠಿತವಾಗಿವೆ. ಜನರ ಪ್ರಶ್ನೆಗೆ ಉತ್ತರ ಇಲ್ಲದಂತಾಗಿದೆ ಎಂದು ಶಮೀಮ್ ಬಾನು ಬೇಸರ ವ್ಯಕ್ತಪಡಿಸಿದರು. ಪರಮೇಶ ಮಾತನಾಡಿ, ಪುರಸಭೆಯಲ್ಲಿ ಎಲ್ಲ ಸದಸ್ಯರನ್ನು ಸಮಾನವಾಗಿ ಕಾಣಲಾಗುತ್ತಿದೆ. ಹಿಂದಿನ ಅಧ್ಯಕ್ಷರು ಅನುದಾನ ಅಳವಡಿಸದಿರುವ ಕಾರಣ ಗೊತ್ತಿಲ್ಲ. ಇದೀಗ ಗಮನಕ್ಕೆ ಬಂದಿದ್ದು, ಅನುದಾನ ಹಂಚಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts