More

    ಹಾವೇರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ನೂರಾರು ಹುದ್ದೆ ಖಾಲಿ

    ವಿಜಯವಾಣಿ ವಿಶೇಷ ಹಾವೇರಿ
    ಜಿಲ್ಲೆಯಲ್ಲಿ ಕರೊನಾ ತೀವ್ರಗತಿಯಲ್ಲಿ ಏರುತ್ತಿದ್ದು, ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗದ ಸ್ಥಿತಿ ನಿರ್ವಣವಾಗಿದೆ. ಸೋಂಕಿತರ ಆರೈಕೆಯಲ್ಲಿ ತೊಡಗಿದ್ದ ಅನೇಕರಿಗೆ ಪಾಸಿಟಿವ್ ಬಂದಿದೆ. ಈ ನಡುವೆ ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯೂ ಬಹುದೊಡ್ಡ ಸಮಸ್ಯೆಯಾಗಿದೆ.
    ತಾಲೂಕಾಸ್ಪತ್ರೆ, ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಬರುವ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು, ತಂತ್ರಜ್ಞರು, ನರ್ಸ್​ಗಳು, ಡಿ ಗ್ರೂಪ್ ಸೇರಿ ನೂರಾರು ಹುದ್ದೆ ಖಾಲಿಯಿವೆ. ಅಗತ್ಯವಿರುವ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳುವಂತೆ ಸರ್ಕಾರ ಸೂಚಿಸಿದರೂ ಟೆಕ್ನಿಷಿಯನ್ಸ್, ಅನುಭವಿ ಸಿಬ್ಬಂದಿ ಸಿಗುತ್ತಿಲ್ಲ. ಲಕ್ಷ ರೂ. ವೇತನ ನೀಡುತ್ತೇವೆಂದರೂ ತಜ್ಞ ವೈದ್ಯರು ಬರುತ್ತಿಲ್ಲ. ಜತೆಗೆ ಆರೋಗ್ಯ ಇಲಾಖೆ ಸಿಬ್ಬಂದಿಯಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿದೆ. ಒಮ್ಮೆ ಸೋಂಕು ಕಾಣಿಸಿಕೊಂಡರೆ ಕನಿಷ್ಠ 15ದಿನಗಳವರೆಗೆ ಅವರು ಸೇವೆ ಲಭ್ಯರಾಗುವಂತಿಲ್ಲ. ಹೀಗಾಗಿ, ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆಗೆ ಸಿಬ್ಬಂದಿ ಕೊರತೆ ಬಹುವಾಗಿ ಕಾಡತೊಡಗಿದೆ. ಆದ್ದರಿಂದ ಸರ್ಕಾರ ಈಗಲೇ ಎಚ್ಚೆತ್ತುಕೊಂಡು ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡುವತ್ತ ಗಮನ ಹರಿಸಬೇಕಿದೆ.
    ಜಿಲ್ಲಾಸ್ಪತ್ರೆಯಲ್ಲೂ ಕೊರತೆ: ಜಿಲ್ಲಾಸ್ಪತ್ರೆ ಯಲ್ಲಿ 194 ಆಕ್ಸಿಜನ್ ಬೆಡ್, 20 ವೆಂಟಿಲೇಟರ್​ಗಳಿವೆ. ಎಲ್ಲ ಬೆಡ್​ಗಳೂ ಭರ್ತಿಯಾಗಿವೆ. ವೈದ್ಯರು, ನರ್ಸ್​ಗಳು ಹಗಲಿರುಳು ಶ್ರಮಿಸುವಂತಾಗಿದೆ. ಇದರ ಪರಿಣಾಮವಾಗಿ ಈಗಾಗಲೇ ಒಬ್ಬ ವೈದ್ಯ, 15ಕ್ಕೂ ಹೆಚ್ಚು ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದೆ. ತಿಂಗಳ ಹಿಂದಷ್ಟೇ 30 ಸಿಬ್ಬಂದಿಯನ್ನು ನೇಮಿಸಿಕೊಳ್ಳಲಾಗಿದೆ. ಆದರೂ ಇನ್ನೂ 30 ಹುದ್ದೆ ಖಾಲಿ ಇವೆ. ಜಿಲ್ಲಾಸ್ಪತ್ರೆಯಲ್ಲಿ ಸದ್ಯ ಟೆಕ್ನಿಷಿಯನ್ಸ್, ದಾದಿಯರ ಕೊರತೆ ತೀವ್ರವಾಗಿದೆ.
    ತಾಲೂಕಾಸ್ಪತ್ರೆಯಲ್ಲೂ ಸಮಸ್ಯೆ: ತಾಲೂಕಾಸ್ಪತ್ರೆ, ಸಮುದಾಯ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರು ಮತ್ತು ಸಿಬ್ಬಂದಿ ಕೊರತೆ ಸಾಕಷ್ಟಿದೆ. ತಾಲೂಕು ಆಸ್ಪತ್ರೆಗಳಲ್ಲಿ 67 ವೈದ್ಯರ ಪೈಕಿ 7 ಹುದ್ದೆ ಖಾಲಿಯಿದೆ. 71 ಲ್ಯಾಬ್ ಟೆಕ್ನಿಷಿಯನ್ ಹುದ್ದೆಗಳಲ್ಲಿ 23 ಹಾಗೂ 34 ಫಾರ್ವಸಿಸ್ಟ್ ಹುದ್ದೆಗಳಲ್ಲಿ 23, ಕಿರಿಯ ಆರೋಗ್ಯ ಸಹಾಯಕರ 316 ಹುದ್ದೆಗಳ ಪೈಕಿ 73 ಹುದ್ದೆಗಳು ಖಾಲಿಯಿವೆ. ಗ್ರೂಪ್ ಡಿ 430 ಹುದ್ದೆಗಳಲ್ಲಿ 98 ಸ್ಥಾನ ಭರ್ತಿಯಾಗಬೇಕಿದೆ. ಇರುವ ಸಿಬ್ಬಂದಿಯಲ್ಲೇ ಸಾರ್ವಜನಿಕರಿಗೆ ಆರೋಗ್ಯ ಸೇವೆ ನೀಡುತ್ತಿದ್ದಾರೆ.
    ಸರ್ಕಾರಿ ಆಸ್ಪತ್ರೆಗಳಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ಸಿಗುತ್ತಿದೆ. ಮಂಜೂರಾಗಿರುವ ಹುದ್ದೆಗಳನ್ನೂ ಸರ್ಕಾರ ಭರ್ತಿ ಮಾಡದ್ದರಿಂದ ಇರುವ ಸಿಬ್ಬಂದಿ ಮೇಲೆ ಒತ್ತಡ ಹೆಚ್ಚುತ್ತಿದೆ. ಕೋವಿಡ್ ತುರ್ತು ಸಂದರ್ಭದಲ್ಲಿ ಅನೇಕರು ರಜೆ ರಹಿತವಾಗಿ ಸೇವೆ ನೀಡುತ್ತಿದ್ದಾರೆ. ಅವರ ಮೇಲಿನ ಒತ್ತಡ ಕಡಿಮೆ ಮಾಡಿ ಉತ್ತಮ ಆರೋಗ್ಯ ಸೇವೆ ದೊರಕುವಂತೆ ಮಾಡಲು ಸರ್ಕಾರ ತುರ್ತಾಗಿ ಆರೋಗ್ಯ ಇಲಾಖೆಯಲ್ಲಿನ ಖಾಲಿ ಹುದ್ದೆ ಭರ್ತಿಗೆ ಗಮನ ಹರಿಸಬೇಕಿದೆ ಎಂಬುದು ನಾಗರಿಕರ ಒತ್ತಾಯವಾಗಿದೆ.

    ಆಸ್ಪತ್ರೆಗಳಲ್ಲಿ ಹಲವು ಹುದ್ದೆಗಳು ಖಾಲಿಯಿವೆ. ಅಗತ್ಯ ಸಿಬ್ಬಂದಿ ನೇಮಕಕ್ಕೆ ಆಯಾ ತಾಲೂಕು ವೈದ್ಯಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಈಗಾಗಲೇ ಕೆಲವೆಡೆ ನೇಮಕ ಮಾಡಿಕೊಂಡು ಕರೊನಾ ಸೋಂಕಿತರಿಗೆ ಉತ್ತಮ ಸೇವೆ ನೀಡಲಾಗುತ್ತಿದೆ. ಅಲ್ಲದೆ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಆರೋಗ್ಯ ಸಚಿವರು ತಜ್ಞ ವೈದ್ಯರು ಹಾಗೂ ಟೆಕ್ನಿಷಿಯನ್​ಗಳನ್ನು ಕೂಡಲೇ ನೇಮಿಸಲಾಗುವುದು ಎಂಬ ಭರವಸೆ ನೀಡಿದ್ದಾರೆ.
    | ಡಾ. ಎಚ್.ಎಸ್. ರಾಘವೇಂದ್ರಸ್ವಾಮಿ, ಹಾವೇರಿ ಡಿಎಚ್​ಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts