More

    ಅಮೆರಿಕ, ಬ್ರಿಟನ್​, ಪಾಕ್​, ಶ್ರೀಲಂಕಾ ಸೇರಿ ಎಲ್ಲೆಡೆ ತೈಲ ಬೆಲೆ ಅಪಾರ ಏರಿಕೆ: ಭಾರತದಲ್ಲಿ ಮಾತ್ರ ಅಗ್ಗವಾಗಲು ಮೋದಿ ಸರ್ಕಾರ ಕೈಗೊಂಡ ಕ್ರಮಗಳೇನು?

    ನವದೆಹಲಿ: ನರೇಂದ್ರ ಮೋದಿ ಸರ್ಕಾರವು ತೆಗೆದುಕೊಂಡ ನಿರ್ಣಾಯಕ ಕ್ರಮಗಳು ಜಾಗತಿಕ ತೈಲ ಬೆಲೆ ಏರಿಳಿತದಿಂದ ದೇಶದ ಸಾಮಾನ್ಯ ನಾಗರಿಕರನ್ನು ರಕ್ಷಿಸಿವೆ.

    ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಕೇಂದ್ರ ಸರ್ಕಾರ ಈ ರೀತಿ ಪ್ರತಿಕ್ರಿಯಿಸಿದೆ.

    ಅಕ್ಟೋಬರ್ 2021 ರಿಂದ ಅಕ್ಟೋಬರ್ 2023 ರವರೆಗಿನ ದತ್ತಾಂಶವು ಪ್ರಮುಖ ಮತ್ತು ನೆರೆಯ ದೇಶಗಳಲ್ಲಿ ಡೀಸೆಲ್ ಬೆಲೆಗಳಲ್ಲಿನ ಶೇಕಡಾವಾರು ಬದಲಾವಣೆಯನ್ನು ತೋರಿಸುತ್ತದೆ. ಈ ಅವಧಿಯಲ್ಲಿ ಭಾರತದಲ್ಲಿ ಡೀಸೆಲ್​ ಬೆಲೆಯು ಶೇಕಡಾ 1 ರಷ್ಟು ಕುಸಿತವನ್ನು ಕಂಡಿದ್ದರೆ, ಉಳಿದೆಲ್ಲ ದೇಶಗಳಲ್ಲಿ ಇದು ಏರಿಕೆಯಾಗಿದೆ.

    ಉದಾಹರಣೆಗೆ, ಶ್ರೀಲಂಕಾದಲ್ಲಿ ಶೇಕಡಾ 118ರಷ್ಟು ಏರಿಕೆಯಾಗಿದೆ. ಪಾಕಿಸ್ತಾನ (ಶೇ. 73), ನೇಪಾಳ (ಶೇ. 53) ಮತ್ತು ಬಾಂಗ್ಲಾದೇಶ (ಶೇ. 45) , ಅಮೆರಿಕ (ಶೇ. 39), ಕೆನಡಾ (ಶೇ. 31), ಸ್ಪೇನ್ (ಶೇ. 25), ಫ್ರಾನ್ಸ್ (ಶೇ. 24), ಇಟಲಿ (ಶೇ. 22), ಜರ್ಮನಿ (ಶೇ. 21) ಮತ್ತು ಬ್ರಿಟನ್ (ಶೇ. 13) ದೇಶಗಳಲ್ಲಿ ಡೀಸೆಲ್​ ಬೆಲೆ ಏರಿಕೆ ಕಂಡಿದೆ.

    ಇದೇ ಅವಧಿಯಲ್ಲಿ ಭಾರತದಲ್ಲಿ ಪೆಟ್ರೋಲ್ ಬೆಲೆ ಬದಲಾವಣೆಯ ಶೇಕಡಾ 5ರಷ್ಟು ಕಡಿಮೆಯಾಗಿದ್ದರೆ, ಹೆಚ್ಚಿನ ದೇಶಗಳಲ್ಲಿ ಇದು ಏರಿಕೆ ಕಂಡಿದೆ. ಪಾಕಿಸ್ತಾನದಲ್ಲಿ ಶೇ. 70, ಶ್ರೀಲಂಕಾದಲ್ಲಿ ಶೇ. 60, ನೇಪಾಳದಲ್ಲಿ ಶೇ. 40 ಮತ್ತು ಬಾಂಗ್ಲಾದೇಶದಲ್ಲಿ ಶೇ. 26 ರಷ್ಟು ಏರಿಕೆಯಾಗಿದೆ. ಇತರ ಪ್ರಮುಖ ದೇಶಗಳಾದ ಅಮೆರಿಕ (ಶೇ. 22), ಸ್ಪೇನ್ (ಶೇ. 16), ಫ್ರಾನ್ಸ್ (ಶೇ. 15), ಇಂಗ್ಲೆಂಡ್​(ಶೇ. 10) ಮತ್ತು ಕೆನಡಾ (ಶೇ. 8)ದಲ್ಲಿ ಪೆಟ್ರೋಲ್​ ಬೆಲೆ ಹೆಚ್ಚಳವಾಗಿದೆ.

    ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಇತ್ತೀಚೆಗೆ ಮೋದಿ ಸರ್ಕಾರದ ಕ್ರಮಗಳಿಂದ ದೇಶದಲ್ಲಿ ತೈಲ ಬೆಲೆ ಕಡಿಮೆಯಾಗಿದೆ ಎಂದು ಹೇಳಿದ್ದಾರೆ. “ಭಾರತದ ನೆರೆಹೊರೆಯಲ್ಲಿ 70-80%, ಉತ್ತರ ಅಮೆರಿಕಾದಲ್ಲಿ 40-50%ರಷ್ಟು ತೈಲ ಬೆಲೆಗಳು ಹೆಚ್ಚಾಗಿದ್ದರೆ, ಭಾರತದಲ್ಲಿ 5% ರಷ್ಟು ಕಡಿಮೆಯಾಗಿವೆ. ಪ್ರಧಾನಿ ಮೋದಿ ತೆಗೆದುಕೊಂಡ ನಿರ್ಣಾಯಕ ಕ್ರಮಗಳಿಂದಾಗಿ ಇದು ಸಾಧ್ಯವಾಗಿದೆ” ಎಂದು ಅವರು ಹೇಳಿದ್ದಾರೆ.

    ಜೂನ್‌ನಲ್ಲಿ ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, “ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಬೆಲೆ ಏರಿಕೆ ಸ್ಪಷ್ಟವಾಗಿ ಕಂಡುಬರುತ್ತದೆ. ವ್ಯಾಟ್ ಕಡಿತಗೊಳಿಸಿರುವುದರಿಂದ ಬಿಜೆಪಿ ಆಡಳಿತವಿರುವ ರಾಜ್ಯಗಳು ಪ್ರತಿಪಕ್ಷಗಳ ಆಡಳಿತದ ರಾಜ್ಯಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಹೆಚ್ಚಿನ ಆಮದುಗಳ ಹೊರತಾಗಿಯೂ ನಾವು ಇಂಧನ ಬೆಲೆಗಳನ್ನು ಕಡಿಮೆ ಮಾಡುತ್ತಿದ್ದೇವೆ” ಎಂದು ವಿವರಿಸಿದ್ದರು.

    ಈ ಹಿಂದೆ ಯುಪಿಎ ಸರ್ಕಾರದ ಅವಧಿಯಲ್ಲಿ ಇಂಧನ ಬೆಲೆಗಳನ್ನು ನಿಯಂತ್ರಿಸಲು ಸಾಧ್ಯವಾಗದಿದ್ದಾಗ, ಆಗಿನ ಪೆಟ್ರೋಲಿಯಂ ಸಚಿವ ವೀರಪ್ಪ ಮೊಯ್ಲಿ ಅವರು ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಪೆಟ್ರೋಲ್ ಪಂಪ್‌ಗಳನ್ನು ಮುಚ್ಚುವ ಪ್ರಸ್ತಾಪವನ್ನು ಸೆಪ್ಟೆಂಬರ್ 1, 2013 ರಂದು ಪರಿಗಣಿಸಿದ್ದರು!

    ದೆಹಲಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಮಾತನಾಡಿದ್ದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು, “ಒಳ್ಳೆಯ ವಿದೇಶಾಂಗ ನೀತಿ ಇಲ್ಲದಿದ್ದರೆ ಪೆಟ್ರೋಲ್ ಬೆಲೆ ತುಂಬಾ ಹೆಚ್ಚಾಗುತ್ತದೆ. ಅಡುಗೆ ಎಣ್ಣೆಯ ಬೆಲೆಯೂ ಹೆಚ್ಚಾಗುತ್ತದೆ. ಅಲ್ಲದೆ, ನಿಮ್ಮ ಮುಂದಿನ ಐಫೋನ್‌ನ ಬೆಲೆಯೂ ಹೆಚ್ಚಾಗುತ್ತದೆ” ಎಂದಿದ್ದರು.

    ಜೈಶಂಕರ್ ಅವರು ರಷ್ಯಾ-ಯೂಕ್ರೇನ್ ಯುದ್ಧದ ಕುರಿತು ಭಾರತದ ನಿಲುವಿನ ಬಗ್ಗೆ ಮಾತನಾಡುತ್ತಾ, ಇತರ ರಾಷ್ಟ್ರಗಳೊಂದಿಗಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಭಾರತೀಯ ನಾಗರಿಕರ ಹಿತಾಸಕ್ತಿಗಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದರು.

    ಫೆಬ್ರವರಿ 2022 ರಲ್ಲಿ ರಷ್ಯಾ-ಯೂಕ್ರೇನ್ ಸಂಘರ್ಷ ಪ್ರಾರಂಭವಾಗುವ ಮೊದಲು ಭಾರತವು ರಷ್ಯಾದಿಂದ ಶೇಕಡಾ 1 ಕಡಿಮೆ ತೈಲವನ್ನು ಆಮದು ಮಾಡಿಕೊಳ್ಳುತ್ತಿತ್ತು. ಯುದ್ಧಾರಂಭದ ನಂತರ ರಷ್ಯಾದಿಂದ ಆಮದು ಮಾಡಿಕೊಳ್ಳುವ ತೈಲುವು ದಿನಕ್ಕೆ 19.6 ಲಕ್ಷ ಬ್ಯಾರೆಲ್‌ಗಳಿಗೆ ಏರಿ, ಶೇಕಡಾ 42ಕ್ಕೆ ಹೆಚ್ಚಿತು. ಮೇ ತಿಂಗಳಲ್ಲಿ ಭಾರತ ಆಮದು ಮಾಡಿಕೊಂಡ 47 ಲಕ್ಷ ಬಿಪಿಡಿ (ಬ್ಯಾರೆಲ್​ ಪರ್ ಡೇ- ಪ್ರತಿದಿನಕ್ಕೆ ಬ್ಯಾರಲ್) ತೈಲದ ಪೈಕಿ ಒಪೆಕ್ ದೇಶಗಳು 18 ಲಕ್ಷ ಬಿಪಿಡಿ ಪೂರೈಸಿವೆ. ಇದು ಏಪ್ರಿಲ್‌ನಲ್ಲಿ ಆಮದು ಮಾಡಿಕೊಂಡ 21 ಲಕ್ಷ ಬಿಪಿಡಿಗಿಂತ ಕಡಿಮೆಯಾಗಿದೆ. ಅಂದರೆ, ರಷ್ಯಾದಿಂದ ಕಡಿಮೆ ಬೆಲೆಯಲ್ಲಿ ಹೆಚ್ಚಿನ ತೈಲವನ್ನು ಭಾರತ ಖರೀದಿ ಮಾಡಿದೆ.

    ಸ್ಮಾಲ್​ ಕ್ಯಾಪ್​ ಮ್ಯುಚೂವಲ್​ ಫಂಡ್​ಗಳಲ್ಲಿದೆ ದೊಡ್ಡ ಲಾಭ: ಎನ್​ಎಫ್​ಒ ಎಂದರೇನು? ಇದರಲ್ಲಿ ಹಣ ತೊಡಗಿಸಿದರೆ ಸಿಗುವ ಲಾಭ ಎಷ್ಟು?

    ರೂ 2,800 ಕೋಟಿಯ ರಾಕೆಟ್ ಲಾಂಚರ್‌ ಖರೀದಿಗೆ ರಕ್ಷಣಾ ಸಚಿವಾಲಯ ಅನುಮತಿ; ಈ ಷೇರುಗಳಿಗೆ ಸಿಗಲಿದೆ ಲಾಭ…

    ಪ್ರಧಾನಿ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಖರ್ಗೆ ಹೆಸರು: ಮಮತಾ ಬ್ಯಾನರ್ಜಿ ಪ್ರಸ್ತಾಪಕ್ಕೆ ಬೆಂಬಲ ದೊರೆತಿದ್ದೇಕೆ? ಖರ್ಗೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts