More

    6 ತಿಂಗಳಲ್ಲಿ ಹುಬ್ಬಳ್ಳಿ ಸ್ಪೋರ್ಟ್ಸ್ ಸೆಂಟರ್ ಪೂರ್ಣ

    ಹುಬ್ಬಳ್ಳಿ: ಹುಬ್ಬಳ್ಳಿ ಹಾಗೂ ಬೆಳಗಾವಿಯ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್​ಸಿಎ) ಮೈದಾನದಲ್ಲಿ ತಲಾ 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಸ್ಪೋರ್ಟ್ಸ್ ಸೆಂಟರ್ ಕಾಮಗಾರಿಯನ್ನು 6 ತಿಂಗಳಲ್ಲಿ ಪೂರ್ಣಗೊಳಿಸಲಾಗುವುದು ಎಂದು ಸಂಸ್ಥೆಯ ಕಾರ್ಯದರ್ಶಿ ಸಂತೋಷ ಮೆನನ್ ತಿಳಿಸಿದರು.

    ಬುಧವಾರ ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2015-16ರಲ್ಲಿ ಕಾಮಗಾರಿ ಆರಂಭಗೊಂಡರೂ ವಿಳಂಬವಾಗಿರುವುದು ನಿಜ. ಲೋಧಾ ಕಮಿಟಿಯ ಶಿಫಾರಸುಗಳ ಜಾರಿಯ ಪರಿಣಾಮ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಿಂದ ಹಣ ಬಿಡುಗಡೆಗೆ ಕೆಲ ಕಾಲ ತಡೆಯಾಗಿದ್ದು ಮತ್ತು ಕೋವಿಡ್​ನಿಂದ ವಿಳಂಬವಾಗಿದೆ ಎಂದು ಸ್ಪಷ್ಟನೆ ನೀಡಿದರು.

    ಬೆಳಗಾವಿಯಲ್ಲಿ ಮಂಗಳವಾರ ಹಾಗೂ ಹುಬ್ಬಳ್ಳಿಯಲ್ಲಿ ಬುಧವಾರ ಕೆಎಸ್​ಸಿಎ ಸ್ಪೋರ್ಟ್ಸ್ ಸೆಂಟರ್​ಗಳ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದ್ದೇವೆ. ಅಲ್ಲಿ ಡ್ರೆಸ್ಸಿಂಗ್ ರೂಮ್ ಸ್ವಿಮ್ಮಿಂಗ್ ಪೂಲ್, ಜಿಮ್ ಕಾಮೆಂಟರಿ ಬಾಕ್ಸ್, ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುತ್ತಿದೆ. 300 ಜನ ಕುಳಿತುಕೊಳ್ಳಲು ವ್ಯವಸ್ಥೆ ಇದೆ ಎಂದು ತಿಳಿಸಿದರು.

    ಹುಬ್ಬಳ್ಳಿಯಂಥ ನಗರದಲ್ಲಿ ಐಪಿಎಲ್ ಪಂದ್ಯ ಆಯೋಜಿಸುವ ನಿರ್ಧಾರವನ್ನು ಫಾಂಚೈಸಿಗಳು ಕೈಗೊಳ್ಳಬೇಕು. ಅವರು ಒಂದು ಪಂದ್ಯಕ್ಕೆ ಪ್ರೇಕ್ಷಕರಿಂದ 4.5ರಿಂದ 5 ಕೋಟಿ ರೂ. ಆದಾಯ ನಿರೀಕ್ಷೆ ಮಾಡುತ್ತಾರೆ. ಐಪಿಎಲ್ ಪಂದ್ಯಗಳನ್ನು ಹಂಚಿಕೆ ಮಾಡುವಲ್ಲಿ ಕೆಎಸ್​ಸಿಎ ಪಾತ್ರ ಇರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

    ಗದಗದಲ್ಲಿ ಕ್ರಿಕೆಟ್ ಮೈದಾನ ನಿರ್ವಣಕ್ಕೆ ಜಿಲ್ಲಾಡಳಿತ 13 ಎಕರೆ ಜಾಗ ಮಂಜೂರು ಮಾಡಿದೆ. ಒಂದೆರಡು ತಿಂಗಳಲ್ಲಿ ಅಲ್ಲಿ ಕನಿಷ್ಠ ಕ್ರಿಕೆಟ್ ಸೌಲಭ್ಯ ಕಲ್ಪಿಸಲಾಗುವುದು. ಕಾರವಾರದಲ್ಲಿ ಜಾಗ ಮಂಜೂರು ಮಾಡುವಂತೆ ಜಿಲ್ಲಾಡಳಿತವನ್ನು ಕೋರಿದ್ದೇವೆ ಎಂದರು.

    ಕೆಎಸ್​ಸಿಎ ಅಧ್ಯಕ್ಷ ರೋಜರ್ ಬಿನ್ನಿ, ಉಪಾಧ್ಯಕ್ಷ ಜೆ. ಅಭಿರಾಮ್ ಮ್ಯಾನೇಜಿಂಗ್ ಕಮಿಟಿ ಸದಸ್ಯ ತಿಲಕ ನಾಯ್ಡು, ಧಾರವಾಡ ವಲಯ ಅಧ್ಯಕ್ಷ ವೀರಣ್ಣ ಸವಡಿ, ಸಂಚಾಲಕ ಅವಿನಾಶ ಪೋತದಾರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts