ಕರೊನಾದಿಂದ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಕೆಲವು ಸೆಲೆಬ್ರಿಟಿಗಳು ತಮ್ಮದೇ ರೀತಿಯಲ್ಲಿ ದಾನ ಮಾಡಿ ಸುದ್ದಿ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಕೆಲವರು ಬಲಗೈಗೆ ಕೊಟ್ಟಿದ್ದು, ಎಡಗೈಗೆ ಗೊತ್ತಾಗಬಾರದು ಎಂದು ಸದ್ದಿಲ್ಲದೆ ಸಹಾಯಹಸ್ತ ಚಾಚುತ್ತಿದ್ದಾರೆ. ಅಂಥದ್ದರಲ್ಲಿ ಹೃತಿಕ್ ರೋಶನ್ ಸಹ ಒಬ್ಬರು. ಎನ್‌ಜಿಒ ಒಂದು ಹೃತಿಕ್ ಮಾಡುತ್ತಿರುವ ಕೆಲಸಗಳಿಗೆ ಧನ್ಯವಾದ ತಿಳಿಸದಿದ್ದರೆ, ಬಹುಶಃ ಹೃತಿಕ್ ಹೇಗೆಲ್ಲಾ ಸಹಾಯ ಮಾಡುತ್ತಿದ್ದಾರೆ ಎಂದು ಗೊತ್ತಾಗುತ್ತಲೇ ಇರಲಿಲ್ಲ.
ಇಷ್ಟಕ್ಕೂ ಹೃತಿಕ್ ಏನು ಮಾಡುತ್ತಿದ್ದಾರೆ ಮತ್ತು ಹೇಗೆ ಸಹಾಯ ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಬಂದರೆ, ಅದಕ್ಕೆ ಉತ್ತರ ಇಲ್ಲಿದೆ. ಮುಂಬೈನ ಪೌರಕಾರ್ಮಿಕರಿಗೆ ಅನುಕೂಲವಾಗುವಂತೆ ನೂರಾರು ಎನ್95 ಮತ್ತು ಎಫ್ಎಫ್ಪಿ3 ಮಾಸ್ಕ್‌ಗಳನ್ನು ಉಚಿತವಾಗಿ ಕೊಡುವುದರ ಜತೆಗೆ, ಎನ್‌ಜಿಒ ಒಂದರ ಜತೆಗೆ ಕೈಜೋಡಿಸಿದ್ದಾರೆ ಹೃತಿಕ್. ಈ ಎನ್‌ಜಿಒ ದಿನಗೂಲಿ ಕಾರ್ಮಿಕರಿಗೆ, ವರದ್ಧಾಶ್ರಮಗಳಿಗೆ ಮತ್ತು ಬಡಕುಟುಂಬದವರಿಗೆ ಪ್ರತಿದಿನ ಉಚಿತವಾಗಿ ಆಹಾರ ಒದಗಿಸುತ್ತಿದೆಯಂತೆ. ಇತ್ತೀಚೆಗೆ ಆ ಎನ್‌ಜಿಒ, ತುಂಬು ಹೃದಯದಿಂದ ಹೃತಿಕ್ ಧನ್ಯವಾದಗಳನ್ನು ಸಲ್ಲಿಸಿದೆ. ಇನ್ನು ಹೃತಿಕ್ ಸಹ ಆ ಎನ್‌ಜಿಒ ಮಾಡುತ್ತಿರುವ ಕೆಲಸಗಳನ್ನು ಹೊಗಳಿದ್ದಾರೆ.
ಇನ್ನು, ಅವರೆಲ್ಲಿದ್ದಾರೆ ಮತ್ತು ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ, ಹೃತಿಕ್ ಮುಂಬೈನ ತಮ್ಮ ಸ್ವಗೃಹದಲ್ಲೇ ಇದ್ದಾರೆ. ತಮ್ಮ ಮಾಜಿ ಪತ್ನಿ ಸೂಸಾನ್ ಮತ್ತು ಮಕ್ಕಳಾದ ಹ್ರೆಹಾನ್ ಮತ್ತು ಹೃದಾನ್ ಜತೆಗೆ ಸಮಯ ಕಳೆಯುತ್ತಿದ್ದಾರೆ. ಇದಕ್ಕೂ ಮೊದಲು ಫರ್ಹಾ ಖಾನ್ ನಿರ್ದೇಶನದ ‘ಸತ್ತೇ ಪೇ ಸತ್ತಾ’ ಚಿತ್ರದ ರೀಮೇಕ್‌ನಲ್ಲಿ ಅವರು ಅಮಿತಾಭ್ ಬಚ್ಚನ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ಅವರು ಆ ಚಿತ್ರದಿಂದ ಹೊರಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
https://www.vijayavani.net/sanchari-vijay-and-shruthi-naidus-charity-continues/