More

    ಸದ್ಗುರು ಅಂಕಣ: ಕೌಟುಂಬಿಕ ಸಂಬಂಧಗಳನ್ನು ನಿರ್ವಹಿಸುವ ವಿಧಾನ

    ಸದ್ಗುರು ಅಂಕಣ: ಕೌಟುಂಬಿಕ ಸಂಬಂಧಗಳನ್ನು ನಿರ್ವಹಿಸುವ ವಿಧಾನ ಸಂಸಾರವು ನಮ್ಮ ಸೀಮಿತತೆಗಳನ್ನು ತಿಳಿದುಕೊಳ್ಳಲು ಒಳ್ಳೆಯ ಆಧಾರವಾಗಿದೆ. ಕೆಲವೇ ಜನರ ನಡುವೆ ಒಂದು ಗೂಡಿನಲ್ಲಿ ಇರುತ್ತೀರಿ- ಅಂದರೆ, ಪ್ರತಿದಿನ ಏನೇ ಮಾಡಿದರೂ ಒಬ್ಬರ ಕಾಲನ್ನು ಒಬ್ಬರು ಮೆಟ್ಟಲೇ ಬೇಕಾಗುತ್ತದೆ. ಅವರು ನಿಮಗಿಷ್ಟವಿಲ್ಲದ ಕೆಲಸಗಳನ್ನು ಮಾಡುತ್ತಿದ್ದರೂ ಅವರ ಜೊತೆಯೇ ಇರಬೇಕಾಗುತ್ತದೆ. ಇದು ನಿಮ್ಮ 10 ಸಾವಿರ ಜನರ ಫೇಸ್​ಬುಕ್ ಪರಿವಾರದಂತಲ್ಲ-ಯಾರಾದರೂ ಇಷ್ಟವಾಗದಿದ್ದರೆ, ಅವರನ್ನು ಹೊರಹಾಕುವುದಕ್ಕೆ! ಇಷ್ಟಗಳು ಮತ್ತು ಕಷ್ಟಗಳನ್ನು ಮೀರಿ ಬೆಳೆಯಲು ಕುಟುಂಬ ಸುಂದರವಾದ ಸ್ಥಳವಾಗಿದೆ. ಇಷ್ಟಾನಿಷ್ಟಗಳು ನಮ್ಮೊಳಗಿನ ಪ್ರಚೋದನೆಗೆ ಆಧಾರವಾಗಿವೆ. ಇಷ್ಟಾನಿಷ್ಟಗಳೊಂದಿಗೆ ಸಿಲುಕಿಕೊಂಡಾಗ, ಅರಿವಿನ ಪ್ರಶ್ನೆಯೇ ಇಲ್ಲ. ಅಂಥ ಕ್ಷಣದಲ್ಲಿ, ಸ್ವಾಭಾವಿಕವಾಗಿ ಪ್ರಚೋದನಕಾರಿಯಾಗಿ ವರ್ತಿಸುತ್ತೀರಿ- ನೀವು ಇಷ್ಟಪಡುವುದಕ್ಕೆ ಅನುಕೂಲಕರವಾಗಿ, ಇಷ್ಟಪಡದಿದ್ದಕ್ಕೆ ಪ್ರತಿಕ್ರಿಯಾತ್ಮಕವಾಗಿ ವರ್ತಿಸುತ್ತೀರಿ.

    ಪರಿವಾರವೆಂದರೆ, ಇಷ್ಟವಿದ್ದರೂ, ಇಲ್ಲದಿದ್ದರೂ ಒಂದೇ ಗೂಡಿನಲ್ಲಿ ಸದಸ್ಯರ ಜೊತೆಗೆ ನಿರ್ದಿಷ್ಟ ಸಮಯದವರೆಗೂ ಇರುವುದು. ಸಂಗಾತಿಯಲ್ಲಿ ಕೆಲವು ಅಂಶಗಳು ಇಷ್ಟವಾಗದೇ ಹೋಗಬಹುದು. ಸ್ವಲ್ಪ ಸಮಯದ ನಂತರ, ‘ಅವರಿರುವುದೇ ಹಾಗೆ, ಪರವಾಗಿಲ್ಲ’ ಎನ್ನಬಹುದು. ಅವರೇನೂ ಬದಲಾಗಿಲ್ಲ, ಆದರೆ, ನಿಮಗೆ ಅವರ ಯಾವ ಅಂಶ ಚಿಂತೆಗೀಡುಮಾಡಿತ್ತೋ ಅದನ್ನು ಮೀರಿ ನಿಂತಿದ್ದೀರಿ. ಅದೇ ಬೇಸರದಿಂದ ವಿಧಿಯಿಲ್ಲದೇ ಒಪ್ಪಿಕೊಳ್ಳುವಂತೆ, ‘ಬೇರೆ ಯಾವ ದಾರಿ ಇದೆ? ನಾನು ಅನುಸರಿಸಿಕೊಳ್ಳಬೇಕಷ್ಟೆ’ ಎಂದುಕೊಂಡರೆ ಎಲ್ಲವೂ ವ್ಯರ್ಥವಾಗುತ್ತದೆ. ಆದರೆ, ‘ಹೌದು, ಅವರು ಇರುವುದೇ ಹೀಗೆ, ಆದರೆ ನನಗೇನೂ ಪರವಾಗಿಲ್ಲ. ನಾನು ಇವರೊಂದಿಗೆ ಸಂತೋಷದಿಂದ ಇರುತ್ತೇನೆ,’ ಎಂದುಕೊಂಡರೆ ಜಾಗೃತರಾಗಿದ್ದೀರಿ ಎಂದರ್ಥ.

    ಇಷ್ಟಾನಿಷ್ಟಗಳನ್ನು ಮೀರಿ ನಿಂತಾಗ, ನಿಮಗೆ ಅರಿವಿಲ್ಲದೆಯೇ ಜಾಗೃತರಾಗುತ್ತೀರಿ. ಗೊತ್ತಿಲ್ಲದೆಯೇ ಅಧ್ಯಾತ್ಮದತ್ತ ತಿರುಗಿರುತ್ತೀರಿ ಮತ್ತು ಇದು ಅಧ್ಯಾತ್ಮದತ್ತ ಸಾಗಲು ಉತ್ತಮವಾದ ಮಾರ್ಗ. ‘ನಾನು ಅಧ್ಯಾತ್ಮದ ದಾರಿಯಲ್ಲಿ ನಡೆಯುತ್ತೀನಿ’ ಎಂದು ಹೇಳಿಕೊಳ್ಳುವುದರಿಂದಲ್ಲ. ಆದರೆ, ಜಾಗೃತರಾದರೆ, ಇಷ್ಟಾನಿಷ್ಟಗಳನ್ನು ಎಲ್ಲವನ್ನೂ ಮೀರಿ ಅಧ್ಯಾತ್ಮದತ್ತ ತಿರುಗಿದ್ದೀರಿ ಎಂದರ್ಥ. ‘ಅಧ್ಯಾತ್ಮ’ ಎನ್ನುವ ಪದವನ್ನು ಬಳಸದೆಯೇ. ಅಧ್ಯಾತ್ಮದತ್ತ ಸಾಗಲು ಇರುವ ಉತ್ತಮ ದಾರಿಯೆಂದರೆ, ಜಾಗೃತರಾಗಿ ವಿಕಸನಗೊಳ್ಳುತ್ತ ಯಾವುದೇ ನಿರ್ಬಂಧದಿಂದ ಪ್ರತಿಕ್ರಿಯಾತ್ಮಕವಾಗದ ಹಂತವನ್ನು ತಲುಪುವುದು. ಇದಕ್ಕಾಗಿ ನಿಮ್ಮನ್ನು ತಯಾರಿಸಲು ಸಂಸಾರವು ಸೂಕ್ತವಾದ ಜಾಗ. ಯಾವುದೇ ರೀತಿಯ ಸಂಸಾರದಲ್ಲಿ ಇರಿ, ಅದು ಕೇವಲ ನಿಗದಿತ ಸಮಯದವರೆಗೂ, ಅಷ್ಟೇ. ಈ ಸಮಯವನ್ನು ಇಷ್ಟಾನಿಷ್ಟಗಳನ್ನು ಮೀರಿ ನೆಲೆಸಲು ಬಳಸಿಕೊಳ್ಳಬೇಕು.

    ಸುತ್ತಮುತ್ತ ಇರುವ ಜನರು ನಿಮ್ಮನ್ನು ಒಪು್ಪವುದಿಲ್ಲವೋ ಅದು ನಿಮಗೆ ಒಳ್ಳೆಯ ಜಾಗ. ನಾನು ಯಾವಾಗಲೂ ಹೇಳುವುದು, ‘ಯಾರನ್ನು ನೀವು ಸಹಿಸಲು ಸಾಧ್ಯವಿಲ್ಲವೋ, ಅಂಥವರೊಂದಿಗೇ ಸಂತೋಷದಿಂದ ಕೆಲಸ ಮಾಡಲು ಕಲಿಯಿರಿ. ಆಗ ಅದ್ಭುತಗಳನ್ನು ಅನುಭವಿಸುತ್ತೀರಿ’ ಎಂದು. ಇಷ್ಟಪಡುವವರ ಜೊತೆಯೇ ಇರಬೇಕೆಂದುಕೊಂಡರೆ, ಅಂಥವರೊಡನೇ ಇರಬೇಕೆಂಬ ನಿರ್ಬಂಧಕ್ಕೊಳಗಾಗುತ್ತೀರಿ. ಸಂಸಾರ ಎಂದೂ ಸಮಸ್ಯೆಯಲ್ಲ. ಇಷ್ಟಪಡುವುದರೊಂದಿಗೆ ಇರುವುದೇ ಸಮಸ್ಯೆ. ಇಷ್ಟವಾದದ್ದನ್ನು ಆರಿಸಿಕೊಳ್ಳಬೇಡಿ. ಇರುವುದನ್ನೇ ಅದ್ಭುತವನ್ನಾಗಿಸುವುದಕ್ಕೆ ಪ್ರಯತ್ನಿಸಿ.

    ಸುತ್ತಮುತ್ತ ಇರುವ ಜನರು ನಿಮ್ಮನ್ನು ಒಪು್ಪವುದಿಲ್ಲವೋ ಅದು ನಿಮಗೆ ಒಳ್ಳೆಯ ಜಾಗ. ಹಾಗೆಯೇ, ನಿಮ್ಮ ಸುತ್ತ ಈಗ ಯಾರು ಕುಳಿತುಕೊಂಡಿದ್ದಾರೆ ಎಂಬುದರ ಬಗ್ಗೆ ಚಿಂತಿಸಬೇಡಿ. ಆ ವ್ಯಕ್ತಿಯ ಜೊತೆ ಕುಳಿತಿರುವುದನ್ನು ಅದ್ಭುತ ಅನುಭವವನ್ನಾಗಿ ಮಾಡಿಕೊಳ್ಳಿ. ಹಾಗೆಂದು ಜೀವಮಾನವಿಡೀ ಜೊತೆಯೇ ಕುಳಿತಿರುತ್ತೀರಿ ಎಂದಲ್ಲ. ಪ್ರತಿಯೊಬ್ಬರೂ ಬರುತ್ತಾರೆ, ಹೋಗುತ್ತಾರೆ. ಒಂದೋ, ಅವರು ಬಂದು ಹೋಗುತ್ತಾರೆ, ಇಲ್ಲವೇ ನೀವು ಬಂದು ಹೋಗುತ್ತೀರಿ. ಇಲ್ಲಿ ಯಾರೇ ಇರಲಿ, ಏನೇ ಇರಲಿ, ಈ ಕ್ಷಣವನ್ನು ಅತ್ಯುತ್ತಮವಾಗಿಸಿಕೊಳ್ಳಿ. ಬೇರೆ ಆಯ್ಕೆಗಳಿದ್ದರೆ, ಬದಲಾಗಬಹುದು, ಆದರೆ, ಮುಖ್ಯವಾದ ವಿಷಯ ಸಂತೋಷದಿಂದ ಬದಲಾಗಿ. ಇದು ಪ್ರಜ್ಞಾಪೂರ್ವಕ ಆಯ್ಕೆ ಯಾಗಬೇಕು, ನಿರ್ಬಂಧಿತ ಆಯ್ಕೆಯಲ್ಲ.

    ಫಲಿತಾಂಶಗಳನ್ನು ಅಳೆಯುವುದು: ಈ ಎಲ್ಲ ಆಧ್ಯಾತ್ಮಿಕ ಪ್ರಕ್ರಿಯೆಗಳು ಕೆಲಸ ಮಾಡುತ್ತಿವೆಯೋ ಇಲ್ಲವೋ ಎಂದು ತಿಳಿಯುವುದು ಹೇಗೆ? ಫಲಿತಾಂಶಗಳಿಂದ ಮಾತ್ರ. ಅದೇ ಜನರ ಜೊತೆ, ಸ್ವಲ್ಪ ಹೆಚ್ಚಿನ ಸಂತೋಷದಿಂದ ಏಳುವುದು, ಮತ್ತಷ್ಟು ಸರಾಗವಾಗಿರುವುದು, ಅವರಿಂದ ಈಗ ಮೊದಲಿನಂತೆ ಕಿರಿಕಿರಿಯಾಗದೇ ಇರುವುದು, ಇದೆಲ್ಲದರ ಅರ್ಥ ಪ್ರಗತಿ ಸಾಧಿಸುತ್ತಿದ್ದೀರಿ ಎಂದು ಅರ್ಥ. ಎಲ್ಲೆಡೆಯೂ ಪ್ರಗತಿಯನ್ನು ಅಳೆಯುವುದು ಫಲಿತಾಂಶಗಳಿಂದ- ಇಲ್ಲಿ ಕೂಡ ಅಷ್ಟೇ.

    ಅಧ್ಯಾತ್ಮ ಪ್ರಕ್ರಿಯೆ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂದು ತಿಳಿದುಕೊಳ್ಳ ಬೇಕೆಂದರೆ, ಸುಮ್ಮನೆ ಗಮನಿಸಿ- ಹೊರಗಡೆ ಏನೇ ಸನ್ನಿವೇಶವಿದ್ದರೂ, ನಿಮ್ಮೊಳಗೇ ಸಂಘರ್ಷದಲ್ಲಿದ್ದೀರಾ ಎಂದು. ಸಂಘರ್ಷವಿದ್ದರೆ, ಇನ್ನೂ ಹೆಚ್ಚಿನ ಸಾಧನೆ ಮಾಡಬೇಕು. ಶಾರೀರಿಕವಾಗಿ ನಿಮ್ಮನ್ನೇನೂ ಹೊಡೆದುಬಡಿದು ಮಾಡಿಲ್ಲ. ಆದರೆ, ಏನೇನೋ ಹೇಳುತ್ತಿದ್ದಾರೆ ಅಷ್ಟೇ. ‘ಅವರಿಗೇನು ಚೆನ್ನಾಗಿ ತಿಳಿದಿದೆಯೋ’ ಅದನ್ನು ಅವರು ಮಾಡುತ್ತಾರೆ. ನಿಮಗೇನು ಚೆನ್ನಾಗಿ ತಿಳಿದಿದೆಯೋ ನೀವು ಅದನ್ನು ಮಾಡಿ. ಅತ್ಯುತ್ತಮವಾದದ್ದು ಗೊತ್ತಿದ್ದರೆ ಹಾಯಾಗಿರುತ್ತೀರಿ. ಸೌಖ್ಯವಾಗಿದ್ದರೆ, ಅವರನ್ನೂ ಪರಿವರ್ತಿಸಬಹುದೇನೋ, ಆದರೆ ತಕ್ಷಣಕ್ಕೆ ಅಷ್ಟೊಂದು ಮಾಡಬಹುದೆಂದು ಹೇಳುವಷ್ಟು ದೂರ ನಾನು ಹೋಗುವುದಿಲ್ಲ. ನಿಮ್ಮನ್ನು ಯಾರಾದರೂ ಬೈಯುತ್ತಿದ್ದರೆ ಅಥವಾ ರೇಗಾಡುತ್ತಿದ್ದರೂ ಪರವಾಗಿಲ್ಲ. ನೀವೇ ನಿಮಗೆ ಒಂದು ಪದಕೋಶವನ್ನು ಬರೆದುಕೊಂಡು, ಬೈಗಳನ್ನೆಲ್ಲ ಒಳ್ಳೆಯ, ಸಿಹಿಯಾದ ಪದಗಳಾಗಿ ಅನುವಾದಿಸ ಬಹುದು. ಏನೇ ಆದರೂ ಅವರಿಗೆ ಒಳ್ಳೆಯದೆನಿಸಿದ್ದನ್ನು ಮಾಡುತ್ತಿದ್ದಾರೆ ಎಂದು ನಿಮಗೆ ಅರಿವಿರಬೇಕು.

    ಕೆಸರಿನಿಂದ ಸುಗಂಧದ ಕಡೆಗೆ: ನಾವೆಲ್ಲರೂ ನಮಗಿಷ್ಟವಿಲ್ಲದ ಜನರು ಮತ್ತು ಸನ್ನಿವೇಶಗಳ ನಡುವೆ ಇರಬೇಕಾಗುತ್ತದೆ. ನಾವೆಲ್ಲಿರುತ್ತೇವೆ ಎಂಬುದು ನಮ್ಮ ಆಯ್ಕೆಯಲ್ಲ. ಆದರೆ ಅದರಿಂದ ಏನನ್ನು ಮಾಡುತ್ತೇವೆ ಎಂಬುದು ಸಂಪೂರ್ಣವಾಗಿ ನಮ್ಮ ಆಯ್ಕೆ. ಪ್ರಯೋಗಿಸಿ ನೋಡಿ. ಹಾಗೆ ಮಾಡಿದಾಗ ಹೊರಗಿನದೂ ನಿಧಾನವಾಗಿ ಆಯ್ಕೆಯಾಗುತ್ತದೆ. ಸಮಯ ಕಳೆದಂತೆ, ಸನ್ನಿವೇಶಗಳು ಸುಂದರವಾಗಿ ಜೋಡಣೆಯಾಗುತ್ತ ಹೋಗುತ್ತವೆ. ಮೊದಲು ವ್ಯವಸ್ಥಿತವಾಗಿ ಒಬ್ಬ ಸುಂದರ ಮನುಷ್ಯರಾಗಿ. ಬೇರೆಯವರು ನಿಮ್ಮನ್ನು ಹೇಗೆ ನೋಡುತ್ತಾರೆ ಎನ್ನುವುದು ಅವರಿಗೆ ಬಿಟ್ಟಿದ್ದು. ನನ್ನ ಪ್ರಪಂಚಾನುಭವ ಬಹಳ ಅದ್ಭುತವಾದದ್ದು. ನಾನು ಎಲ್ಲೇ ಹೋದರೂ ಜನರು ಆನಂದಬಾಷ್ಪ ಸುರಿಸುತ್ತಾರೆ. ನನಗಿನ್ನೇನು ಬೇಕು? ಎಲ್ಲೇ ಇದ್ದರೂ ಹೀಗೇ ಇರಬೇಕೆಂದು ನನ್ನನ್ನು ನಾನೇ ವ್ಯವಸ್ಥಿತವಾಗಿ ರೂಪಿಸಿಕೊಂಡಿದ್ದೇನೆ. ನಿಧಾನವಾಗಿ ಪ್ರಪಂಚವೂ ನನ್ನನ್ನು ಅನುಕರಿಸುತ್ತಿದೆ. ನೀವು ಇದನ್ನೇ ಮಾಡಿ. ಪ್ರಪಂಚದ ರಚನೆಯ ಬಗ್ಗೆ ಯೋಚಿಸಬೇಡಿ- ಸ್ವಲ್ಪ ಸಮಯದ ನಂತರ ಅದು ತಂತಾನೇ ಆಗುತ್ತದೆ. ಮೊದಲು ಅದ್ಭುತ ಮನುಷ್ಯರಾಗಿ.

    ಸದ್ಯಕ್ಕೆ ಅವರಿಗೆ ಕೊಚ್ಚೆಯಲ್ಲೇ ನಡೆಯಬೇಕೆನಿಸಿದೆ – ಸ್ವಲ್ಪ ಸಮಯ, ಅವರಿಗದು ಬೇಸರವಾಗುವ ತನಕ ನಡೆಯಲಿ, ಬಿಡಿ. ನೀವು ಹೇಗಿರಬೇಕೆಂದರೆ, ಕೊಚ್ಚೆಯಲ್ಲಿರುವ ಜನರೂ, ಮುಂದೊಮ್ಮೆ ನಿಮ್ಮನ್ನು ನೋಡಿ, ನಿಮ್ಮಂತೆಯೇ ಬದುಕಬೇಕು ಎಂದುಕೊಳ್ಳುವಂತೆ. ಅವರು ಕಟುವಾಗಿರುವುದಕ್ಕೆ ಕಾರಣ, ಅವರ ಜೀವನಾನುಭವ ಕಹಿಯಾಗಿರುವುದು ಮತ್ತು ಅತೃಪ್ತರಾಗಿರುವುದು. ಅವರ ಈ ಕಟುತ್ವ ಸಂಘರ್ಷದ ರೂಪದಲ್ಲಿ ಹೊರಬರುತ್ತದೆ. ಇದಲ್ಲದೆ, ಬೇರೆ ರೀತಿಯಲ್ಲೂ ಬದುಕಬಹುದು ಎಂದು ಅವರಿಗೆ ತಿಳಿಸಲು ನೀವು ಉದಾಹರಣೆಯಾಗಿ. ಯೋಗದಲ್ಲಿ ಅತಿ ಸಹಿಷ್ಣುತೆಯ ಚಿಹ್ನೆ ಎಂದರೆ, ತಾವರೆ ಹೂವಿನದು. ಏಕೆಂದರೆ ತಾವರೆ ಹೂವು ಚೆನ್ನಾಗಿ ಬೆಳೆಯುವುದೇ ಜಾಸ್ತಿ ಕೆಸರಿರುವ ಕಡೆ. ಕೆಸರು ಹೆಚ್ಚಿದ್ದಷ್ಟೂ ಉತ್ತಮ. ಅಂತಹ ಕೆಸರೂ ಎಂತಹ ಅಲೌಕಿಕ ಸೌಂದರ್ಯ ಮತ್ತು ಸುಗಂಧವಾಗಿ ಪರಿವರ್ತನೆಯಾಗುತ್ತದೆ. ಇದು ಅಧ್ಯಾತ್ಮ ಪ್ರಕ್ರಿಯೆ. ಕೆಸರಿನ ಒಂದು ಭಾಗವಾಗುವುದು ಅಧ್ಯಾತ್ಮ ಪ್ರಕ್ರಿಯೆಯಲ್ಲ. ಕೆಸರನ್ನು ಸುಗಂಧವಾಗಿ ಪರಿವರ್ತಿಸುವುದು ಅಧ್ಯಾತ್ಮ ಪ್ರಕ್ರಿಯೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts