More

    ಫುಟ್‌ಬಾಲ್ ದಿಗ್ಗಜ ಮರಡೋನಾಗೆ ಐದಲ್ಲ, 11 ಮಕ್ಕಳಂತೆ! ಆಸ್ತಿಗಾಗಿ ಜಗಳದ ಭೀತಿ

    ಬ್ಯೂನಸ್ ಐರಿಸ್: ಅರ್ಜೆಂಟೀನಾದ ಫುಟ್‌ಬಾಲ್ ದಿಗ್ಗಜ ಡೀಗೊ ಮರಡೋನಾ ಕಳೆದ ಬುಧವಾರ ಹೃದಯಾಘಾತದಿಂದ ಮೃತಪಟ್ಟಿದ್ದರು. ಜಾಗತಿಕ ಕ್ರೀಡಾ ವಲಯಕ್ಕೆ ಈ ಸುದ್ದಿ ಆಘಾತ ನೀಡಿತ್ತು. ಅರ್ಜೆಂಟೀನಾದ ಜನರು ಮರಡೋನಾಗೆ ಭಾವಪೂರ್ಣ ವಿದಾಯವನ್ನೂ ನೀಡಿದ್ದರು. ಅವರ ಅಕಾಲಿಕ ನಿಧನದ ಬೆನ್ನಲ್ಲೇ ಅವರ ಸ್ಥಿರಾಸ್ತಿಗಾಗಿ ಜಟಾಪಟಿ ಏರ್ಪಡುವ ಸಾಧ್ಯತೆ ಕಾಣಿಸಿದೆ. ಅಲ್ಲದೆ ಅವರಿಗೆ ಒಟ್ಟು ಐದಲ್ಲ, 11 ಮಕ್ಕಳಿದ್ದಾರೆ ಎಂದು ಹೇಳಲಾಗುತ್ತಿದೆ!

    ಅಕಾಲಿಕವಾಗಿ ಮೃತಪಟ್ಟ ಮರಡೋನಾ ಯಾವುದೇ ವಿಲ್ ಬರೆದಿಟ್ಟಿಲ್ಲ. ಇದರಿಂದಾಗಿ ಅವರ ಒಟ್ಟು 665 ಕೋಟಿ ರೂ. ಮೌಲ್ಯದ ಆಸ್ತಿಯ ಸ್ವಾಮ್ಯಕ್ಕಾಗಿ ಜಟಾಪಟಿ ಏರ್ಪಡುವ ಸಾಧ್ಯತೆ ಇದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ಹಲವು ಐಷಾರಾಮಿ ಕಾರುಗಳು ಮತ್ತು ಬೆಲೆಬಾಳುವ ಸ್ಮರಣಿಕೆಗಳು ಅವರ ಆಸ್ತಿಯಲ್ಲಿ ಸೇರಿವೆ.

    ಹಲವು ಮಹಿಳೆಯರ ಸಾಂಗತ್ಯ ಹೊಂದಿದ್ದರೂ, ಮರಡೋನಾಗೆ ಬಾಲ್ಯದ ಗೆಳೆತಿ ಕ್ಲೌಡಿಯಾ ವಿಲ್ಲೇನ್ ಏಕೈಕ ಅಧಿಕೃತ ಪತ್ನಿಯಾಗಿದ್ದಾರೆ. 1989ರಲ್ಲಿ ವಿವಾಹವಾಗಿ, 2003ರಲ್ಲಿ ವಿಚ್ಛೇದನ ಪಡೆದಿದ್ದರು. ಈ ದಾಂಪತ್ಯದಿಂದ ಪಡೆದ ಇಬ್ಬರು ಪುತ್ರಿಯರಲ್ಲದೆ, ವಿವಾಹೇತರ ಸಂಬಂಧದಿಂದ ಓರ್ವ ಪುತ್ರಿ ಮತ್ತು ಇಬ್ಬರು ಪುತ್ರರನ್ನು ಹೊಂದಿದ್ದಾರೆ. ಮರಡೋನಾ ಒಪ್ಪಿಕೊಂಡಿರುವ ಈ ಐವರು ಮಕ್ಕಳಲ್ಲದೆ, ಅವರಿಗೆ ಇನ್ನೂ 6 ಮಕ್ಕಳಿರುವ ಅನುಮಾನಗಳಿವೆ. ಈ ಮಕ್ಕಳ ತಂದೆ ತಾವೆಂಬ ಆರೋಪಗಳನ್ನು ಮರಡೋನಾ ಒಪ್ಪಿಕೊಂಡಿಲ್ಲ ಮತ್ತು ಡಿಎನ್‌ಎ ಪರೀಕ್ಷೆಗಳಿಗೂ ನಿರಾಕರಿಸಿದ್ದರು. ಒಟ್ಟಾರೆ 7 ಮಹಿಳೆಯರಿಂದ ಅವರು 11 ಮಕ್ಕಳನ್ನು ಹೊಂದಿದ್ದರು ಎಂಬ ಆರೋಪ ಅವರ ಮೇಲಿದೆ. ಇದರೊಂದಿಗೆ ತಮ್ಮದೇ ಫುಟ್‌ಬಾಲ್ ತಂಡವನ್ನು ಕಣಕ್ಕಿಳಿಸಬಹುದಾದಷ್ಟು ಮಕ್ಕಳು ಅವರಿಗೆ ಇದ್ದಾರೆ ಎಂದೂ ತಮಾಷೆ ಮಾಡಲಾಗುತ್ತಿದೆ.

    ವಿಚ್ಛೇದಿತ ಪತ್ನಿ ಕ್ಲೌಡಿಯಾ ಅವರಿಂದ ಪಡೆದ ಇಬ್ಬರು ಪುತ್ರಿಯರಾದ ಡಾಲ್ಮಾ ಮತ್ತು ಗಿಯಾನಿನ್ನಾ ಜತೆಗೆ ಮರಡೋನಾ, ಗೆಳತಿ ವೆರೋನಿಕಾ ಒಜೆಡಾ ಅವರಿಂದ ಡೀಗೋ ಫೆರ್ನಾನೊ ಎಂಬ ಪುತ್ರನನ್ನು ಹೊಂದಿದ್ದಾರೆ. ಮತ್ತೋರ್ವ ಗೆಳತಿ ಹಾಗೂ ಬಾರ್ ಉದ್ಯೋಗಿ ವಲೇರಿಯಾ ಸಬ್ಲಲಿನ್ ಅವರಿಂದ ಪಡೆದ ಪುತ್ರಿ ಜಾನಾ ಮರಡೋನಾ ಮತ್ತು ಇಟಲಿಯ ಗಾಯಕಿ ಕ್ರಿಟಿನಿಯಾ ಸಿಂಗಾರಾ ಅವರಿಂದ ಪಡೆದ ಪುತ್ರ ಡೀಗೋ ಸಿಯಾಗ್ರಾ ಅವರನ್ನೂ ತಮ್ಮ ಮಕ್ಕಳೆಂದು ಅವರು ಒಪ್ಪಿಕೊಂಡಿದ್ದರು.

    ಇನ್ನು ಇತರ ವಿವಾಹೇತರ ಸಂಬಂಧಗಳಿಂದ ಮರಡೋನಾಗೆ ಕನಿಷ್ಠ 6 ಮಕ್ಕಳಿದ್ದಾರೆ ಎಂಬ ಆರೋಪಗಳಿವೆ. ಈ ಪೈಕಿ ತಂದೆಯ ಪ್ರೀತಿಯಿಂದ ವಂಚಿತರಾದ ನಾಲ್ವರು ಮಕ್ಕಳು ಕ್ಯೂಬಾದಲ್ಲೇ ಇದ್ದಾರೆ ಎನ್ನಲಾಗುತ್ತಿದೆ. ಡ್ರಗ್ಸ್ ವ್ಯಸನದಿಂದ ಹೊರಬರಲು ಪುನಶ್ಚೇತನಕ್ಕಾಗಿ ಅವರು ಕ್ಯೂಬಾದಲ್ಲಿದ್ದ ವೇಳೆ ಈ ಮಕ್ಕಳು ಜನಿಸಿದ್ದರು ಎನ್ನಲಾಗುತ್ತಿದೆ.

    ಮರಡೋನಾ ಬದುಕಿದ್ದಾಗಲೇ ಅವರ ಆಸ್ತಿಗಾಗಿ ಜಗಳ ಏರ್ಪಟ್ಟಿತ್ತು. ಕಳೆದ ವರ್ಷ ಪುತ್ರಿ ಗಿಯಾನಿನ್ನಾ ಜತೆಗಿನ ಜಗಳದಿಂದ ಮರಡೋನಾ, ಮಕ್ಕಳು ತನ್ನ ಬಗ್ಗೆ ಸರಿಯಾದ ಕಾಳಜಿ ವಹಿಸುತ್ತಿಲ್ಲ ಎಂದು ದೂರಿ, ತನ್ನೆಲ್ಲ ಆಸ್ತಿಯನ್ನು ಚಾರಿಟಿಗೆ ನೀಡುವ ಬೆದರಿಕೆ ಹಾಕಿದ್ದರು. ಆದರೆ ಅರ್ಜೆಂಟೀನಾದ ಕಾನೂನಿನ ಅನ್ವಯ ವ್ಯಕ್ತಿಯೊಬ್ಬ ತನ್ನ ಆಸ್ತಿಯ ಐದನೇ ಒಂದು ಭಾಗವನ್ನಷ್ಟೇ ಚಾರಿಟಿಗೆ ನೀಡಬಹುದಾಗಿದೆ. 3ನೇ 2 ಭಾಗದ ಆಸ್ತಿ ಪತ್ನಿ ಅಥವಾ ಮಕ್ಕಳಿಗೆ ಸೇರಬೇಕು. ಈ ನಡುವೆ 31 ವರ್ಷ ಪುತ್ರಿ ಗಿಯಾನಿನ್ನಾ ಜತೆ ಮರಡೋನಾ ಕಳೆದ ಅಕ್ಟೋಬರ್‌ನಲ್ಲಿ 60ನೇ ಜನ್ಮದಿನದಂದು ರಾಜಿಯಾಗಿದ್ದರು ಎನ್ನಲಾಗಿದೆ.

    ಮರಡೋನಾ ಸಾವಿನ ಬಗ್ಗೆ ತನಿಖೆ ಆರಂಭ
    ಡೀಗೊ ಮರಡೋನಾ ಸಾವಿನ ಬಗ್ಗೆ ತನಿಖೆ ಆರಂಭಗೊಂಡಿದೆ. ಹೃದಯಾಘಾತಕ್ಕೊಳಗಾದ 60 ವರ್ಷದ ಮರಡೋನಾಗೆ ಸಕಾಲದಲ್ಲಿ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ವಹಿಸಿದ್ದೇ ಸಾವಿಗೆ ಕಾರಣ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರ ವೈಯಕ್ತಿಕ ವೈದ್ಯರ ಕಚೇರಿ ಮತ್ತು ಮನೆ ಮೇಲೆ ಭಾನುವಾರ ದಾಳಿ ನಡೆಸಲಾಗಿದೆ. ಮರಡೋನಾ ಸಂಬಂಧಿಕರ ಹೇಳಿಕೆಗಳನ್ನು ಪಡೆದುಕೊಳ್ಳಲಾಗುತ್ತಿದೆ. ಮರಡೋನಾರ ವೈದ್ಯಕೀಯ ದಾಖಲೆಗಳನ್ನು ಪಡೆದುಕೊಳ್ಳುವ ಸಲುವಾಗಿ ಡಾ. ಲಿಯೊಪೊಲ್ಡೊ ಲುಕ್ಯು ಮನೆ, ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ. ನವೆಂಬರ್ 3ರಂದು ಮೆದುಳು ಶಸಚಿಕಿತ್ಸೆಗೆ ಒಳಗಾಗಿದ್ದ ಮರಡೋನಾಗೆ ಕಳೆದ ಬುಧವಾರ ಮನೆಯಲ್ಲಿ ಹೃದಯಾಘಾತವಾಗಿತ್ತು. ಡ್ರಗ್ಸ್ ಮತ್ತು ಮದ್ಯದ ವ್ಯಸನ ಹೊಂದಿದ್ದ ಮರಡೋನಾ, ದೀರ್ಘಕಾಲದಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತ ಬಂದಿದ್ದರು. ಮರಡೋನಾ ಪುತ್ರಿಯರಾದ ಡಾಲ್ಮಾ ಮತ್ತು ಗಿಯಾನಿನ್ನಾ, ವೈದ್ಯರ ನಿರ್ಲಕ್ಷ್ಯದ ಬಗ್ಗೆ ಆರೋಪ ಮಾಡಿದ್ದರು. ಆದರೆ ಮರಡೋನಾರನ್ನು ಉಳಿಸಲು ನಾನು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದ್ದೆ ಎಂದು ವೈದ್ಯ ಲಿಯೊಪೊಲ್ಡೊ ಆರೋಪವನ್ನು ಈಗಾಗಲೆ ತಳ್ಳಿಹಾಕಿದ್ದಾರೆ.

    15 ವರ್ಷಗಳ ಬಳಿಕ ಬಾಕ್ಸಿಂಗ್ ರಿಂಗ್‌ಗೆ ಮರಳಿದ ಮೈಕ್ ಟೈಸನ್, ಕಾರಣವೇನು ಗೊತ್ತೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts