More

    ರಾಜಾಶ್ರಯದ ಜಾಗ ಮನರಂಜನೆಯ ಭಾಗ; ಕಂಬಳ ಆಚರಣೆಗೆ ಬಂದಿದ್ದು ಹೇಗೆ?

    ಬೆಂಗಳೂರು: ಕಂಬಳ ಕರಾವಳಿ ಕರ್ನಾಟಕದ ಜಾನಪದ ಕ್ರೀಡೆ. ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆಯೇ ಕಂಬಳ. ದಕ್ಷಿಣಕನ್ನಡ ಮತ್ತು ಈಗಿನ ಉಡುಪಿ ಜಿಲ್ಲೆಯ ಜಾನಪದದೊಂದಿಗೆ ಹಾಸು ಹೊಕ್ಕಾಗಿರುವ ಈ ಕ್ರೀಡೆ ಇದೀಗ ಬೆಂಗಳೂರಿಗೂ ಕಾಲಿಟ್ಟಿರುವುದು ಗೊತ್ತಿರುವ ವಿಚಾರವಾಗಿದೆ. ಮೊದಲ ಬಾರಿಗೆ ಬೆಂಗಳೂರಿನಲ್ಲಿ ನವೆಂಬರ್ 25 ಮತ್ತು 26 ರಂದು  ‘ಬೆಂಗಳೂರು ಕಂಬಳ ನಮ್ಮ ಕಂಬಳ’ ಶೀರ್ಷಿಕೆಯಡಿ ಕಂಬಳವನ್ನು ಆಯೋಜಿಸಲಾಗಿದೆ. ಈ ವೇಳೆ ಕೆಲವರಿಗೆ ಈ ಕಂಬಳ ಹೇಗೆ ಹುಟ್ಟಿಕೊಂಡಿದೆ ಎನ್ನುವ ಪ್ರಶ್ನೆ ಎದುರಾಗಿದೆ. ಬನ್ನಿ ಈ ಕುರಿತಾಗಿ ತಿಳಿದುಕೊಳ್ಳೋಣ…

    ಕರಾವಳಿಯ ರೈತಾಪಿ ಜನರು ಭತ್ತದ ಕೊಯಿಲಿನ ನಂತರ ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕ್ರೀಡೆ ಕಳೆದ ಅನೇಕ ವರ್ಷಗಳಿಂದ ಸಾಂಘಿಕ ಬಲದೊಂದಿಗೆ ಬೆಳೆಯುತ್ತಿದೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುವ ಈ ಕ್ರೀಡೆಯಲ್ಲಿ ಕೋಣಗಳೊಂದಿಗೆ ಅವುಗಳನ್ನು ಓಡಿಸುವಾತನ ಪಾತ್ರವೂ ಮುಖ್ಯ.

    ತುಳುವಿನಲ್ಲಿ ಕಂಪ ಎಂದರೆ ಕೆಸರು, ಕಳ ಎಂದರೆ ವೇದಿಕೆ. ಕಂಪದ ಕಳ ಅಥವಾ ಕಂಪದ ಪೊಲ ಕ್ರಮೇಣ ಕಂಬುಲ ಅಥವಾ ಕಂಬಳ ಆಗಿರಬಹುದು ಎಂಬ ವಾದವಿದೆ. ಕೃಷಿ ಬದುಕಿನಲ್ಲಿ ರೈತರ ಮನರಂಜನೆಯ ಭಾಗವಾಗಿ ಜಾನಪದ ಸಂಪ್ರದಾಯ-ಆಚರಣೆಗಳ ಹೆಸರಿನಲ್ಲಿ ಮುಂದುವರಿದ ಕೋಣಗಳ ಓಟ ಕಾಲಾನುಕ್ರಮದಲ್ಲಿ ಕಂಬಳದ ರೂಪ ಪಡೆದಿದೆ.

    ಕಂಬಳಕ್ಕೆ ರಾಜಾಶ್ರಯವೂ ಇತ್ತು. 60-75 ವರ್ಷಗಳ ಹಿಂದೆ ಒಂದು ಜಮೀನುದಾರಿ ಕುಟುಂಬಕ್ಕೆ 10 ಎಕರೆಗಳಷ್ಟು ದೊಡ್ಡ ಗದ್ದೆಗಳಿರುತ್ತಿದ್ದವು. ವರ್ಷದ ಆರು ತಿಂಗಳು ದೊಡ್ಡ ಪ್ರಮಾಣದಲ್ಲೇ ಮಳೆಯಾಗುತ್ತಿದ್ದ ತುಳುನಾಡಿನಲ್ಲಿ ಕೆಸರುಗದ್ದೆಗಳೇ ಹೆಚ್ಚಿದ್ದಾಗ ಉಳುಮೆಗೆ ಬಲಿಷ್ಠ ಕೋಣಗಳೇ ಬೇಕಾಗುತ್ತಿತ್ತು. ಅಷ್ಟು ದೊಡ್ಡ ಗದ್ದೆಗಳನ್ನು ಉತ್ತು ಹದ ಮಾಡಬೇಕೆಂದರೆ ಸಾಕಷ್ಟು ಕೋಣಗಳೇ ಬೇಕಾಗಿತ್ತು. ಆ ಸಮಯದಲ್ಲಿ ಊರಿನ ಇತರರ ಸಹಾಯ ಕೇಳಿದಾಗ, ಎಲ್ಲ ಮನೆಯವರೂ ಕಳುಹಿಸುತ್ತಿದ್ದರು.

    ಉಳುಮೆ ಮಾಡಿ ಬಿತ್ತನೆಗೆ ಹದ ಮಾಡಿದ ನಂತರ ಮಧ್ಯಾಹ್ನ ಎಲ್ಲ ಕೋಣಗಳನ್ನು ಗದ್ದೆಯಿಂದ ಹೊರಗೆ ಕಳುಹಿಸಲಾಗುತ್ತಿತ್ತು. ಉಳುಮೆ ಮುಕ್ತಾಯವಾದುದನ್ನು ಅರಿತು ಕೋಣಗಳು ಸಂತಸದಿಂದ ವೇಗವಾಗಿ ಓಡುತ್ತಿದ್ದವು. ಓಡುವವರೂ ಸಂಭ್ರಮಿಸುತ್ತಿದ್ದರು. ಕೋಣಗಳು ಗದ್ದೆಗೆ ಇಳಿಯುವುದು ಮತ್ತು ಮೇಲಕ್ಕೆ ಹತ್ತಲು ಮಂಜೊಟ್ಟಿ ಇರುತ್ತಿತ್ತು. ಹೀಗೆ ವೇಗವಾಗಿ ಓಡುವ ಕೋಣಗಳ ಯಜಮಾನರಿಗೆ ಕಟ್ಟಪುಣಿಯಲ್ಲಿದ್ದ ತೆಂಗಿನ ಮರಗಳಿಂದ ಎಳನೀರು ಗೊನೆಗಳನ್ನು ಬಹುಮಾನವಾಗಿ ನೀಡುವುದು, ವೀಳ್ಯದೆಲೆ ಅಡಕೆ ನೀಡಿ ಗೌರವ, ಕೋಣಗಳ ಮೈಗೆ ಹಚ್ಚಲೆಂದು ಎಣ್ಣೆ ನೀಡುವುದು ನಡೆಯುತ್ತಿತ್ತು.

    ಬೃಹತ್ ಕೆಸರುಗದ್ದೆಗಳ (ಕಂಬಳ) ಉಳುಮೆ ಸಂದರ್ಭ ಮನರಂಜನೆಗಾಗಿ ಹುಟ್ಟಿ ಕ್ರಮೇಣ ಆಚರಣೆಯಾಗಿ ಬದಲಾಯಿತು ಕಂಬಳ. ಸಾಮೂಹಿಕ ಉಳುಮೆಯೊಂದಿಗೆ ಪ್ರಾರಂಭವಾದ ಕಂಬಳ, ಕ್ರಮೇಣ ಸಂಪ್ರದಾಯ ಆಚರಣೆ ಪದ್ಧತಿಗಳೊಂದಿಗೆ ಸ್ಪರ್ಧೆಗಳು ಪ್ರಾರಂಭಗೊಂಡವು. ಆಗೆಲ್ಲ ಕಣ್ಣಳತೆಯಲ್ಲಿ (ಹಗ್ಗದ ಕೋಣಗಳ) ವೇಗ ಗುರುತಿಸಿ ಹಾಗೂ ಕನೆಹಲಗೆಯ ನೀರು ಚಿಮ್ಮುವಿಕೆ ಗುರುತಿಸಿ ಬಹುಮಾನ ನೀಡಲಾಗುತ್ತಿತ್ತು.

    ಗಡಿಯಾರಗಳು ಚಾಲ್ತಿಗೆ ಬಂದ ನಂತರ ಸಮಯ ಪಾಲನೆ (ಸ್ಟಾಪ್​ವಾಚ್) ತೀರ್ಪಿಗೆ ಪ್ರಮುಖವಾಯಿತು. 1957-1958ರ ಸುಮಾರಿಗೆ ಜೋಡುಕೆರೆ ಕಂಬಳ, ಬಂಟ್ವಾಳದ ಇನೋಳಿ, ಕಾರ್ಕಳದ ಇರ್ವತ್ತೂರು, ಕೆಲ್ಲಪುತ್ತಿಗೆಗಳಲ್ಲಿ ಪ್ರಥಮ ಜೋಡುಕೆರೆ ಕಂಬಳಗಳು ನಡೆದವು. 1970ರಲ್ಲಿ ಕಾರ್ಕಳ ತಾಲೂಕಿನ ಬಜಗೋಳಿಯಲ್ಲಿ ಲವ-ಕುಶ ಜೋಡುಕರೆ ಕಂಬಳ ಐತಿಹಾಸಿಕ ವೆನಿಸಿತು. ಆಧುನಿಕ ಕಂಬಳಕ್ಕೆ ಸ್ಪಷ್ಟ ರೂಪುರೇಷೆ ಲಭಿಸಿದ್ದೇ ಇಲ್ಲಿ.

    ಕಂಬಳ ಓಟದ ವಿಧಗಳು : ಕಂಬಳದಲ್ಲಿ ಸ್ಪರ್ಧೆ ನಡೆಯುವುದು ಕೋಣಗಳ ಜೋಡಿಗಳ ಮಧ್ಯೆ. ಎರಡು ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳ ಜೊತೆಗೆ ಓಡಿಸುವಾತನೂ ಸೇರಿದರೆ ಒಂದು ಜೋಡಿ ಸ್ಪರ್ಧಿಯಾಗುತ್ತದೆ. ಇಂತಹ ಜೋಡಿಗಳ ಮಧ್ಯ ಸ್ಪರ್ಧೆ ನಡೆಯುತ್ತದೆ. ಈ ರೀತಿಯ ನೂರಾರು ಸ್ಪರ್ಧಿಗಳು ಪ್ರತಿ ಕಂಬಳದಲ್ಲಿಯೂ ಪಾಲ್ಗೊಳ್ಳುತ್ತಾರೆ.

    • ಹಗ್ಗದ ಓಟ: ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗದ ಮಧ್ಯೆ ಹಗ್ಗವೊಂದನ್ನು ಕಟ್ಟಿ, ಆ ಹಗ್ಗವನ್ನು ಹಿಡಿದು ಕೋಣಗಳನ್ನು ಓಡಿಸುವುದು. ಯಾವ ಜೋಡಿ ಇತರೆಲ್ಲವುಗಳಿಗಿಂತ ವೇಗವಾಗಿ ಓಟ ಮುಗಿಸುತ್ತವೆಯೋ ಅವು ವಿಜಯೀ ಜೋಡಿಗಳು.
    • ನೇಗಿಲು ಓಟ: ಎರಡು ಕೋಣಗಳ ಕುತ್ತಿಗೆಗೆ ಕಟ್ಟಿದ ನೊಗವೊಂದರ ಮಧ್ಯೆ ಮರದ ದಂಡವನ್ನು ಕಟ್ಟಿ, ಆ ದಂಡದ ಕೊನೆಗೆ ಸಣ್ಣ ನೇಗಿಲಿನಾಕಾರದ ಮರದ ತುಂಡೊಂದನ್ನು ಜೋಡಿಸಿ, ಆ ನೇಗಿಲನ್ನು ಹಿಡಿದು ಕೋಣಗಳನ್ನು ಓಡಿಸುವುದು.
    • ಅಡ್ಡ ಹಲಗೆ ಓಟ: ನೊಗದ ಮಧ್ಯೆ ಉದ್ದನೆಯ ದಂಡು ಇರುವ ಅಡ್ಡ ಹಲಗೆಯನ್ನು ಕಟ್ಟಿ, ಆ ಹಲಗೆಯ ಮೇಲೆ ನಿಂತು ಕೋಣಗಳನ್ನು ಓಡಿಸುವುದು. ಈ ತರಹದ ಹಲಗೆಯನ್ನು ಉತ್ತ ಗದ್ದೆಯ ಮಣ್ಣನ್ನು ಸಮನಾಗಿ ಹರಡಲು ಉಪಯೋಗಿಸುತ್ತಾರೆ.
    • ಕೆನೆ ಹಲಗೆ ಓಟ: ನೊಗದ ಮಧ್ಯೆ ಉದ್ದನೆಯ ದಂಡು ಇರುವ ದಪ್ಪನೆಯ ಮರದ ತುಂಡಿನಿಂದ ಮಾಡಿದ ಕೆನೆ ಹಲಗೆಯನ್ನು ಕಟ್ಟಿ ಅದರ ಮೇಲೆ ಒಂದು ಕಾಲನ್ನಿಟ್ಟು ಕೋಣಗಳನ್ನು ಓಡಿಸುವುದು. ಇದರಲ್ಲಿ ಕೆನೆ ಹಲಗೆಯಿಂದ ಮೇಲಕ್ಕೆ ಕೆಸರು ನೀರು ಚಿಮ್ಮಿಸುವುದು ಮುಖ್ಯ.

    ಈ ಪ್ರತಿಯೊಂದು ವಿಧದಲ್ಲೂ ಕಿರಿಯ ಮತ್ತು ಹಿರಿಯ ವಿಭಾಗಗಳಿರುತ್ತವೆ.ಕೋಣಗಳ ವಯಸ್ಸನ್ನು ಆಧರಿಸಿ ಅವುಗಳನ್ನು ಕಿರಿಯ ಅಥವಾ ಹಿರಿಯ ಎಂದು ವರ್ಗೀಕರಿಸುತ್ತಾರೆ. ಇದಕ್ಕಾಗಿ ಕೋಣಗಳ ಬಾಯಿಯಲ್ಲಿ ಉದುರಿದ ಹಲ್ಲುಗಳನ್ನು ಎಣಿಸುತ್ತಾರೆ. ಈ ರೀತಿ ವಿವಿಧ ವಿಭಾಗಗಳಲ್ಲಿ ಸ್ಪರ್ಧೆ ನಡೆಸಿ ವಿಜೇತರಾದ ಕೋಣಗಳ ಜೋಡಿಗಳಿಗೆ ಬಹುಮಾನ ನೀಡಲಾಗುತ್ತದೆ.

    ಬೆಂಗಳೂರು ಕಂಬಳ; ಟ್ರಾಫಿಕ್ ಪೊಲೀಸರಿಂದ ಪಾರ್ಕಿಂಗ್, ಎಂಟ್ರಿ–ಎಕ್ಸಿಟ್ ಮಾರ್ಗಸೂಚಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts