More

    ಕಾಲನಿ ಗೃಹಪ್ರವೇಶಕ್ಕೆ ಸಿದ್ಧತೆ

    ಹಳ್ಳಿಹೊಳೆ: ಬೈಂದೂರು ತಾಲೂಕು ಹಳ್ಳಿಹೊಳೆ ಗ್ರಾಮ ಪಂಚಾಯಿತಿ ಬಾಚುಕುಳಿ ಕೊರಗ ಕಾಲನಿಗೆ ಪ್ರಸ್ತುತ ಹೊಸ ಕಳೆ ಬಂದಿದೆ. ಐಟಿಡಿಪಿ ಮೂಲಕ ನಿರ್ಮಿತಿ ಕೇಂದ್ರ ನಿರ್ಮಿಸುತ್ತಿರುವ ಐದು ಮನೆಗಳಿಗೆ ಹೆಂಚು ಹೊದಿಸುವ ಕಾರ್ಯ ಪೂರ್ಣಗೊಂಡಿದ್ದು, ಗೃಹ ಪ್ರವೇಶದ ಕ್ಷಣಗಣನೆಯಲ್ಲಿದೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖ ಮನೆ ಪ್ರವೇಶಕ್ಕೆ ಸಿದ್ಧ್ದತೆ ನಡೆಯುತ್ತಿದೆ.
    ಹಳ್ಳಿಹೊಳೆ ಗ್ರಾಪಂ ಎದುರು ದಿಬ್ಬದ ಮಧ್ಯೆ ವಾಸ ಮಾಡುತ್ತಿದ್ದ ಕೊರಗರ ಮನೆ ಕುರಿತು ವಿಜಯವಾಣಿ ಸರಣಿ ವರದಿ ಮಾಡಿತ್ತು. ವರದಿ ಅನಂತರ ಅಂದಿನ ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಜಿಪಂ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ತಾಪಂ ಸದಸ್ಯ ಉಮೇಶ್ ಶೆಟ್ಟಿ ಕಲ್ಗದ್ದೆ, ಐಟಿಡಿಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು.
    ಬಿರುಕು ಬಿಟ್ಟ ಗೋಡೆ, ಟೊಳ್ಳು ಬಿದ್ದ ನೆಲ, ಗೆದ್ದಲು ಹಿಡಿದ ಮಾಡಿನ ಜಂತಿ, ಪಕಾಸು, ಜಾರಿದ ಹೆಂಚಿನ ಸೂರಿನಡಿ ಅಂಗೈಯಲ್ಲಿ ಜೀವ ಹಿಡಿದು ಮೂಲ ನಿವಾಸಿಗಳು ಬದುಕುತ್ತಿದ್ದರು. ಕಾಲನಿಯ ಸ್ಥಿತಿ ಗಮನಿಸಿದ ಜಿಲ್ಲಾಧಿಕಾರಿ, ಶಾಸಕರು ಹಾಗೂ ಐಟಿಡಿಪಿ ಅಧಿಕಾರಿಗಳು ಮನೆಗೆ ಅನುದಾನದ ಜತೆ ಶೀಘ್ರ ಸುಸಜ್ಜಿತ ಮನೆ ನಿರ್ಮಾಣದ ಭರವಸೆ ನೀಡಿದ್ದರು. ಆರಂಭದಲ್ಲಿ 1.75 ಲಕ್ಷ ರೂ. ಅನುದಾನದಲ್ಲಿ ಮನೆ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಂಡಿದ್ದು, ಮನೆಗಳ ನಿರ್ಮಾಣಕ್ಕೆ 3.50 ಲಕ್ಷ ರೂ. ಅನುದಾನ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಕೊರಗ ಕಾಲನಿ ಮನೆಗಳ ನಿರ್ಮಾಣಕ್ಕೆ 3.50 ಲಕ್ಷ ರೂ. ಅನುದಾನ ಒದಗಿಸಲು ಜಿಲ್ಲಾಧಿಕಾರಿ ತಾತ್ವಿಕ ಒಪ್ಪಿಗೆ ನೀಡಿದ್ದರು.

    ಸರಣಿ ವರದಿ ಪ್ರಕಟ: ಮೂಲನಿವಾಸಿಗಳು ಕಾಲನಿ ಸಮಸ್ಯೆ ಮೊಟ್ಟಮೊದಲು ತೆರೆದಿಟ್ಟಿದ್ದೇ ವಿಜಯವಾಣಿ. 2018ರಿಂದೀಚೆಗೆ ಕಾಲನಿ ನಿವಾಸಿಗಳ ಸಂಕಷ್ಟದ ಬದುಕನ್ನು ಪತ್ರಿಕೆ ಮೂರು ಬಾರಿ ಅನಾವರಣ ಮಾಡಿತ್ತು. ಆವಾಗ ಐಟಿಡಿಪಿ ಅಧಿಕಾರಿಗಳು ನಾಲ್ಕು ಮನೆಗೆ 2 ಲಕ್ಷ ರೂ. ಹಾಗೂ ಒಂದು ಮನೆಗೆ 1.75 ಲಕ್ಷ ರೂ. ಅನುದಾನ ಮಂಜೂರಾಗಿದೆ, ಬೇಸಿಗೆಯಲ್ಲಿ ಮನೆ ಕಟ್ಟಿಕೊಳ್ಳಲು ಎಲ್ಲ ವ್ಯವಸ್ಥೆ ಮಾಡಲಾಗುತ್ತದೆ ಎಂದಿದ್ದರು. 2 ಲಕ್ಷ ರೂಪಾಯಿಯಲ್ಲಿ ಘಟಕ ವೆಚ್ಚ ಭರಿಸಬೇಕಿದ್ದು, ಅದರಲ್ಲಿ ಮನೆ ಕಟ್ಟಲು ಆಗುವುದಿಲ್ಲ. ಅದಕ್ಕಾಗಿ ಘಟಕ ವೆಚ್ಚ 4 ಲಕ್ಷ ರೂ. ಕೊಡುವಂತೆ ಶಿಫಾರಸು ಮಾಡಿ ಪ್ರಸ್ತಾವನೆ ಸರ್ಕಾರಕ್ಕೆ ಕಳುಹಿಸಿದ್ದರು. ಘಟಕ ವೆಚ್ಚ 3.50 ಲಕ್ಷಕ್ಕೆ ಏರಿಕೆಯಾಗಿದ್ದರಿಂದ ಕಾಲನಿಯಲ್ಲಿ ಚಂದದ ಮನೆಗಳು ತಲೆ ಎತ್ತಿವೆ.

    ಹೊಸ ಮನೆ ಸಿಕ್ಕಿರುವುದು ಖುಷಿ ಕೊಟ್ಟಿದ್ದು, ಮನೆ ಪ್ರವೇಶದ ನಿರೀಕ್ಷೆಯಲ್ಲಿದ್ದೇವೆ. ನಾವು ಕೂಲಿ ಕೆಲಸ ಮಾಡಿ ಹೊಟ್ಟೆ ತುಂಬಿಸಬೇಕು. ಇಂಥ ಪರಿಸ್ಥಿತಿಯಲ್ಲಿ ಮನೆ ನಿರ್ಮಾಣ ನಮ್ಮಿಂದ ಕಷ್ಟದ ಮಾತಾಗಿತ್ತು. ಪ್ರಸ್ತುತ ಶೇ.95ರಷ್ಟು ಮನೆ ನಿರ್ಮಾಣ ಕಾರ್ಯ ಮುಗಿದಿದ್ದು, ಅಚ್ಚಕಟ್ಟಾಗಿ ಸುಂದರವಾಗಿದೆ.
    ಬಾಬಿ ಕೊರಗ, ಬಾಚಿಕೊಡ್ಲು ಕಾಲನಿ ನಿವಾಸಿ

    ಸಂಘಟನೆಯ ನಿರಂತರ ಹೋರಾಟದ ಜತೆಗೆ ವಿಜಯವಾಣಿ ಪತ್ರಿಕೆ ಮೂಲನಿವಾಸಿಗಳ ಬದುಕಿನ ನೈಜ ಚಿತ್ರಣ ತೆರೆದಿಟ್ಟಿತ್ತು. ಸಂಘಟನೆ ವತಿಯಿಂದ ಐದು ಬಾರಿ ಹಿಂದಿನ ಜಿಲ್ಲಾಧಿಕಾರಿ ಹೆಫ್ಸಿಬಾ ರಾಣಿ ಅವರನ್ನು ಭೇಟಿ ಮಾಡಿ ಬಾಚುಕುಳಿ ಕೊರಗರ ಬದುಕಿನ ಬಗ್ಗೆ ಸಮಾಲೋಚನೆ ನಡೆಸಿದ ಪರಿಣಾಮ ಮನೆ ಮಂಜೂರು ಮಾಡಲಾಯಿತು.
    ವಾಸುದೇವ ಮುದೂರು, ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆ ಸಂಘಟನಾ ಸಂಚಾಲಕ

    ಬಾಚುಕುಳಿ ಕೊರಗ ಕಾಲನಿ ಮನೆಗಳನ್ನು ಅಚ್ಚುಕಟ್ಟು ಹಾಗೂ ಸುಂದರವಾಗಿ ನಿರ್ಮಿಸಿದ್ದು, ನೆಲ, ಹಾಸು, ಬಾಗಿಲು ಕಿಟಕಿ ಡೋರ್, ಬಣ್ಣ ಹಾಕಿದರೆ ಎಲ್ಲ ಕೆಲಸ ಮುಗಿದಂತೆ. ಮನೆಗೆ ಗೆದ್ದಲು ಹಿಡಿಯಬಾರದು ಎಂಬ ಉದ್ದೇಶದಿಂದ ಕಬ್ಬಿಣದ ರೀಪು ಹಾಗೂ ಪಕ್ಕಾಸು ಬಳಸಲಾಗಿದೆ. ಕಿಟಕಿ ಬಾಗಿಲು ಕೂಡ ಸಿಮೆಂಟ್ ಮೋಲ್ಡ್‌ನದ್ದಾಗಿದೆ. ಜಿಲ್ಲಾಧಿಕಾರಿ, ಐಟಿಡಿಪಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಸಮ್ಮುಖ ಮನೆಪ್ರವೇಶ ಕಾರ್ಯಕ್ರಮ ನಡೆಯಲಿದೆ.
    ಅರುಣ್ ಕುಮಾರ್ ಶೆಟ್ಟಿ, ನಿರ್ಮಿತಿ ಕೇಂದ್ರ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts