ಸವಣೂರ: ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ತಂತಿ ಹರಿದು ಬಿದ್ದು ವಿದ್ಯುತ್ ಪರಿವರ್ತಕ, ಮೇವಿನ ಬಣವೆ, 33 ಮನೆಗಳ ವಿದ್ಯುತ್ ಮೀಟರ್ ಹಾಗೂ ಒಂದು ಮನೆಗೆ ಬೆಂಕಿ ಬಿದ್ದು ಹಾನಿಯಾದ ಘಟನೆ ತಾಲೂಕಿನ ತವರಮೆಳ್ಳಿಹಳ್ಳಿ ಗ್ರಾಮದ ನವಗ್ರಾಮದಲ್ಲಿ ಸೋಮವಾರ ನಡೆದಿದೆ.
ನವಗ್ರಾಮದ 66 ಮನೆಗಳಿಗೆ ವಿದ್ಯುತ್ ಸಂಪರ್ಕ ಅಳವಡಿಸಲಾಗಿತ್ತು. ಆಕಸ್ಮಿಕವಾಗಿ 11 ಕೆವಿ ವಿದ್ಯುತ್ ತಂತಿ ಹರಿದು ಬಿದ್ದ ಪರಿಣಾಮ ಸುಮಾರು 33 ಮನೆಗಳ ವಿದ್ಯುತ್ ಮೀಟರ್‌ಗಳು ಸಂಪೂರ್ಣ ಹಾನಿಯಾಗಿವೆ. ಬಣವೆ ಮೇಲೆ ವಿದ್ಯುತ್ ತಂತಿ ಹರಿದು ಬಿದ್ದು ಪರಿಣಾಮ ಮೇವು ಸಂಪೂರ್ಣ ಸುಟ್ಟು ಕರಕಲಾಗಿದೆ.
ಬಣವೆ ಪಕ್ಕದಲ್ಲಿದ್ದ ನವೀನ ಚಂದ್ರಪ್ಪ ದಾನಣ್ಣನವರ ಮನೆಗೂ ಬೆಂಕಿ ಹೊತ್ತಿಕೊಂಡು ಮನೆಯಲ್ಲಿದ್ದ ಟಿವಿ, ಬಟ್ಟೆ, ಹಾಗೂ ಇತರ ವಸ್ತುಗಳಿಗೂ ಹಾನಿಯಾಗಿದೆ. ಗ್ರಾಮಸ್ಥರು ಮನೆಯ ಬಾಗಿಲು, ಕಿಟಕಿ ಮುರಿದು ಬೆಂಕಿ ನಂದಿಸಿದ್ದಾರೆ. ಘಟನೆ ವೇಳೆ ಕುಟುಂಬಸ್ಥರು ಬೇರೆ ಊರಿಗೆ ಹೋಗಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿದಂತಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ವಾಹನ ಬರುವಷ್ಟರಲ್ಲಿಯೇ ಗ್ರಾಮಸ್ಥರು ಬೆಂಕಿ ನಂದಿಸಿದ್ದರು.
ಘಟನಾ ಸ್ಥಳಕ್ಕೆ ಹೆಸ್ಕಾ ಸವಣೂರ ಉಪವಿಭಾಗದ ಎಇಇ ಗೌಸ್‌ಪೀರ್ ಎಂ. ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಕೈಗೊಂಡರು.