More

    ಟ್ರಾಫಿಕ್ ಪೇದೆ ವಿರುದ್ಧ ಕೊಲೆ ಸಂಚು ಆರೋಪ

    ಹೊಸಪೇಟೆ: ಗ್ರಾಮ ಪಂಚಾಯಿತಿ ಚುನಾವಣೆಯಾಗಿ ಒಂದುವರೆ ವರ್ಷ ಕಳೆದರೂ ಹಳ್ಳಿಗಳಲ್ಲಿ ಇನ್ನೂ ವೈಷಮ್ಯ ಕಡಿಮೆಯಾಗಿಲ್ಲ. ಜಿಲ್ಲೆಯ ಗ್ರಾಪಂ ಸದಸ್ಯರೊಬ್ಬರ ಕೊಲೆಗೆ ಪೇದೆಯೊಬ್ಬ ಸುಪಾರಿ ಕೊಟ್ಟಿರುವ ವಿಷಯವೀಗ ಚರ್ಚೆಗೆ ಗ್ರಾಸವಾಗಿದೆ.

    ತನಗೆ ಕೊಲೆ ಬೆದರಿಕೆಯಿದೆ ಎಂದು ಹಗರಿಬೊಮ್ಮನಹಳ್ಳಿ ತಾಲೂಕಿನ ಮಾದೂರು ಗ್ರಾಪಂನ ಆನೆಕಲ್ಲು ತಾಂಡಾದ ವಾರ್ಡ್ ಸದಸ್ಯ ಪಾಂಡು ನಾಯ್ಕ ಪೊಲೀಸರ ಮೊರೆ ಹೋಗಿದ್ದಾರೆ. 2020ರ ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಪೇದೆ ಪರಶುರಾಮ ನಾಯ್ಕರ ಸಹೋದರ ದೇವೇಂದ್ರ ನಾಯ್ಕ ಪರಾಭಾವಗೊಂಡಿದ್ದರು. ಬಳಿಕ ಆನೆಕಲ್ಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಪೇದೆಯ ತಾಯಿಗೆ ಸೋಲಾಗಿತ್ತು. ಅಣ್ಣ-ತಾಯಿ ಸೋಲಿನಿಂದ ಕಂಗೆಟ್ಟಿರುವ ಪರಶುರಾಮ ಕೊಲೆಗೆ ಸುಪಾರಿ ನೀಡಿದ್ದರು ಎಂದು ಆರೋಪಿಸಲಾಗಿದೆ.

    ತನ್ನ ಕುಟುಂಬದ ರಾಜಕೀಯ ಬೆಳವಣಿಗೆಗೆ ಪಾಂಡುನಾಯ್ಕ ಅಡ್ಡಿಯಾಗುತ್ತಿದ್ದಾರೆ ಎಂದು ಭಾವಿಸಿ ಅವರ ಕೊಲೆಗೆ ಹೊಸಪೇಟೆ ನಗರ ಸಂಚಾರಿ ಠಾಣೆ ಪೇದೆ ಪರಶುರಾಮ ನಾಯ್ಕ ಸಂಚು ರೂಪಿಸಿದ್ದರು. ಸುಪಾರಿ ಪಡೆದಿದ್ದ ರವಿ ನಾಯ್ಕ ಎಂಬಾತಗೆ 10 ಲಕ್ಷ ರೂ. ಹಾಗೂ ತಾಂಡಾದಲ್ಲಿ ಮನೆ ಕಟ್ಟಿಸಿಕೊಡುವುದಾಗಿ ಫೆ.5ರಂದು ಆಮಿಷವೊಡ್ಡಿದ್ದರು. ಈ ಕುರಿತು ಸ್ವತಃ ರವಿ ನಾಯ್ಕ ಹೇಳಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದೆ.

    ನನ್ನ ಕೊಲೆಗೆ 10 ಲಕ್ಷ ರೂ. ಸುಪಾರಿ ನೀಡಲಾಗಿದೆ ಮತ್ತು ಯಾವುದೇ ಸಮಯದಲ್ಲಿ ಅಪಾಯ ಸಂಭವಿಸಬಹುದು ಎಂದು ಗ್ರಾಪಂ ಸದಸ್ಯ ಪಾಂಡು ನಾಯ್ಕ, ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಮೇ 26 ರಂದು ಈ ಕುರಿತು ದೂರು ದಾಖಲಾಗುತ್ತಿದ್ದಂತೆ ಪರಶುರಾಮ ನಾಯ್ಕ ತಲೆ ಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ನೊಂದವರಿಗೆ ರಕ್ಷಣೆ ಒದಗಿಸಬೇಕಿದ್ದ ಪೊಲೀಸ್ ವಿರುದ್ಧವೇ ಕೊಲೆ ಸಂಚು ಆರೋಪ ದಾಖಲಾಗಿದೆ.

    ಗ್ರಾಪಂ ಚುನಾವಣೆಯಲ್ಲಿ ಸೋತಿದ್ದರಿಂದ ನನ್ನ ವಿರುದ್ಧ ಹಗೆತನ ಮುಂದುವರಿಸಿದ್ದಾರೆ. ನನ್ನ ಕೊಲೆಗೆ ಪರಶುರಾಮ ಸುಪಾರಿ ನೀಡಿದ್ದಾರೆ ಎಂದು ದೂರು ನೀಡಿ 15 ದಿನಗಳು ಕಳೆದರೂ ಕ್ರಮವಾಗಿಲ್ಲ. ನಾವು ದುಡಿದು ತಿನ್ನುವ ಜನ. ಕಬ್ಬು ಕಡಿಯಲು ಮೈಸೂರು, ಮಂಡ್ಯ ಕಡೆ ಹೋಗುತ್ತೇವೆ. ಅಲ್ಲಿ ಏನಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ ?
    | ಪಾಂಡು ನಾಯ್ಕ, ದೂರುದಾರ.

    ಆನೇಕಲ್ಲು ಗ್ರಾಪಂ ಸದಸ್ಯ ಪಾಂಡು ನಾಯ್ಕ ಕೊಲೆಗೆ ಹೊಸಪೇಟೆ ಟ್ರಾಫಿಕ್ ಠಾಣೆ ಪೇದೆ ಪರಶುರಾಮ ನಾಯ್ಕ ಸುಪಾರಿ ನೀಡಿರುವ ಬಗ್ಗೆ ಹಗರಿಬೊಮ್ಮನಹಳ್ಳಿಯಲ್ಲಿ ದೂರು ದಾಖಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದು, ತನಿಖಾಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.
    | ಡಾ.ಕೆ.ಅರುಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts