More

    ಸಾಂಕೇತಿಕವಾಗಿ ನೆರವೇರಿದ ಯುವಜನೋತ್ಸವ – ಜಿಲ್ಲಾ ಮಟ್ಟದ ಸ್ಪರ್ಧೆಗೆ ನೀರಸ ಪ್ರತಿಕ್ರಿಯೆ

    ಹೊಸಪೇಟೆ: ವಿವಿಧ ಇಲಾಖೆಗಳ ಸಹಯೋಗದಲ್ಲಿ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವ ಜನೋತ್ಸವದಲ್ಲಿ ಕಲಾವಿದರು, ಸ್ಪರ್ಧಾಳುಗಳಿಲ್ಲದೇ ಸಾಂಕೇತಿಕವಾಗಿ ನೆರವೇರಿತು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ, ಶ್ರೀ ಮಹರ್ಷಿ ವಾಲ್ಮೀಕಿ ಯುವಕ ಮಂಡಳಿ, ಸ್ಥಳೀಯ ಯುವಕ ಸಂಘಗಳ ಆಶ್ರಯದಲ್ಲಿ ಆಯೋಜಿಸಿದ್ದ ಯುವಜನೋತ್ಸವವನ್ನು ನಗರಸಭೆ ಅಧ್ಯಕ್ಷೆ ಸುಂಕಮ್ಮ ಉದ್ಘಾಟಿಸಿದರು.

    ಕ್ರೀಡಾ ಇಲಾಖೆ ಉಪನಿರ್ದೇಶಕ ಹರಿಸಿಂಗ್ ರಾಥೋಡ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಜಯನಗರ ನೂತನ ಜಿಲ್ಲೆಯಾದ ಬಳಿಕ ಇದೇ ಮೊದಲ ಬಾರಿಗೆ ಜಿಲ್ಲಾ ಮಟ್ಟದ ಯುವಜನೋತ್ಸವ ಆಯೋಜಿಸಲಾಗಿದೆ. ಕೊರೊನಾ ಕಾರಣದಿಂದ ಮೂರು ವರ್ಷಗಳ ಬಳಿಕ ಯುವಜನೋತ್ಸವ ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದವರನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ಡಿ.17 -18ರಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ಏರ್ಪಡಿಸಲಾಗಿದೆ. ಉತ್ತಮವಾಗಿ ತಮ್ಮ ಪ್ರತಿಭೆ ಪ್ರದರ್ಶಿಸಿ, ಬಹುಮಾನ ಗಳಿಸುವ ಮೂಲಕ ಜಿಲ್ಲೆಗೆ ಕೀರ್ತಿ ತರಬೇಕು ಎಂದರು.

    ಯುವಜನೋತ್ಸವ ನೀರಸ: ವಿವಿಧ ಇಲಾಖೆಗಳ ಆಶ್ರಯದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಯುವಜನೋತ್ಸವದಲ್ಲಿ ಬೆರಳೆಣಿಕೆಯಷ್ಟು ಸ್ಪರ್ಧಾಳುಗಳು ಪಾಲ್ಗೊಂಡಿದ್ದರಿಂದ ಸಪ್ಪೆಯಾಗಿತ್ತು. ಬೆಳಗ್ಗೆ 11 ಗಂಟೆಗೆ ನಡೆದ ಯುವಜನೋತ್ಸವ ಉದ್ಘಾಟನಾ ಸಂದರ್ಭದಲ್ಲೂ ಮುಂದಿನ ಎರಡ್ಮೂರು ಸಾಲುಗಳಲ್ಲಿ ಗಣ್ಯರು ಮತ್ತು ಸ್ಪರ್ಧಾಳುಗಳನ್ನು ಹೊರತುಪಡಿಸಿದರೆ, ಸಭಾಂಗಣ ಖಾಲಿ ಖಾಲಿಯಾಗಿತ್ತು.ಆದರೆ, ಬೇರೆ ಬೇರೆ ಊರುಗಳಿಂದ ಇನ್ನಷ್ಟೇ ಸ್ಪರ್ಧಾಳುಗಳು ಬರಲಿದ್ದಾರೆ. 200 ಜನ ಆಗಮಿಸುವ ನಿರೀಕ್ಷೆಯಿದೆ ಎಂದು ಇಲಾಖೆ ಉಪನಿರ್ದೇಶಕ ಹರಿಸಿಂಗ್ ರಾಥೋಡ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts