More

    ವಿಮೋಚನಾ ಹೋರಾಟಗಾರರ ಸ್ಮರಣೆ ಅಗತ್ಯಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ ಅಭಿಮತ

    ಹೊಸಪೇಟೆ: ಪ್ರಸಕ್ತ ಹಣಕಾಸು ವರ್ಷಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯ ಮೈಕ್ರೋ ಹಾಗೂ ಮ್ಯಾಕ್ರೋ ಅನುದಾನದಲ್ಲಿ ವಿಜಯನಗರ ಜಿಲ್ಲೆಗೆ 179 ಕೋಟಿ ರೂ. ವೆಚ್ಚದಲ್ಲಿ 91 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಅಣ್ಣಾ ಸಾಹೇಬ ಜೊಲ್ಲೆ ಹೇಳಿದರು.

    ಜಿಲ್ಲಾಡಳಿತದಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ, ವಿವಿಧ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು. ಕೆಕೆಆರ್‌ಡಿಬಿಯ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಯಡಿ 2013-14ನೇ ಸಾಲಿನಿಂದ 2022-23ರವರೆಗೆ 1357 ಕೋಟಿ ರೂ. ಜಿಲ್ಲೆಗೆ ಹಂಚಿಕೆಯಾಗಿದೆ. ಅದರಲ್ಲಿ 4388 ಕಾಮಗಾರಿಗಳಿಗೆ ಅನುಮೋದನೆ ನೀಡಿದ್ದು, 3574 ಕಾಮಗಾರಿಗಳು ಪೂರ್ಣಗೊಳಿಸಲಾಗಿದೆ. 464 ಕಾಮಗಾರಿಗಳು ಪ್ರಗತಿ ಮತ್ತು 350 ಕಾಮಗಾರಿಗಳು ಪ್ರಾರಂಭಿಕ ಹಂತದಲ್ಲಿದೆ. ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ‘ವಿವೇಕ ಯೋಜನೆ’ಯಡಿ ಡಿಎಂಎಫ್, ಸಪ್‌ಮಿಜ್, ಕೆಕೆಆರ್‌ಡಿಬಿ ಅನುದಾನದಲ್ಲಿ 130 ಹೊಸ ಸ್ಮಾರ್ಟ್‌ಕ್ಲಾಸ್ ರೂಮ್‌ಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.

    ಕಲ್ಯಾಣ ಕರ್ನಾಟಕದ ವಿಮೋಚನೆಗೆ ಹೋರಾಟದಲ್ಲಿ ಸ್ವಾಮಿರಮಾನಂದ ತೀರ್ಥರು, ಅನ್ನದಾನಯ್ಯ ಪುರಾಣಿಕ, ಪ್ರಭುರಾಜ ಪಾಟೀಲ್, ಶಿವಮೂರ್ತಿ ಸ್ವಾಮಿ ಅಳವಂಡಿ, ಡಾ. ಚುರ್ಚಿಹಾಳ್‌ಮಠ, ಭೀಮಜ್ಜ, ಕೊರ್ಲಹಳ್ಳಿ ಶ್ರೀನಿವಾಸಾಚಾರಿ, ವಿದ್ಯಾರ್ಥಿ ಮುಖಂಡ ಮಟಮಾರಿ ನಾಗಪ್ಪ, ಚಂದ್ರಯ್ಯ, ಶರಬಯ್ಯ, ಬಸವಣ್ಣ ಸಾಕಷ್ಟು ಶ್ರಮಿಸಿದರು. ಅವರ ತ್ಯಾಗ, ಬಲಿದಾನಗಳನ್ನು ಯುವ ಜನರು ಸ್ಮರಿಸಬೇಕು ಎಂದು ಸಲಹೆ ನೀಡಿದರು.

    ಜಿಲ್ಲಾಧಿಕಾರಿ ಅನಿರುದ್ಧ್ ಪಿ.ಶ್ರವಣ್, ಎಸ್ಪಿ ಡಾ.ಕೆ.ಅರುಣ್, ಸಿಇಒ ಹರ್ಷಲ್ ಬೋಯರ್ ನಾರಾಯಣ್ ರಾವ್, ಎಡಿಸಿ ಮಹೇಶ್ ಬಾಬು, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಉಪಾಧ್ಯಕ್ಷ ಆನಂದ್, ಪೌರಾಯುಕ್ತ ಮನೋಹರ್, ಡಿಎಚ್‌ಒ ಸಲೀಂ, ಎಸಿ ಸಿದ್ದರಾಮೇಶ್ವರ, ತಹಸೀಲ್ದಾರ್ ವಿಶ್ವಜೀತ್ ಮೆಹತಾ ವೇದಿಕೆಯಲ್ಲಿದ್ದರು.

    ಆಕರ್ಷಕ ಪಥ ಸಂಚಲನ
    ಜಿಲ್ಲಾ ಕ್ರೀಡಾಂಗಣದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯಲ್ಲಿ ಪರೇಡ್ ಕಮಾಂಡರ್ ಆರ್‌ಪಿಐ ಶಶಿಕುಮಾರ ಮುಂದಾಳತ್ವದಲ್ಲಿ ಆಕರ್ಷ ಪಥ ಸಂಚಲನ ನಡೆಯಿತು. ಗೃಹ ರಕ್ಷಕ ದಳ ಬ್ಯಾಂಡ್ ತುಕಡಿ ನುಡಿಸಿದ ‘ಸಾರೇ ಜಹಾಂಸೆ ಅಚ್ಚಾ’ ಹಿಮ್ಮೇಳದೊಂದಿಗೆ ಪೊಲೀಸ್ ಪಡೆ, ಮಹಿಳಾ ಪೊಲೀಸ್, ಗೃಹರಕ್ಷಕ, ಎನ್‌ಸಿಸಿ, ವಿವಿಧ ಶಾಲೆಗಳ ಭಾರತ ಸೇವಾ ದಳ ತುಕಡಿಗಳು ಹೆಜ್ಜೆ ಹಾಕಿದವು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳು ದೇಶ ಭಕ್ತಿ ಗೀತೆಗಳಿಗೆ ಹೆಜ್ಜೆ ಹಾಕಿ, ಗಮನ ಸೆಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts