More

    ಕನ್ನಡ ವಿವಿ ಮೇಲೇಕೆ ಕೆಂಗಣ್ಣು?


    ಅನುದಾನ ನೀಡಲು ಸರ್ಕಾರದ ಮೀನಮೇಷ | ಭಾಷಾ ಕೆಲಸಗಳಿಗೆ ಹಿನ್ನಡೆ

    ಮಂಜುನಾಥ ಅಯ್ಯಸ್ವಾಮಿ

    ಹೊಸಪೇಟೆ: ಕನ್ನಡ ಭಾಷಾ ಕೈಂಕರ್ಯಕ್ಕಾಗಿಯೇ ಇರುವ ಕನ್ನಡ ವಿಶ್ವವಿದ್ಯಾಲಯ ಬಿಡಿಗಾಸಿಗೂ ಪರದಾಡುತ್ತಿದ್ದು, ಅನುದಾನ ನೀಡಲು ಮೀನಮೇಷ ಎಣಿಸುತ್ತಿರುವ ಸರ್ಕಾರ, ವಿವಿಯನ್ನು ಮುಚ್ಚಲು ನಿರ್ಧರಿಸಿದೆಯೇ ಎಂಬಷ್ಟರ ಮಟ್ಟಿಗೆ ನಿರ್ಲಕ್ಷೃ ತಾಳಿದೆ.

    ಸರ್ಕಾರ ತೀರಾ ತಾತ್ಸಾರ ತೋರುತ್ತಿರುವ ಪರಿಣಾಮ ವಿವಿಗೆ ದಿನೇದಿನೆ ಆರ್ಥಿಕ ಹೊರೆ ಎದುರಾಗುತ್ತಿದೆ. ಈ ಹಿಂದೆ ಹಲವು ಸಲ ಅನುದಾನ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಭಾನುವಾರವಷ್ಟೇ ವಿವಿ ಸಮೀಪದ ಕಮಲಾಪುರಕ್ಕೆ ಬಂದಿದ್ದ ಅವರನ್ನು ಅನುದಾನದ ಕುರಿತಾಗಿ ಪತ್ರಕರ್ತರು ಕೇಳಿದ್ದಕ್ಕೆ ಗರಂ ಆಗಿದ್ದರು. ಕೊನೆಗೂ ಅನುದಾನದ ಬಗ್ಗೆ ಉತ್ತರ ನೀಡದೆ ತೆರಳಿದರು.

    ಈ ಹಿಂದೆಯೂ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸುದ್ದಿಗೋಷ್ಠಿಯಲ್ಲಿ ಇದೇ ವಿಷಯವಾಗಿ ಮಾತನಾಡಿ, ಅನುದಾನ ಬಾರದೆ ಇರಲು ಕುಲಪತಿಗಳೇ ಕಾರಣ. ಅನುದಾನ ಸರಿಯಾಗಿ ಬಳಕೆ ಆಗಿಲ್ಲ ಎಂದು ಆರೋಪಿಸಿದ್ದರು. ಅದಕ್ಕೂ ಮೊದಲು ಹಂಪಿ ಉತ್ಸವ ಸಂದರ್ಭ ಒಂದು ತಿಂಗಳೊಳಗೆ ಪರಿಹರಿಸುವುದಾಗಿ ಹೇಳಿದ್ದರು. ಆದರೆ, ಬಜೆಟ್‌ನಲ್ಲಿ ಅದು ಹುಸಿ ಆಗಿತ್ತು. ಹಿಂದಿನ ಸರ್ಕಾರವೂ ಅನುದಾನ ನೀಡಲು ಕಡೆಗಣಿಸಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದರೆ ಮುಂದೊಂದು ದಿನ ವಿವಿಯ ಬಾಗಿಲು ಶಾಶ್ವತವಾಗಿ ಮುಚ್ಚಲಿದೆಯೇ ಎಂಬ ಅನುಮಾನಗಳು ಮೂಡುತ್ತವೆ. ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಅಧ್ಯಯನ, ಸಂಶೋಧನೆ ಮತ್ತು ಪ್ರಕಟಣೆಗಾಗಿ ಸ್ಥಾಪಿತವಾಗಿರುವ ವಿವಿಗೆ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ವಿಚಾರ ಸಂಕಿರಣ, ಕಾರ್ಯಾಗಾರ, ಕಟ್ಟಡ ನಿರ್ಮಾಣ ಮತ್ತು ಮಹತ್ವದ ಯೋಜನೆಗಳನ್ನು ಕೈಗೊಳ್ಳಲು ಹಿನ್ನಡೆಯಾಗಿದೆ.

    ಇತರ ವಿವಿಗಳಿಗಿಂತ ಕನ್ನಡ ವಿಶ್ವವಿದ್ಯಾಲಯ ಭಿನ್ನ. ಯಾವ ಕಾಲೇಜುಗಳು ಇದರ ವ್ಯಾಪ್ತಿಗೆ ಬರುವುದಿಲ್ಲ. ಸಂಶೋಧನೆಗಾಗಿಯೇ ಇದು ಸ್ಥಾಪಿತ ವಿವಿ. ಸರ್ಕಾರದಿಂದಲೇ ಅನುದಾನ ಬರಬೇಕು. ಇಲ್ಲವಾದರೆ ವಿವಿ ನಿರ್ವಹಣೆ ಅಸಾಧ್ಯ. ಈ ಹಿಂದೆ ದೂರ ಶಿಕ್ಷಣ ಮೂಲಕ ಆದಾಯ ಬರುತ್ತಿತ್ತು. ಆದರೆ, ಕೆಲವು ವರ್ಷಗಳಿಂದ ಸ್ಥಗಿತವಾಗಿದೆ. ಪಿಎಚ್.ಡಿ ಸೇರಿದಂತೆ ಇತರ ಮೂಲಗಳಿಂದ 25-30 ಲಕ್ಷ ರೂ. ಆದಾಯ ಬರುತ್ತದೆ. ಇದರಲ್ಲೇ ಸಾಮಾನ್ಯ ಖರ್ಚನ್ನು ನಿಭಾಯಿಸಬೇಕು. ಉಳಿದ ನಿರ್ವಹಣೆಗೆ ಸರ್ಕಾರವೇ ಆಸರೆ.

    ಎಷ್ಟು ಹಣ ಬಂದಿದೆ?


    ಹಿಂದಿನ ಕುಲಪತಿಗಳಾದ ಡಾ.ಮಲ್ಲಿಕಾ ಎಸ್.ಘಂಟಿ ಹಾಗೂ ಸ.ಚಿ ರಮೇಶ ಅವರ ಎಂಟು ವರ್ಷ ಅವಧಿಯಲ್ಲಿ ಎಸ್‌ಇಪಿ ಮತ್ತು ಟಿಎಸ್‌ಪಿ ಅನುದಾನ ಹೊರತುಪಡಿಸಿ, 2016-17 ನೇ ಸಾಲಿನಲ್ಲಿ 3 ಕೋಟಿ ರೂ., 2017-18 ನೇ ಸಾಲಿನಲ್ಲಿ 25.66 ಕೋಟಿ ರೂ., 2018-19 ನೇ ಸಾಲಿನಲ್ಲಿ 2.50 ಕೋಟಿ ರೂ., 2019-20- 2.50 ಕೋಟಿ ರೂ., 2020-2ರಲ್ಲಿ 4.02 ಕೋಟಿ ರೂ., 2021-22ರಲ್ಲಿ ಕೇವಲ 50 ಲಕ್ಷ ರೂ. 2022-23ನೇ ಸಾಲಿನಲ್ಲಿ 4.64 ಕೋಟಿ ರೂ., 2023-24 ನೇ ಸಾಲಿನಲ್ಲಿ 1.52 ಕೋಟಿ ರೂ. ಅನುದಾನ ಬಂದಿದೆ. 2019-20 ನೇ ಸಾಲಿನಿಂದ ವಾಲ್ಮೀಕಿ ಅಧ್ಯಯನ ಪೀಠದ ಹಾಗೂ 2021-22 ನೇ ಸಾಲಿನಿಂದ ಒನಕೆ ಓಬವ್ವ ಅಧ್ಯಯನ ಪೀಠದ ಅನುದಾನ ಕೂಡ ಬಂದಿಲ್ಲ.

    ಸದ್ಯ ಕನ್ನಡ ವಿಶ್ವವಿದ್ಯಾಲಯಕ್ಕೆ ಅನುದಾನದ ಕೊರತೆಯಾಗಿದ್ದು, ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ. 3.75 ಕೋಟಿ ರೂ. ಕೊಟ್ಟರೆ ಸಾಕು ವಿವಿಯ ಸಾಲ ಮುಟ್ಟುತ್ತದೆ.
    | ಡಾ.ಡಿ.ವಿ.ಪರಮಶಿವಮೂರ್ತಿ ಕುಲಪತಿ, ಕನ್ನಡ ವಿವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts