More

    ಬೀದಿಬದಿ ವ್ಯಾಪಾರಕ್ಕೆ ಹಂಪಿ ಉತ್ಸವದ ಬರೆ; ವಿಜಯನಗರ ಜಿಲ್ಲಾಡಳಿತದ ಕ್ರಮಕ್ಕೆ ವ್ಯಾಪಾರಿಗಳ ಕಣ್ಣೀರು

    ಬಡವರ ಬದುಕು ಕಸಿದ ಕಾರ್ಯಕ್ರಮಗಳು

    ವೀರೇಂದ್ರ ನಾಗಲದಿನ್ನಿ

    ಹೊಸಪೇಟೆ: ಪುರಂದರೋತ್ಸವ, ಹಂಪಿ ಉತ್ಸವಕ್ಕಾಗಿ ಹಂಪಿಯಲ್ಲಿನ ವಾಹನಗಳ ಪಾರ್ಕಿಂಗ್, ವಸ್ತು ಪ್ರದರ್ಶನ ಮಳಿಗೆಗಳ ವ್ಯವಸ್ಥೆಗಾಗಿ ನೂರಾರು ಗೂಡಂಗಡಿಗಳು, ತಳ್ಳುಗಾಡಿಗಳನ್ನು ಜಿಲ್ಲಾಡಳಿತ ತೆರವುಗೊಳಿಸಿದ್ದು, ಸಣ್ಣಪುಟ್ಟ ವ್ಯಾಪಾರಿಗಳು ಕಣ್ಣೀರಿಡುತ್ತಲೇ ಮನೆಯತ್ತ ಹೆಜ್ಜೆ ಹಾಕಿದ್ದಾರೆ.

    ಪುರಂದರೋತ್ಸವ ಜ.21ರಂದು ಮತ್ತು ಹಂಪಿ ಉತ್ಸವ ಜ.27, 28, 29 ರಂದು ನಡೆಯಲಿವೆ. ಹಂಪಿ ಉತ್ಸವ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕಲಾವಿದರಿಗೆ ಬಾಗಿಲು ತೆರೆಯಲಿದ್ದರೆ, ಇತ್ತ ತಮ್ಮ ಹೊಟ್ಟೆಯ ಮೇಲೆ ಹೊಡೆಯುತ್ತದೆ ಎಂದು ಸಣ್ಣ-ಪುಟ್ಟ ವ್ಯಾಪಾರಿಗಳ ಹಿಡಿಶಾಪ ಹಾಕುತ್ತಿದ್ದಾರೆ.

    ಹಂಪಿ ಗ್ರಾಪಂ ಕಚೇರಿ ಮುಂಭಾಗದ ಪಾರ್ಕಿಂಗ್ ಪ್ರದೇಶದಲ್ಲಿ ಪೂಜಾ ಸಾಮಗ್ರಿ, ಹಣ್ಣು-ಕಾಯಿ, ಪುಟ್ಟ ಹೋಟೆಲ್, ಬಟ್ಟೆ ವ್ಯಾಪಾರ, ಗೊಂಬೆ ಮತ್ತು ಟೋಪಿ, ಬೆಲ್ಟ್ ಮತ್ತಿತರ ವಸ್ತುಗಳ ಮಾರಾಟ ಮಾಡುವ 150ಕ್ಕೂ ಹೆಚ್ಚು ತಳ್ಳುಗಾಡಿಗಳಲ್ಲಿದ್ದವು. ಇವರೆಲ್ಲ ಉತ್ಸವ ಮುಗಿಯುವವರಿಗೆ ವ್ಯಾಪಾರ ಕಳೆದುಕೊಳ್ಳುವಂತಾಗಿದೆ.

    ಕೋವಿಡ್‌ನಿಂದಾಗಿ 2 ವರ್ಷ ಹಂಪಿಯಲ್ಲಿ ಪ್ರವಾಸೋದ್ಯಮ ಸ್ಥಗಿತಗೊಂಡಿತ್ತು. ಇತ್ತೀಚಿನ ತಿಂಗಳಲ್ಲಿ ಸ್ವಲ್ಪ ವ್ಯಾಪಾರ ಸುಧಾರಿಸಿತ್ತು. ಈಗ ಹಂಪಿ ಉತ್ಸವ ಬಂದು ಮತ್ತೆ ಬದುಕನ್ನು ಕಸಿಯುವಂತಾಗಿದೆ. ಸಂಚಾರಕ್ಕೆ ಅಡ್ಡಿಯಾಗದ ಭಾಗದಲ್ಲಿ ವ್ಯಾಪಾರ ನಡೆಸಲು ಅನುವು ಮಾಡಿಕೊಡುವುದಾಗಿ ಹೇಳಿದ್ದ ಜಿಲ್ಲಾಡಳಿತದ ಭರವಸೆ ಹುಸಿಯಾಗಿದೆ ಎಂಬುದು ಸ್ಥಳೀಯರ ಅಳಲು.

    ಈ ಬಾರಿಯ ಹಂಪಿ ಉತ್ಸವಕ್ಕೆ ಎಷ್ಟು ಜನರು ಆಗಮಿಸುತ್ತಾರೆ ಎಂದು ಅಂದಾಜಿಸಲು ಆಗುತ್ತಿಲ್ಲ. ಹೀಗಾಗಿ ಪಾರ್ಕಿಂಗ್ ಸ್ಥಳದಲ್ಲಿರುವ ಎಲ್ಲ ಬಗೆಯ ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದೆ. ಮತ್ತೆ ಅವಕಾಶ ನೀಡುವ ಪ್ರಶ್ನೆಯೇ ಇಲ್ಲ.
    | ಸಿದ್ದರಾಮೇಶ್ವರ ಹವಾಮಾ ಆಯುಕ್ತ


    ಹಂಪಿಯಲ್ಲಿ ಸಣ್ಣ-ಪುಟ್ಟ ವ್ಯಪಾರವನ್ನೇ ನೆಚ್ಚಿಕೊಂಡಿದ್ದೇವೆ. ಹಂಪಿ ಉತ್ಸವದ ಸಂದರ್ಭದಲ್ಲಿ ವ್ಯಾಪಾರ ಮಾಡಬೇಡಿ ಎಂದರೆ ಸಮಸ್ಯೆಯಾಗುತ್ತದೆ. ಉತ್ಸವಕ್ಕೆ ನಾನಾ ಕಡೆಯಿಂದ ಸಾವಿರಾರು ಜನರು ಆಗಮಿಸುವುದರಿಂದ ಹೆಚ್ಚಿನ ಆದಾಯ ಸಿಗುತ್ತದೆ. ಈ ಹಿನ್ನೆಲೆಯಲ್ಲಿ ಆಯ ಕಟ್ಟಿನ ಪ್ರದೇಶಗಳನ್ನು ಹೊರತುಪಡಿಸಿ, ಉಳಿದೆಡೆ ವ್ಯಾಪಾರಕ್ಕೆ ಅವಕಾಶ ನೀಡಬೇಕು.
    | ಬಸವರಾಜ ಸಣ್ಣ ವ್ಯಾಪಾರಿ, ಹಂಪಿ

    ಬೀದಿಬದಿ ವ್ಯಾಪಾರಕ್ಕೆ ಹಂಪಿ ಉತ್ಸವದ ಬರೆ; ವಿಜಯನಗರ ಜಿಲ್ಲಾಡಳಿತದ ಕ್ರಮಕ್ಕೆ ವ್ಯಾಪಾರಿಗಳ ಕಣ್ಣೀರು
    ಬೀದಿಬದಿ ವ್ಯಾಪಾರಕ್ಕೆ ಹಂಪಿ ಉತ್ಸವದ ಬರೆ; ವಿಜಯನಗರ ಜಿಲ್ಲಾಡಳಿತದ ಕ್ರಮಕ್ಕೆ ವ್ಯಾಪಾರಿಗಳ ಕಣ್ಣೀರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts