More

    ಪ್ರತಿ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ಸ್ಥಾಪನೆ

    ಹೊಸಪೇಟೆ: ಸರಕು ಸಾಗಣೆ ವಾಹನಗಳ ನಿಲುಗಡೆ, ಚಾಲಕರ ಅನುಕೂಲಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ಟ್ರಕ್ ಟರ್ಮಿನಲ್ ಸ್ಥಾಪಿಸಲಾಗುವುದಲ್ಲದೆ ರಾಜ್ಯದ 10 ಕಡೆ ವೇ ಸೈಡ್ ಅಮೆನಿಟೀಸ್ (ರಸ್ತೆ ಬದಿಗೆ ಪಾರ್ಕಿಂಗ್ ಸಹಿತ ಅಗತ್ಯ ಸೌಲಭ್ಯಗಳು) ಯೋಜನೆ ಜಾರಿಗೊಳಿಸಲಾಗುವುದು ಎಂದು ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿ. ಕಂಪನಿ ಅಧ್ಯಕ್ಷ ಡಿ.ಎಸ್.ವೀರಯ್ಯ ಹೇಳಿದರು.

    ಅಮರಾವತಿಯಲ್ಲಿ ನೂತನ ಟ್ರಕ್ ಟರ್ಮಿನಲ್ ನಿರ್ಮಾಣದ ಪೂರ್ವ ಸಿದ್ಧತೆಗಳನ್ನು ಶುಕ್ರವಾರ ಪರಿಶೀಲಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 1980ರಲ್ಲಿ ಡಿ.ದೇವರಾಜ ಅರಸು ಟ್ರಕ್ ಟರ್ಮಿನಲ್ಸ್ ಲಿ.ಕಂಪನಿ ಸ್ಥಾಪಿಸಲಾಗಿದೆ. ಈವರೆಗೆ ಬೆಂಗಳೂರಿನ ಯಶವಂತಪುರ, ಮೈಸೂರಿನ ನಂಜನಗೂಡು ರಿಂಗ್ ರಸ್ತೆ ಹಾಗೂ ಧಾರವಾಡದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್ಸ್ ಕಾರ್ಯನಿರ್ವಹಿಸುತ್ತಿವೆ. ನಾನು ಅಧ್ಯಕ್ಷನಾದ ಬಳಿಕ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಚುರುಕುಗೊಂಡಿವೆ ಎಂದರು.

    ಹೊಸಪೇಟೆ ತಾಲೂಕು ಅಮರಾವತಿಯಲ್ಲಿ 35.39 ಕೋಟಿ ರೂ. ವೆಚ್ಚದಲ್ಲಿ 37.82 ಎಕರೆ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿದ್ದು, ವರ್ಷದಲ್ಲಿ ಪೂರ್ಣಗೊಳ್ಳಲಿದೆ. ಟರ್ಮಿನಲ್‌ನಲ್ಲಿ ಲಾರಿ, ಟ್ರಕ್‌ಗಳ ನಿಲುಗಡೆಗೆ ಪೂರಕ ವಾತಾವರಣ ಇಲ್ಲಿದೆ. ಶೌಚಗೃಹ, ವರ್ಕ್‌ಶಾಪ್, ಪೆಟ್ರೋಲ್‌ಬಂಕ್, ಕ್ಯಾಂಟೀನ್, ರೆಸ್ಟೋರೆಂಟ್, ಕ್ಲಿನಿಕ್, ಬಟ್ಟೆ ಅಂಗಡಿ, ಬ್ಯಾಂಕ್ ಎಟಿಎಂ, ಪೊಲೀಸ್ ಚೌಕಿ ಮತ್ತಿತರ ಸೌಕರ್ಯ ಕಲ್ಪಿಸಲಾಗುವುದು. ಸದ್ಯ ಮೊದಲ ಹಂತದ ಕಾಮಗಾರಿ ಆರಂಭವಾಗಲಿದ್ದು, ಸುಮಾರು 300 ವಾಹನಗಳ ನಿಲುಗಡೆಯಾಗಲಿವೆ. 2ನೇ ಹಂತವನ್ನು ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್‌ಶಿಪ್ ಅಡಿ ನಿರ್ಮಿಸಲು ಉದ್ದೇಶಿಸಿದೆ. ಅನ್ಯ ರಾಜ್ಯ ಹಾಗೂ ದೂರದಿಂದ ಬರುವ ಸರಕು ಸಾಗಣೆ ವಾಹನಗಳು ಖಾಲಿ ತೆರಳದೆ, ಒಂದೆರಡು ದಿನ ಟರ್ಮಿನಲ್‌ನಲ್ಲಿ ಉಳಿದುಕೊಂಡು, ಸರಕು ದೊರಕಿದ ಬಳಿಕ ಪ್ರಯಾಣ ಬೆಳೆಸಬಹುದು. ವಾಸ್ತವ್ಯಕ್ಕೆ ದಿನಕ್ಕೆ ಇಂತಿಷ್ಟು ಎಂದು ಸರ್ಕಾರ ಶುಲ್ಕ ನಿಗದಿ ಮಾಡುತ್ತದೆ. ಟ್ರಕ್ ಚಾಲಕರು, ಮಾಲೀಕರು, ಏಜೆಂಟರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ನೂರಾರು ಜನರಿಗೆ ಉದ್ಯೋಗ ದೊರೆಯುತ್ತದೆ ಎಂದರು.

    ಪಬ್ಲಿಕ್ ಪ್ರೈವೇಟ್ ಪಾರ್ಟ್ನರ್‌ಶಿಪ್ ಅಡಿ ಹುಬ್ಬಳ್ಳಿಯ ಅಂಚಟಗೇರಿಯ ಹೆದ್ದಾರಿಗೆ ಹೊಂದಿಕೊಂಡು ಟರ್ಮಿನಲ್ ಹಾಗೂ ಲಾಜಿಸ್ಟಿಕ್ ಪಾರ್ಕ್ ಸ್ಥಾಪನೆ, ದಾವಣಗೆರೆಯ ಹಳೇಬಾತಿ, ರಾಯಚೂರಿನ ಎಪಿಎಂಸಿ ಪ್ರಾಂಗಣದಲ್ಲಿ ಸರ್ಕಾರಿ ಜಾಗ ಲಭ್ಯವಿದ್ದು, ಶೀಘ್ರವೇ ಹಸ್ತಾಂತರವಾಗಲಿದೆ. ಎಲ್ಲ ಜಿಲ್ಲೆಗಳಲ್ಲಿ ಟರ್ಮಿನಲ್‌ಗಾಗಿ ಸರ್ಕಾರಿ ಜಾಗ ಗುರುತಿಸಲಾಗುತ್ತಿದೆ. ರಾಜ್ಯ ಬಜೆಟ್‌ನಲ್ಲಿ ಪ್ರಸ್ತಾಪಿಸಿರುವ ವೇ ಸೈಡ್ ಅಮೆನಿಟೀಸ್ ಸ್ಥಾಪನೆಗೆ 10 ಜಿಲ್ಲೆಗಳಲ್ಲಿ ಜಾಗ ಗುರುತಿಸಲಾಗುವುದು. ಪಾರ್ಕಿಂಗ್, ಶೌಚಗೃಹ, ರೆಸ್ಟೋರೆಂಟ್, ಅಂಗಡಿ ಮುಂಗಟ್ಟುಗಳಿರಲಿವೆ. ಇದರಿಂದ ಬೆಳಗಿನ ಜಾವದಲ್ಲಿ ಸಂಭವಿಸುವ ಅಪಘಾತಗಳು ಮತ್ತು ಹೆದ್ದಾರಿಗಳಲ್ಲಿ ವಾಹನಗಳ ದಟ್ಟಣೆ ಕಡಿಮೆಯಾಗಲಿವೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts