More

    ಬ್ರೇಕ್ ಹಾಕಿದರೂ ನಿಲ್ಲಲಿಲ್ಲ…ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಸಬರಮತಿ-ಆಗ್ರಾ ಸೂಪರ್‌ಫಾಸ್ಟ್‌

    ನವದೆಹಲಿ: ರಾಜಸ್ಥಾನದ ಅಜ್ಮೀರ್‌ನಲ್ಲಿ ಸೋಮವಾರ (ಮಾರ್ಚ್ 18) ಭಾರಿ ಅಪಘಾತ ಸಂಭವಿಸಿದ್ದು, ಸಬರಮತಿ-ಆಗ್ರಾ ಸೂಪರ್‌ಫಾಸ್ಟ್‌ನ ನಾಲ್ಕು ಬೋಗಿಗಳು ಗೂಡ್ಸ್ ರೈಲಿಗೆ ಡಿಕ್ಕಿಯಾಗಿ ಹಳಿತಪ್ಪಿವೆ. ಈ ಅಪಘಾತದಲ್ಲಿ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅಜ್ಮೀರ್‌ನ ಮದರ್ ರೈಲು ನಿಲ್ದಾಣದಲ್ಲಿ ಮಧ್ಯ ರಾತ್ರಿ 1.04 ಕ್ಕೆ ರೈಲು ಅಪಘಾತ ಸಂಭವಿಸಿದ್ದು, ಅಧಿಕಾರಿಗಳ ಪ್ರಕಾರ, ಲೊಕೊ ಪೈಲಟ್ ರೈಲನ್ನು ನಿಲ್ಲಿಸಲು ತುರ್ತು ಬ್ರೇಕ್ ಹಾಕಿದರು. ಆದರೂ ಅವರಿಗೆ ಅಪಘಾತವನ್ನು ತಡೆಯಲು ಸಾಧ್ಯವಾಗಲಿಲ್ಲ.

    ಗೂಡ್ಸ್ ರೈಲಿಗೆ ಡಿಕ್ಕಿಯಾದ ಕಾರಣ ಜನರಲ್ ಕೋಚ್‌ನ ನಾಲ್ಕು ಬೋಗಿಗಳು ಮತ್ತು ಎಂಜಿನ್ ಹಳಿತಪ್ಪಿವೆ. ಅಪಘಾತದ ಬಗ್ಗೆ ಮಾಹಿತಿ ಬಂದ ತಕ್ಷಣ ಪರಿಹಾರ ತಂಡ ಸ್ಥಳಕ್ಕೆ ಧಾವಿಸಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆಯಲ್ಲಿ ಯಾರೂ ಸಾವಿಗೀಡಾದ ಸುದ್ದಿಯಿಲ್ಲ. ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಅಜ್ಮೀರ್ ಠಾಣೆಗೆ ಕರೆದೊಯ್ಯಲಾಗಿದೆ. ಪ್ರಯಾಣಿಕರು ಮಲಗಿದ್ದಾಗ ಏಕಾಏಕಿ ದೊಡ್ಡ ಶಬ್ದ ಕೇಳಿಸಿತು ಎಂದು ಹೇಳಿದರು. ಇದಾದ ಬಳಿಕ ಬೋಗಿಗಳು ಹಳಿತಪ್ಪಿದವು.

    ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್), ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಜೊತೆಗೆ ಹೆಚ್ಚುವರಿ ವಿಭಾಗೀಯ ರೈಲ್ವೆ ಮ್ಯಾನೇಜರ್ (ಎಡಿಆರ್‌ಎಂ) ಮತ್ತು ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಹಳಿತಪ್ಪಿದ ಕೋಚ್‌ಗಳು ಮತ್ತು ಇಂಜಿನ್‌ ಅನ್ನು ಮತ್ತೆ ಟ್ರ್ಯಾಕ್‌ಗೆ ತರಲು ಪ್ರಯತ್ನಗಳು ನಡೆಯುತ್ತಿವೆ. ಘಟನೆಯ ನಂತರ ವಿಡಿಯೋ ಕೂಡ ಹೊರಬಿದ್ದಿದ್ದು, ಹಳಿತಪ್ಪಿದ ಬೋಗಿಗಳ ಬಗ್ಗೆ ತನಿಖೆ ನಡೆಸುತ್ತಿರುವುದನ್ನು ಕಾಣಬಹುದು. ಡಿಕ್ಕಿಯ ರಭಸಕ್ಕೆ ಕೆಲವು ರೈಲ್ವೆ ಕಂಬಗಳು ರೈಲಿನ ಮೇಲೆ ಬಿದ್ದಿದ್ದು, ಗ್ಯಾಸ್ ಕಟ್ಟರ್‌ಗಳ ಸಹಾಯದಿಂದ ಅವುಗಳನ್ನು ಕತ್ತರಿಸಲಾಗುತ್ತಿದೆ.

    ಮುಂದುವರಿದಿದೆ ಹಳಿ ದುರಸ್ತಿ ಕಾರ್ಯ
    ರೈಲ್ವೆ ಅಧಿಕಾರಿಗಳು ಮತ್ತು ನೌಕರರು ಕೂಡಲೇ ಕ್ರಮ ಕೈಗೊಂಡು ಹಳಿ ದುರಸ್ತಿ ಕಾರ್ಯ ಆರಂಭಿಸಿದ್ದಾರೆ ಎಂದು ವಾಯುವ್ಯ ರೈಲ್ವೆ ಸಿಪಿಆರ್‌ಒ ಶಶಿ ಕಿರಣ್ ತಿಳಿಸಿದ್ದಾರೆ. ಹಳಿಗಳ ಪುನಶ್ಚೇತನ ಕಾಮಗಾರಿ ನಡೆಯುತ್ತಿದ್ದು, ಡೌನ್ ಟ್ರ್ಯಾಕ್ ಅಳವಡಿಸಲಾಗಿದೆ. ಆರು ರೈಲು ಸಂಚಾರಕ್ಕೂ ತೊಂದರೆಯಾಗಿದೆ. ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಿಯಾ ಯೋಜನೆ ರೂಪಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.

    ಸಹಾಯಕ್ಕಾಗಿ ರೈಲ್ವೆ ಸಹಾಯವಾಣಿ ಸಂಖ್ಯೆ
    ಪ್ರಯಾಣಿಕರಿಗೆ ಸಹಾಯ ಮಾಡಲು ಸಹಾಯವಾಣಿ ಸಂಖ್ಯೆಗಳನ್ನು ನೀಡಲಾಗಿದೆ ಎಂದು ವಾಯುವ್ಯ ರೈಲ್ವೆ ಹೇಳಿದೆ. ಈ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿಸಲಾಗಿದೆ. ನಾಲ್ಕು ಜನರಲ್ ಬೋಗಿಗಳು ಮಾತ್ರ ಹಳಿತಪ್ಪಿವೆ ಎಂದು ನಾರ್ತ್ ವೆಸ್ಟರ್ನ್ ರೈಲ್ವೇಸ್ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿದೆ.

    ಇನ್ನು ರೈಲ್ವೆ ಇಲಾಖೆ, ‘ಇದರಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ತಕ್ಷಣ ಕ್ರಮ ಕೈಗೊಂಡು ರೈಲ್ವೇ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ತಲುಪಿದ್ದು, ಹಳಿ ಮರುಸ್ಥಾಪನೆ ಕಾರ್ಯ ನಡೆಯುತ್ತಿದೆ. ಅಜ್ಮೀರ್ ನಿಲ್ದಾಣದಲ್ಲಿ ರೈಲ್ವೆಯಿಂದ ಸಹಾಯ ಕೇಂದ್ರವನ್ನು ಸ್ಥಾಪಿಸಲಾಗಿದೆ ಮತ್ತು ಸಹಾಯವಾಣಿ ಸಂಖ್ಯೆ 0145-2429642 ನೀಡಲಾಗಿದೆ’ ಎಂದು ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts