More

    ವಿಜಯನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಶಾಂತಿಯುತ: ಕುಟುಂಬ ಸಮೇತ ಸಚಿವ ಆನಂದ ಸಿಂಗ್ ವೋಟಿಂಗ್

    ಹೊಸಪೇಟೆ: ಸಣ್ಣಪುಟ್ಟ ಗೊಂದಲಗಳು ಬಿಟ್ಟರೆ ನಗರಸಭೆ ಸೇರಿ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ಸೋಮವಾರ ಶಾಂತಿಯುತ ಮತದಾನ ನಡೆಯಿತು.

    ಹೊಸಪೇಟೆ ನಗರಸಭೆಯ 35 ವಾರ್ಡ್‌ಗಳಲ್ಲಿ 31 ಅತಿ ಸೂಕ್ಷ್ಮ ಮತ್ತು 55 ಸೂಕ್ಷ್ಮ ಸೇರಿ ಒಟ್ಟು 171 ಮತಗಟ್ಟೆಗಳನ್ನು ತೆರೆಯಲಾಗಿತ್ತು. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾದರೂ 9ವರೆಗೆ ಮಂದಗತಿಯಲ್ಲಿ ಸಾಗಿತ್ತು. ಬಳಿಕ ಕೊಂಚ ವೇಗ ಪಡೆಯಿತು. 10 ಗಂಟೆಗೆ ಕೇವಲ ಶೇ.7.41 ಮತದಾನವಾದರೆ, ಮಧ್ಯಾಹ್ನ 2 ಗಂಟೆ ವೇಳೆಗೆ ಶೇ.34.88 ಮತದಾನವಾಗಿತ್ತು. ಈ ವೇಳೆ ಊಟದ ಸಮಯವಾದ್ದರಿಂದ ಮತಗಟ್ಟೆಗೆ ಜನರು ಬರುವುದು ಕೊಂಚ ಕ್ಷೀಣಿಸಿತ್ತು. ಕೋವಿಡ್ ಕಠಿಣ ನಿಯಮಗಳನ್ನು ಜಿಲ್ಲಾಡಳಿತ ಜಾರಿಗೊಳಿಸಿದ್ದರೂ ಹಲವೆಡೆ ಜನರು ಮಾಸ್ಕ್ ಧರಿಸದೆ, ದೈಹಿಕ ಅಂತರ ಕಾಪಾಡದಿರುವುದು ಕಂಡು ಬಂತು. 10 ಮತ್ತು 11ನೇ ವಾರ್ಡ್‌ನ ಕೆಲ ಮತಗಟ್ಟೆ ಸಮೀಪದಲ್ಲಿ ತೆರೆದಿದ್ದ ಅಂಗಡಿಗಳನ್ನು ಪೊಲೀಸರು ಮುಚ್ಚಿಸಿದರು. ಸಹಾಯಕ ಆಯುಕ್ತ ಸಿದ್ಧರಾಮೇಶ್ವರ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

    ವ್ಹೀಲ್‌ಚೇರ್‌ನಲ್ಲಿ ಆಗಮನ: ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆಗೆ 6ಕ್ಕೂ ಹೆಚ್ಚು ವೃದ್ಧರನ್ನು ಅವರ ಕುಟುಂಬ ಸದಸ್ಯರು ವ್ಹೀಲ್ ಚೇರ್‌ನಲ್ಲಿ ಕರೆತಂದು ಮತಹಾಕಿಸಿದರು. ಈ ವೇಳೆ 87 ವರ್ಷದ ನಿವೃತ್ತ ಪೊಲೀಸ್ ಅಧಿಕಾರಿ ಶೇಷಾಚಲಂ ಎಂಬುವರು ವ್ಹೀಲ್‌ಚೇರ್‌ನಲ್ಲಿ ಪತ್ನಿಯೊಂದಿಗೆ ಆಗಮಿಸಿ ಹಕ್ಕು ಚಲಾಯಿಸಿ ಗಮನ ಸೆಳೆದರು.

    ಆನಂದ ಸಿಂಗ್ ಕುಟುಂಬ ಮತದಾನ: 5ನೇ ವಾರ್ಡ್ ವ್ಯಾಪ್ತಿಯ ನಗರದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆ ಕೇಂದ್ರಕ್ಕೆ ಸಚಿವ ಆನಂದ ಸಿಂಗ್ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ತಾಯಿ ಸುಮಿತ್ರಾ, ಪತ್ನಿ ಲಕ್ಷ್ಮೀ ಸಿಂಗ್, ಪುತ್ರ ಸಿದ್ಧಾರ್ಥ ಸಿಂಗ್, ಪುತ್ರಿ ವೈಷ್ಣವಿ ಮತದಾನ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts