More

    ಹೊಸ ಜಿಲ್ಲೆಗೆ ಅನುದಾನ ನೀಡಲು ತಾತ್ವಿಕ ಒಪ್ಪಿಗೆ: ವಿಜಯನಗರ ವಿಶೇಷಾಧಿಕಾರಿ ಅನಿರುದ್ಧ್ ಶ್ರವಣ್ ಮಾಹಿತಿ

    ಹೊಸಪೇಟೆ: ನೂತನ ಜಿಲ್ಲಾಡಳಿತ ರಚನೆಗೆ ಸಂಬಂಧಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಮೂಲಸೌಕರ್ಯ ಒದಗಿಸಲು ಎರಡು ಹಂತದಲ್ಲಿ ಅನುದಾನ ನೀಡಲು ತಾತ್ವಿಕ ಒಪ್ಪಿಗೆ ದೊರೆತಿದೆ ಎಂದು ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿ ಅನಿರುದ್ಧ್ ಶ್ರವಣ್ ಹೇಳಿದರು.

    ನಗರದ ಡ್ಯಾಂ ರಸ್ತೆಯ ಟಿಎಸ್‌ಪಿ ಕಾರ್ಖಾನೆ ಆವರಣದಲ್ಲಿನ ಕಟ್ಟಡಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿದರು. ಮೊದಲ ಹಂತವಾಗಿ ವಿವಿಧ ಇಲಾಖೆ ಕಚೇರಿಗಳ ಆರಂಭಿಸಲು ಬಾಡಿಗೆ ಕಟ್ಟಡಗಳಿಗಾಗಿ 68 ಕೋಟಿ ರೂ. ಪ್ರಸ್ತಾವನೆ ಕಳಿಸಿದ್ದು, ಜುಲೈ ಅಂತ್ಯದೊಳಗೆ ಸರ್ಕಾರದಿಂದ ಅಧಿಕೃತ ಅನುಮೋದನೆ ದೊರೆಯಲಿದೆ. ಬಳಿಕ ಎರಡನೇ ಹಂತದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ವಸತಿಗೃಹ ಹಾಗೂ ಸ್ಟೇಡಿಯಂ, ಜಿಲ್ಲಾ ಮಟ್ಟದ ಗ್ರಂಥಾಲಯ, ಆಸ್ಪತ್ರೆ ಸೇರಿ ಪ್ರಮುಖ ಸೌಕರ್ಯಗಳಿಗೆ ಅನುಮೋದನೆ ನೀಡುವ ಭರವಸೆ ನೀಡಿದ್ದಾರೆ ಎಂದರು.

    ಪ್ರಮುಖವಾಗಿ 65 ರಿಂದ 70 ಕಚೇರಿಗಳನ್ನು ಆರಂಭಿಸಲಾಗುತ್ತಿದ್ದು, ಒಟ್ಟು 40 ಇಲಾಖೆಗಳು ನೂತನ ಜಿಲ್ಲೆಯಲ್ಲಿ ಕಾರ್ಯಾರಂಭಿಸಲಿವೆ. ಜಿಲ್ಲಾಸ್ಪತ್ರೆ ಕಟ್ಟಡ ನಿರ್ಮಾಣ ಕುರಿತು ಸಚಿವ ಅನಂದ ಸಿಂಗ್ ನೇತೃತ್ವದಲ್ಲಿ ಕೆಲ ಸಿದ್ಧತೆಗಳು ನಡೆದಿದ್ದು, ಅಗತ್ಯ ವೈದ್ಯರು ಹಾಗೂ ಸಿಬ್ಬಂದಿ ನೇಕಮವಾಗಬೇಕಿದೆ ಎಂದು ತಿಳಿಸಿದರು.

    ನಗರದ ಮಾಲೀಕರು ಕಟ್ಟಡ ಬಾಡಿಗೆ ಕೊಡಲು ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಗರಸಭೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಕಟ್ಟಡಗಳನ್ನು ಪರಿಶೀಲಿಸಿದ್ದಾರೆ. ಈ ಪೈಕಿ ನಗರದ ಮಧ್ಯ ಭಾಗದಲ್ಲಿ ಎರಡು ಸಂಕೀರ್ಣಗಳು ಸೂಕ್ತವಿದ್ದು, ಅವುಗಳನ್ನು ಬಾಡಿಗೆ ಪಡೆಯಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

    ಕಂದಾಯ ಜಿಲ್ಲೆಯಾಗಿ ಘೋಷಣೆ: ಈಗಾಗಲೇ ವಿಜಯನಗರ ಕಂದಾಯ ಜಿಲ್ಲೆಯಾಗಿ ಘೋಣೆಯಾಗಿದೆ. ಗಡಿ ಗುರುತು ಕಾರ್ಯ ಸಹ ಪೂರ್ಣಗೊಂಡಿದೆ. ಡಿಸಿ, ಎಸ್ಪಿ ಹಾಗೂ ಜಿಪಂ ಸಿಇಒ ಕಚೇರಿಗಳು ಆರಂಭವಾಗಬೇಕಿದೆ. ಈ ಅಧಿಕಾರಿಗಳ ನಿಯೋಜನೆ ಬಳಿಕ ಅವರ ಕೆಳಗೆ ಕಾರ್ಯನಿರ್ವಹಿಸಲು ಸಿಬ್ಬಂದಿ ಬೇಕಾಗುತ್ತದೆ. ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರ್ ಅಗತ್ಯವಿದ್ದಲ್ಲಿ ಪ್ರಾದೇಶಿಕ ಅಯುಕ್ತರು ವ್ಯವಸ್ಥೆ ಮಾಡಬೇಕು. ತಕ್ಷಣ ಅಧಿಕಾರಿಗಳ ನೇಮಕ ಆಗದಿದ್ದರೆ ಈಗಿರುವ ಅಧಿಕಾರಿಗಳಿಗೆ ಜವಾಬ್ದಾರಿ ಹಂಚಿಕೆ ಮಾಡಬೇಕಾಗುತ್ತದೆ ಎಂದರು. ಬಳಿಕ ತುರ್ತಾಗಿ ಬೇಕಿರುವ ಕಚೇರಿಯ ಕಟ್ಟಡ ನಿರ್ಮಾಣ ಕುರಿತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಜಾಗ ಪರಿಶೀಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts