More

    ನಬಾರ್ಡ್‌ನಿಂದ ಅನುದಾನ: ಆರ್‌ಎಂಎಂ ವಿಶ್ವಾಸ

    ಶಿವಮೊಗ್ಗ: ಅನುದಾನ ಕೊರತೆಯಿಂದ ನಲುಗುತ್ತಿರುವ ಎಂಎಡಿಬಿ(ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ)ಗೆ ಆರ್ಥಿಕ ಚೈತನ್ಯ ತುಂಬಲು ಮಂಡಳಿ ನೂತನ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೊಸ ಯೋಜನೆ ರೂಪಿಸಿದ್ದಾರೆ. ಮಂಡಳಿಯ ವಿವಿಧ ಕಾಮಗಾರಿಗಳಿಗೆ ನಬಾರ್ಡ್‌ನಿಂದ ಸರ್ಕಾರದ ಮೂಲಕ 195 ಕೋಟಿ ರೂ. ಸಹಾಯಧನ ಪಡೆಯಲು ಮುಂದಾಗಿದ್ದಾರೆ.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದು ಒಪ್ಪಿಗೆ ಸೂಚಿಸಿದ್ದಾರೆ. ನಬಾರ್ಡ್ ಅನುದಾನ ದೊರೆತರೆ 115 ಕೋಟಿ ರೂ. ವೆಚ್ಚದಲ್ಲಿ ತೂಗು ಸೇತುವೆ, 40 ಕೋಟಿ ರೂ. ವೆಚ್ಚದಲ್ಲಿ ಕಾಲುಸಂಕ ನಿರ್ಮಿಸುವ ಗುರಿಯಿದೆ. ಜೂನ್ ತಿಂಗಳ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
    ಈ ಬಾರಿ ಬಜೆಟ್‌ನಲ್ಲಿ ಮಂಡಳಿಗೆ 35 ಕೋಟಿ ರೂ. ಅನುದಾನ ನೀಡಲಾಗಿದೆ. ನಿರೀಕ್ಷಿತ ಮಟ್ಟದಲ್ಲಿ ರಾಜ್ಯ ಸರ್ಕಾರದಿಂದ ಅನುದಾನ ದೊರೆಯುವ ಸಾಧ್ಯತೆಗಳು ಕಷ್ಟ. ಹೀಗಾಗಿ ನಬಾರ್ಡ್ ಮೂಲಕ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ಮಲೆನಾಡು ಭಾಗದಲ್ಲಿ ಕಾಲುಸಂಕ, ನೀರು ಇಂಗಿಸಿ ಅಂತರ್ಜಲ ಹೆಚ್ಚಿಸಲು ಚೆಕ್ ಡ್ಯಾಂ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಎರಡು ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ರೂಪಿಸಲಾಗುವುದು ಎಂದು ಹೇಳಿದರು.
    ಗಣಿ ರಾಯಲ್ಟಿಗೆ ಬೇಡಿಕೆ: ಗಣಿಗಾರಿಕೆಯಿಂದ ಬರುವ ರಾಯಧನದಲ್ಲಿ ಸ್ವಲ್ಪ ಪಾಲು ಎಂಎಡಿಬಿಗೂ ನೀಡಿದರೆ ಗಣಿಗಾರಿಕೆಯಿಂದ ಹಾಳಾದ ಪ್ರದೇಶಗಳ ಪುನಶ್ಚೇತನ ಮಾಡಬಹುದು. ಇದಕ್ಕೆ ಅವಕಾಶವಿದ್ದು, ಈ ದಿಸೆಯಲ್ಲಿ ಪ್ರಯತ್ನ ಮಾಡುತ್ತೇನೆ. ಮಂಡಳಿಗೆ ಹೊಸತನ ನೀಡಲು ಉತ್ಸುಕನಾಗಿದ್ದೇನೆ ಎಂದು ಆರ್.ಎಂ.ಮಂಜುನಾಥ ಗೌಡ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts