More

    ರಾಗಿ ಖರೀದಿಗೆ ಹಿಂದು ಮುಂದು

    ಹೊಸದುರ್ಗ: ಇಲ್ಲಿನ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರದಲ್ಲಿ ಸಿಬ್ಬಂದಿಯ ಅಸಮರ್ಪಕ ಕಾರ್ಯವೈಖರಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ ಎಂಬ ಆರೋಪ ಕೇಳಿಬಂದಿವೆ.

    ಹೊಸದುರ್ಗ ತಾಲೂಕು ರಾಜ್ಯದಲ್ಲೇ ಹೆಚ್ಚು ರಾಗಿ ಬೆಳೆಯುವ ಪ್ರದೇಶವಿದ್ದು, ಉತ್ತಮ ಮಳೆಯ ಹಿನ್ನೆಲೆಯಲ್ಲಿ ಈ ಬಾರಿ ಅಂದಾಜು 21,500 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿತ್ತು. ಎಕರೆಗೆ ಸರಾಸರಿ 6 ಕ್ವಿಂಟಾಲ್ ಇಳುವರಿ ಬಂದಿದೆ. ಬೆಳೆ ಹೆಚ್ಚಾದ ಕಾರಣ ಮಾರುಕಟ್ಟೆಯಲ್ಲಿ ರಾಗಿ ಧಾರಣೆ 2,200 ರೂಪಾಯಿಗೆ ಕುಸಿತ ಕಂಡಿತ್ತು.

    ಸಂಕಷ್ಟಕ್ಕೆ ಸಿಲುಕಿದ್ದ ರೈತರಿಗೆ ನೆರವಾಗುವ ಉದ್ದೇಶದಿಂದ ಸರ್ಕಾರ 3200 ರೂ. ಬೆಂಬಲ ಬೆಲೆ ನಿಗದಿ ಮಾಡಿ ನ್ಯಾಫೆಡ್ ಮೂಲಕ ರಾಗಿ ಖರೀದಿ ಕೇಂದ್ರ ತೆರೆದಿತ್ತು.

    ಜನವರಿಯಲ್ಲೇ ಹೆಸರು ನೋಂದಣಿ ಮಾಡಿದ್ದ ರೈತರಿಗೆ ಜೇಷ್ಠತೆ ಆಧಾರದ ಮೇಲೆ ಖರೀದಿಗೆ ದಿನಾಂಕ ಗೊತ್ತುಪಡಿಸಿ ಟೋಕನ್ ನೀಡಲಾಗಿತ್ತು. ಟೋಕನ್ ನೀಡಿದ ದಿನಾಂಕದಂದು ರಾಗಿ ಮಾರಾಟಕ್ಕೆ ಬಂದ ರೈತರನ್ನು ಸಿಬ್ಬಂದಿ ಅನಗತ್ಯವಾಗಿ ಸತಾಯಿಸಿದ್ದಾರೆ ಎಂದು ದೂರಲಾಗಿದೆ.

    ಗುರುವಾರ ನೂರಕ್ಕೂ ಹೆಚ್ಚು ರೈತರು ರಾಗಿ ಚೀಲಗಳೊಂದಿಗೆ ಮಾರುಕಟ್ಟೆಗೆ ಬಂದಿದ್ದರೂ ಸಿಬ್ಬಂದಿ ರಾಗಿ ಖರೀದಿ ಪ್ರಕ್ರಿಯೆ ನಡೆಸದೆ ಖರೀದಿ ಕೇಂದ್ರಕ್ಕೆ ಬೀಗ ಹಾಕಿ ಸ್ಥಳದಿಂದ ತೆರಳಿದರು ಎಂದು ಆರೋಪಿಸಲಾಗಿದೆ.

    ಕಳೆದ ಒಂದು ವಾರದಿಂದ ಇಂತಹ ಸಮಸ್ಯೆ ಸೃಷ್ಟಿಯಾಗಿದೆ. ಖರೀದಿ ಕೇಂದ್ರ ಸಿಬ್ಬಂದಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸದೆ ರಾಗಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಮಾರಾಟಗಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ರೀತಿ ಮಾಡಲಾಗುತ್ತಿದೆ ಎಂಬುದು ರೈತರ ಆರೋಪ.

    ಕೃಷಿಕರು ತಂದ ರಾಗಿಯನ್ನು ಮಾತ್ರ ಗುಣಮಟ್ಟ ಪರಿಶೀಲಿಸುವ ಅಧಿಕಾರಿಗಳು ವರ್ತಕರ ರಾಗಿಯನ್ನು ಪರಿಶೀಲನೆ ಮಾಡದೇ ಖರೀದಿಸುತ್ತಿದ್ದಾರೆ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ.

    ಖರೀದಿ ಕೇಂದ್ರದ ಅವಧಿ ಮುಗಿದರೆ ರೈತರು ಬೆಂಬಲ ಬೆಲೆ ಸಿಗದೆ ನಷ್ಟ ಅನುಭವಿಸಬೇಕಾಗುತ್ತದೆ. ಕೇಂದ್ರದಲ್ಲಿ ಇಷ್ಟು ಸಮಸ್ಯೆಯಿದ್ದರೂ ಜನಪ್ರತಿನಿಧಿಗಳಾಗಲಿ, ತಾಲೂಕು ಆಡಳಿತವಾಗಲೀ ಸಮಸ್ಯೆ ನಿವಾರಣೆ ಮುಂದಾಗಿಲ್ಲ ಎಂದು ಕೃಷಿಕರು ಆಪಾದಿಸಿದ್ದಾರೆ.

    ರಾಗಿ ಖರೀದಿ ಕೇಂದ್ರದ ಜಿಲ್ಲಾ ಅಧಿಕಾರಿ ಎಚ್.ಕೃಷ್ಣಯ್ಯ ಹೇಳಿಕೆ: ರಾಗಿ ಖರೀದಿ ಕೇಂದ್ರದಲ್ಲಿ ಸಮಸ್ಯೆಯಾಗಿರುವುದು ನಿಜ. ಟೋಕನ್ ನೀಡದ ರೈತರು ಕೂಡ ರಾಗಿ ಮಾರಲು ಬರುತ್ತಿರುವುದು ಸಮಸ್ಯೆ ಸೃಷ್ಟಿಯಾಗಲು ಕಾರಣವಾಗಿದೆ. ರೈತರು ಮತ್ತು ಅಧಿಕಾರಿಗಳ ನಡುವಿನ ಕಿತ್ತಾಟದಿಂದ ಗುರುವಾರ ರಾಗಿ ಖರೀದಿ ಸಾಧ್ಯವಾಗಿಲ್ಲ. ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು.

     

    ವಹಿವಾಟು ನಿರ್ಬಂಧ ವಿಸ್ತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts