More

    ವಿವಿ ಸಾಗರಕ್ಕೆ 20 ಟಿಎಂಸಿ ಅಡಿ ನೀರು

    ಹೊಸದುರ್ಗ: ಭದ್ರಾ ಜಲಾಶಯದಿಂದ ವಾಣಿ ವಿಲಾಸ ಸಾಗರಕ್ಕೆ 20 ಟಿಎಂಸಿ ಅಡಿ ನೀರು ತುಂಬಿಸುವುದು ನಮ್ಮ ಗುರಿ ಎಂದು ಸಂಸದ ಎ.ನಾರಾಯಣಸ್ವಾಮಿ ಹೇಳಿದರು.

    ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಬಳಿ ನಡೆಯುತ್ತಿರುವ ಭದ್ರಾ ಮೇಲ್ದಂಡೆ ಯೋಜನೆಯ ರೈಲ್ವೆ ಅಂಡರ್‌ಪಾಸ್ ಕಾಮಗಾರಿ ಸ್ಥಳಕ್ಕೆ ಬುಧವಾರ ಬೇಟಿ ನೀಡಿ ಮಾತನಾಡಿದರು.

    ಭದ್ರಾ ಮೇಲ್ದಂಡೆ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಗೆ ನೀರು ಹರಿಯಲು ರೈಲ್ವೆ ಕೆಳಸೇತುವೆ ಕಾಮಗಾರಿ ಬಹುದೊಡ್ಡ ತೊಡಕಾಗಿದೆ. ರೈಲ್ವೆ ಇಲಾಖೆ, ಭದ್ರಾ ಮೇಲ್ದಂಡೆ ಯೋಜನೆ ಹಾಗೂ ಗುತ್ತಿಗೆದಾರರ ನಡುವೆ ಸಾಮ್ಯತೆಯಿಲ್ಲದೆ ಕಾಮಗಾರಿಯ ವೇಗ ಕಡಿಮೆಯಾಗಿತ್ತು. ಶೀಘ್ರವಾಗಿ ಅಂಡರ್‌ಪಾಸ್ ಕಾಮಗಾರಿ ಪೂರ್ಣಗೊಳಿಸಿದರೆ ಈ ವರ್ಷದ ಮಳೆಗಾಲ ಮುಗಿಯುವ ಸಮಯದೊಳಗೆ ವಿ.ವಿ.ಸಾಗರಕ್ಕೆ 20 ಟಿಎಂಸಿ ಅಡಿ ನೀರು ತುಂಬಿಸುವ ವಿಶ್ವಾಸವಿದೆ ಎಂದರು.

    ರೈಲು ನಿಲುಗಡೆಗೆ ರೈಲ್ವೆ ಇಲಾಖೆ ರಾಜ್ಯ ಸಚಿವರು ಆದೇಶ ನೀಡಿದ್ದರು. ಆದರೆ, ಅಧಿಕಾರಿಗಳು ಬದಲಿ ರೈಲು ಮಾರ್ಗ ನಿರ್ಮಿಸಿ ಕಾಮಗಾರಿಗೆ ಅವಕಾಶ ಮಾಡಿಕೊಡುವ ತೀರ್ಮಾನ ಮಾಡಿದ್ದರಿಂದ ಕಾಮಗಾರಿ ಆರಂಭ ತಡವಾಗಲಿದೆ. ದಿನದ 24 ಗಂಟೆಯ ಅವಧಿಯಲ್ಲಿ ಕೆಲಸ ನಿರ್ವಹಿಸುವ ಮೂಲಕ ಬದಲಿ ರೈಲು ಮಾರ್ಗ ನಿರ್ಮಿಸುವ ಕೆಲಸ ಮಾಡುತ್ತಿದ್ದಾರೆ. 10 ದಿನದಲ್ಲಿ ಕೆಲಸ ಮುಗಿದು ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

    ರೈಲ್ವೆ ಇಲಾಖೆ ಹಾಗೂ ಭದ್ರಾ ಮೇಲ್ದಂಡೆ ಇಲಾಖೆ ಅಧಿಕಾರಿಗಳು, ಬಿಜೆಪಿ ಮುಖಂಡ ಗೂಳಿಹಟ್ಟಿ ಕೃಷ್ಣಮೂರ್ತಿ, ಪುರಸಭೆ ಸದಸ್ಯ ಮಂಜುನಾಥ್, ಉಮೇಶ್ ಗುಜ್ಜಾರ್, ಅರುಣ್ ಕುಮಾರ್, ಮೋಹನ್ ಮತ್ತಿತರರಿದ್ದರು.

    ಲಾರಿ, ಯಂತ್ರ ಬಾಡಿಗೆ ವೆಚ್ಚ ಭರಿಸುವ ಭರವಸೆ: ರೈಲ್ವೆ ಬದಲಿ ಮಾರ್ಗ ನಿರ್ಮಾಣದ ಕಾಮಗಾರಿಯನ್ನು ಇನ್ನಷ್ಟು ಚುರುಕುಗೊಳಿಸಿ ಹತ್ತು ದಿನದಲ್ಲಿ ಮುಗಿಸುವಂತೆ ಸಂಸದ ಎ.ನಾರಾಯಣಸ್ವಾಮಿ ಅಧಿಕಾರಿಗಳಿಗೆ ಸೂಚಿಸಿದರು. ಕಾಮಗಾರಿಗೆ ಮತ್ತಷ್ಟು ಟಿಪ್ಪರ್ ಲಾರಿ ಮತ್ತಿತರ ಯಂತ್ರಗಳ ಅವಶ್ಯಕತೆಯಿದೆ ಎಂದು ಸಿಬ್ಬಂದಿ ತಿಳಿಸಿದರು. ಕೂಡಲೇ ಲಾರಿ ಹಾಗೂ ಯಂತ್ರಗಳ ಬಾಡಿಗೆ ಪಡೆಯಿರಿ, ಅದಕ್ಕೆ ಅಗತ್ಯವಾದ ಹಣವನ್ನು ತಮ್ಮ ಸ್ವಂತ ಖರ್ಚಿನಲ್ಲಿ ಭರಿಸುವುದಾಗಿ ಸಂಸದರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts