More

    ಭಾವನಾತ್ಮಕ ಸಂಬಂಧದಿಂದ ಜೀವನೋತ್ಸಾಹ ಹೆಚ್ಚಳ

    ಹೊಸದುರ್ಗ: ಅಜ್ಜ, ಅಜ್ಜಿ ಹಾಗೂ ಮೊಮ್ಮಕ್ಕಳ ಭಾವನಾತ್ಮಕ ಸಂಬಂಧಗಳು ವಯೋವೃದ್ಧರಿಗೆ ಜೀವನ ಉತ್ಸಾಹ ಮೂಡಿಸಿದರೆ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತವೆ ಎಂದು ಉದ್ಯಮಿ ಕೆ.ಎಸ್.ಕಲ್ಮಠ್ ತಿಳಿಸಿದರು.

    ಎಸ್.ನಿಜಲಿಂಗಪ್ಪ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ಪಟ್ಟಣದ ಎಸ್.ನಿಜಲಿಂಗಪ್ಪ ಶಾಲೆಯಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ ಚಿಲಿಪಿಲಿ ಹಬ್ಬ ಹಾಗೂ ಅಜ್ಜಿ-ತಾತಂದಿರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಅವಿಭಕ್ತ ಕುಟುಂಬಗಳ ಸಂಖ್ಯೆ ಕಡಿಮೆಯಾಗುತ್ತಿರುವ ಕಾಲಘಟ್ಟದಲ್ಲಿ ಅಜ್ಜಿ, ತಾತ ಮತ್ತು ಮೊಮ್ಮಕ್ಕಳ ನಡುವಿನ ಕಂದಕ ಹೆಚ್ಚಾಗುತ್ತಿರುವುದು ಕಳವಳಕಾರಿ ಎಂದರು.

    ಜೀವನದ ಅಂತ್ಯಕಾಲದಲ್ಲಿರುವ ವಯೋವೃದ್ಧರಿಗೆ ಮೊಮ್ಮಕ್ಕಳು ಸ್ಫೂರ್ತಿಯ ಸೆಲೆಯಾಗಿ ಕಳೆದು ಹೋದ ಬದುಕನ್ನು ಮತ್ತೆ ನೆನಪಿಸುವ ಕೆಲಸ ಮಾಡುತ್ತಾರೆ. ಹಾಗೆಯೇ ಅಜ್ಜಿ ತಾತನ ಸಂಪರ್ಕದಲ್ಲಿ ಬೆಳೆಯುವ ಮಕ್ಕಳು ಜೀವನಕ್ಕೆ ಅಗತ್ಯವಾದ ಮೌಲ್ಯ ರೂಢಿಸಿಕೊಳ್ಳುತ್ತಾರೆ ಎಂದು ಹೇಳಿದರು.

    ಹಿರಿಯರಿಗೆ ವಯಸ್ಸಾದಂತೆ ಮನೆ ಜವಾಬ್ದಾರಿಗಳಿಂದ ದೂರವಾಗಿ ಶೂನ್ಯ ಆವರಿಸುತ್ತದೆ. ಇಂತಹ ಸಂದರ್ಭ ಮೊಮ್ಮಕ್ಕಳ ನಡುವಿನ ಒಡನಾಟ ಮತ್ತೆ ಬಾಲ್ಯಾವಸ್ಥೆಗೆ ಕರೆದುಕೊಂಡು ಹೋಗುವ ಜತೆಗೆ ಜೀವನದ ಜಂಜಾಟ ಮರೆತು ಸ್ವಚ್ಛಂದವಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.

    ಪೂರ್ವ ಪ್ರಾಥಮಿಕ ಶಾಲೆ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ವಿಶೇಷವಾಗಿ ಮೊಮ್ಮಕ್ಕಳು ಹಾಗೂ ಅಜ್ಜಿ, ತಾತಂದಿರಿಗಾಗಿ ಆಯೋಜಿಸಲಾಗಿದ್ದ ರ‌್ಯಾಂಪ್ ವಾಕ್‌ನಲ್ಲಿ ಪಾಲ್ಗೊಂಡ ಮಕ್ಕಳು, ಅಜ್ಜಿ ತಾತನ ಕೈ ಹಿಡಿದು ಹೆಜ್ಜೆ ಹಾಕಿದರು.

    ಎಂ.ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಬುರುಡೇಕಟ್ಟೆ ರಾಜೇಶ್, ಶಿವಲಿಂಗಮೂರ್ತಿ, ನಾಗಲಾಂಬಿಕಾ ಕಲ್ಮಠ್, ಡಿ.ವಿ.ನಾಗಮಣಿ, ಬಿ.ಪಿ. ಓಂಕಾರಪ್ಪ, ಎಂ.ಬಿ.ತಿಪ್ಪೇಸ್ವಾಮಿ, ನೀಲಕಂಠಯ್ಯ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts