More

    ಆಮೆಗತಿಯಲ್ಲಿ ರಸ್ತೆ ಕಾಮಗಾರಿ

    ಹೊರ್ತಿ: ವಿಜಯಪುರ-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 50ರ ಚತುಷ್ಪದ ರಸ್ತೆ ಅಗಲೀಕರಣ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ಹೊರ್ತಿ ಸೇರಿ ಸುತ್ತಮುತ್ತಲಿನ ಗ್ರಾಮಸ್ಥರು ತೊಂದರೆ ಪಡುವಂತಾಗಿದೆ.
    ಹೊರ್ತಿ ಧಾರ್ಮಿಕ, ವ್ಯಾಪಾರ ವಹಿವಾಟಿಗೆ ಹೆಸರಾಗಿದ್ದು, ಜನನಿಬಿಡ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಇಲ್ಲದಿರುವುದರಿಂದ ಎಲ್ಲವೂ ರಸ್ತೆಯಲ್ಲೇ ನಡೆಯುವುದು ಸಾಮಾನ್ಯವಾಗಿದೆ.
    ಕಳೆದ ಒಂದೂವರೇ ವರ್ಷದಿಂದ ರಸ್ತೆ ಕಾಮಗಾರಿ ಪ್ರಾರಂಭವಾಗಿದ್ದರೂ, ನಿಧಾನಗತಿಯಲ್ಲಿ ಸಾಗುತ್ತಿದೆ. ಈ ಕಾಮಗಾರಿಗೆ ಗ್ರಾಮದ 50 ಕ್ಕೂ ಹೆಚ್ಚು ಮನೆಗಳು ಆಹುತಿಯಾಗಿವೆ. ಕೆಲ ಅಂಗಡಿಗಳು ನೆಲಸಮಗೊಂಡಿವೆ. ವ್ಯಾಪಾರವಿಲ್ಲದೆ ಗ್ರಾಮದ ಕೆಲವರು ನಿರ್ಗತಿಕರಾಗಿದ್ದಾರೆ.
    ಚತುಷ್ಪಥ ರಸ್ತೆ ನಿಯಮಾನುಸಾರವಾಗಿ ನಡೆಯುತ್ತಿಲ್ಲ. ರಸ್ತೆ ಬದಿಯಲ್ಲಿ ಆಳವಾದ ತಗ್ಗುಗಳನ್ನು ತೋಡಲಾಗಿದೆ. ಅದಕ್ಕೆ ತಡೆಗೋಡೆಗಳನ್ನು ನಿರ್ಮಿಸದೆ ಅಪಾಯಕ್ಕೆ ಆಹ್ವಾನಿಸಲಾಗಿದೆ. ಈ ಸ್ಥಳದಲ್ಲಿ ಕೆಲವರು ಆಯತಪ್ಪಿ ಬಿದ್ದು ಪ್ರಾಣ ಕಳೆದುಕೊಂಡ ಉದಾಹರಣೆಗಳು ಇವೆ. ಪ್ರತಿದಿನ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಇದರಿಂದ ಸಂಚಾರಕ್ಕೆ ಅಡೆತಡೆಯಾಗಿದೆ. ಗ್ರಾಮಕ್ಕೆ ಬರಲು ಬೇರೆ ದಾರಿಯಿಲ್ಲದಂತಾಗಿದೆ.
    ಈ ಕಾಮಗಾರಿ ಅವ್ಯವಸ್ಥೆಯಿಂದ ಸಾಕಷ್ಟು ಜನ ತೊಂದರೆ ಅನುಭವಿಸುತ್ತಿದ್ದಾರೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಇಲ್ಲವಾದಲ್ಲಿ ನ.8 ರಂದು ಧರಣಿ ಸತ್ಯಾಗ್ರಹ ನಡೆಸುವುದು ಅನಿವಾರ್ಯವಾಗಲಿದೆ ಎಂದು ಗ್ರಾಮದ ಮುಖಂಡರಾದ ಶಂಕ್ರೆಪ್ಪ ಕಡಿಮನಿ, ಮೊಹ್ಮದ್‌ರಫಿ ಸೋಫೆಘರ, ಮಲ್ಲಪ್ಪ ದೇಗಿನಾಳ, ಶಿವನಿಂಗಪ್ಪ ಜಂಗಮಶೆಟ್ಟಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts