More

    ಸೌಕರ್ಯ ಕೇಳಿದ್ದಕ್ಕೆ ಮನೆಗೆ ವಾಪಸ್

    ವಿಜಯವಾಣಿ ವಿಶೇಷ ವಿಜಯಪುರ
    ಕ್ವಾರಂಟೈನ್ ಕೇಂದ್ರದ ಅವ್ಯವಸ್ಥೆ ಖಂಡಿಸಿ ಪ್ರತಿಭಟಿಸಿದವರನ್ನು ಗೃಹಬಂಧನಕ್ಕೆ ರವಾನಿಸಿದ ಘಟನೆ ಇಂಡಿ ತಾಲೂಕಿನ ಹೊರ್ತಿಯಲ್ಲಿ ಬೆಳಕಿಗೆ ಬಂದಿದೆ.
    ಇಲ್ಲಿನ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ಹೊರ್ತಿ ಸೇರಿ ಭತಗುಣಕಿ, ಇಂಡಿ, ಹಾಲಳ್ಳಿ ಹಾಗೂ ನಾದ ಮತ್ತಿತರ ಗ್ರಾಮಗಳ ಅಂದಾಜು 75ಜನ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದರು. ಆದರೆ, ಮೂಲ ಸೌಕರ್ಯದ ಸಮಸ್ಯೆ ಎದುರಾಗಿದ್ದರಿಂದ ಗುರುವಾರ ಅಲ್ಲಿದ್ದವರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಆ ಬಳಿಕ ಅವರನ್ನು ಅಲ್ಲಿಂದ ತೆರವುಗೊಳಿಸಿರುವ ಅಂಶ ಬೆಳಕಿಗೆ ಬಂದಿದೆ.

    ಏನಿದು ಘಟನೆ?

    ವಸತಿ ಶಾಲೆಯಲ್ಲಿದ್ದ ಜನರು ಅಲ್ಲಿನ ವ್ಯವಸ್ಥೆ ವಿರುದ್ಧ ಹರಿಹಾಯ್ದರು. ಕುಡಿಯಲು ನೀರಿಲ್ಲ, ಗುಣಮಟ್ಟದ ಆಹಾರವಿಲ್ಲ, ವಸತಿ ವ್ಯವಸ್ಥೆ ಕೂಡ ಸಮರ್ಪಕವಾಗಿಲ್ಲ, ಸೊಳ್ಳೆಗಳ ಕಾಟ ತಪ್ಪಿಲ್ಲ, ಶೌಚಕ್ಕೂ ಜಾಗವಿಲ್ಲ, ಮೂತ್ರಿಯಿಂದಾಗಿ ಇಡೀ ಕಟ್ಟಡ ಗಬ್ಬೆದ್ದು ನಾರುತ್ತಿದ್ದರೂ ಕೇಳೋರಿಲ್ಲ. ಸೋಂಕು ಬರುವುದೋ ಬಿಡುವುದೋ….ಇಲ್ಲಿದ್ದರೆ ಸಾವು ಮಾತ್ರ ಖಚಿತ….ಎಂದು ಅಸಮಾಧಾನವನ್ನು ತೋಡಿಕೊಂಡಿದ್ದರು. ಸಕಾಲಕ್ಕೆ ಅಧಿಕಾರಿಗಳು ಬರುತ್ತಿಲ್ಲ, ಕಿಟಕಿ ಗಾಜು ಕಿತ್ತು ಹೋಗಿವೆ. ಮಧ್ಯದ ಬಾಟಲ್‌ಗಳು ಎಲ್ಲೆಂದರಲ್ಲಿ ಬೀಸಾಡಲಾಗಿದೆ. ಕಳಪೆ ಅಕ್ಕಿ ಬಳಸಿ ಆಹಾರ ತಯಾರಿಸಲಾಗಿದೆ. ನಮಗೆ ಕರೊನಾ ಬಂದು ಸತ್ತರೆ ಮನೆಯಲ್ಲಿಯೇ ಸಾಯುತ್ತೇವೆಂದು ಕೆಲವರು ಅಲ್ಲಿಂದ ಕಾಲ್ಕಿತ್ತಿದ್ದರೆ ಇನ್ನುಳಿದವರು ಅಧಿಕಾರಿಗಳ ಸೂಚನೆ ಮೇರೆಗೆ ಅಲ್ಲಿಂದ ನಿರ್ಗಮಿಸಿದ್ದಾಗಿ ಸ್ಥಳೀಯ ಮುಖಂಡ ಬಿ.ಡಿ. ಪಾಟೀಲ ತಿಳಿಸುತ್ತಾರೆ.

    ಅಧಿಕಾರಿಗಳು ಹೇಳೋದೇನು?

    ವಾಸ್ತವದಲ್ಲಿ ಸಾಂಸ್ಥಿಕ ಕ್ವಾರಂಟೈನ್ ಮಾಡುವಂತೆಯೇ ಇಲ್ಲ. ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಕೆಲವರು ಸ್ವಗ್ರಾಮಕ್ಕೆ ತೆರಳದ ಕಾರಣ ವಸತಿ ವ್ಯವಸ್ಥೆ ಮಾಡಲಾಗಿದೆ. ಗಂಟಲು ಮಾದರಿ ದ್ರವ ಪರೀಕ್ಷಿಸಿ ಅವರನ್ನೆಲ್ಲ ಮನೆಗೆ ಕಳುಹಿಸಬೇಕು. ಪಾಸಿಟಿವ್ ಬಂದರೆ ಮಾತ್ರ ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುವುದೆಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸುತ್ತಾರೆ.
    ಒಟ್ಟಿನಲ್ಲಿ ಸಾರ್ವಜನಿಕರ ಆರೋಪ ಮತ್ತು ಅಧಿಕಾರಿಗಳ ಸ್ಪಷ್ಟನೆ ಏನೇ ಇರಲಿ ಶಾಲೆ ಸ್ಥಿತಿ ಮಾತ್ರ ಅಧೋಗತಿಗಿಳಿದಿದ್ದಂತೂ ನಿಜ. ಮುಂಬರುವ ದಿನಗಳಲ್ಲಿ ಶಾಲೆ ನಡೆಸುವುದು ದುಸ್ತರವಾಗಿದ್ದನ್ನು ಅಲ್ಲಗಳೆಯುವಂತಿಲ್ಲ.

    70ಕ್ಕೂ ಅಧಿಕ ಜನರು ಮುರಾರ್ಜಿ ಶಾಲೆಯಲ್ಲಿದ್ದರು. ತೀವ್ರತರ ತೊಂದರೆ ಅನುಭವಿಸುತ್ತಿರುವ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಲ್ಲಿನ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ. ವ್ಯವಸ್ಥೆ ಮಾಡುವುದಾಗಿ ಅಧಿಕಾರಿಗಳು ಹೇಳಿದರಾದರೂ ಅಷ್ಟೊತ್ತಿಗಾಗಲೇ ಅಲ್ಲಿನವರು ಕಾಲ್ಕಿತ್ತಿದ್ದರು. ಅವರೆಲ್ಲರ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದೆ. ವರದಿ ಬರುವವರೆಗೆ ಅವರಿಗೆ ವ್ಯವಸ್ಥೆ ಕಲ್ಪಿಸಬೇಕಿತ್ತು. ಆದರೆ, ಈಗಲೇ ಅವರನ್ನು ಮನೆಗೆ ಕಳುಹಿಸಿದ್ದು ಅವರಲ್ಲಿ ಪಾಸಿಟಿವ್ ಇದ್ದರೆ ಪರಿಸ್ಥಿತಿ ಬಿಗಡಾಯಿಸುವುದರಲ್ಲಿ ಅನುಮಾನವಿಲ್ಲ.
    ಬಿ.ಡಿ. ಪಾಟೀಲ, ಜೆಡಿಎಸ್ ಮುಖಂಡ

    ಸೌಕರ್ಯ ಕೇಳಿದ್ದಕ್ಕೆ ಮನೆಗೆ ವಾಪಸ್
    ಸೌಕರ್ಯ ಕೇಳಿದ್ದಕ್ಕೆ ಮನೆಗೆ ವಾಪಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts