More

    ಕಸ ಪ್ರತ್ಯೇಕಿಸಿ ಪೌರಕಾರ್ಮಿಕರನ್ನು ಗೌರವಿಸಿ

    ಮಂಗಳೂರು: ಮನೆಗಳು ಹಾಗೂ ವಸತಿ ಸಮುಚ್ಚಯಗಳಿಂದ ಉತ್ಪತ್ತಿಯಾಗುವ ಕಸವನ್ನು ಮೂಲದಿಂದಲೇ ಹಸಿ ಹಾಗೂ ಒಣ ಕಸವಾಗಿ ವಿಂಗಡಿಸಿ ನೀಡುವ ಮೂಲಕ ಪೌರಕಾರ್ಮಿಕರಿಗೆ ಸಹಕರಿಸಬೇಕು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಮನವಿ ಮಾಡಿದರು.

    ಒಣ ಹಾಗೂ ಹಸಿ ಕಸ ಬೇರ್ಪಡಿಸಿ ವೈಜ್ಞಾನಿಕವಾಗಿ ವಿಲೇ ಮಾಡುವ ಕುರಿತು ಹಲವು ವರ್ಷಗಳಿಂದ ಮನವಿ ಮಾಡಲಾಗುತ್ತಿದೆ. ಆದರೆ ಕೆಲವರು ಇನ್ನೂ ಈ ಬಗ್ಗೆ ಗಮನ ಹರಿಸಿಲ್ಲ. ಮೂಲದಲ್ಲೇ ತ್ಯಾಜ್ಯ ಬೇರ್ಪಡಿಸಿದಲ್ಲಿ ಪಚ್ಚನಾಡಿ ಪ್ರದೇಶದಲ್ಲಿ ನಡೆದ ಭೂಕುಸಿತದಂಥ ದುರ್ಘಟನೆ ತಡೆಗಟ್ಟಬಹುದು ಎಂದು ಮನಪಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ರಸ್ತೆ ಬದಿ ಎಸೆದರೆ ಕ್ರಿಮಿನಲ್ ಮೊಕದ್ದಮೆ: ಕೆಲವೆಡೆ ರಸ್ತೆ ಬದಿ ಕಸ ಎಸೆಯುವುದು ಕಂಡುಬರುತ್ತಿದ್ದು, ಸಿಸಿ ಕ್ಯಾಮರಾ ಅಳವಡಿಸಿ ನಿಗಾ ಇರಿಸಲಾಗುವುದು. ತಪ್ಪಿತಸ್ಥರ ವಿರುದ್ಧ ಎನ್‌ಜಿಟಿ ಮಾರ್ಗಸೂಚಿ ಹಾಗೂ ಮನಪಾ ತ್ಯಾಜ್ಯ ನಿರ್ವಹಣೆ ಬೈಲಾ 2018ರಂತೆ ಗರಿಷ್ಠ 25 ಸಾವಿರ ರೂ.ವರೆಗೂ ದಂಡ ವಿಧಿಸಿ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಎಚ್ಚರಿಸಿದರು.

    ಘಟಕ ಅಳವಡಿಸಿದರೆ ರಿಯಾಯಿತಿ:
    ಮನೆಗಳಲ್ಲಿ ಕಾಂಪೋಸ್ಟಿಗ್ ಘಟಕ ಅಳವಡಿಸಿಕೊಂಡಲ್ಲಿ ಆಸ್ತಿ ತೆರಿಗೆಯ ಘನತ್ಯಾಜ್ಯ ಕರದಲ್ಲಿ ಶೇ.50ರಷ್ಟು ವಿನಾಯಿತಿ ನೀಡುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ. ಕಸ ವಿಲೇವಾರಿಗೆ ಸಂಬಂಧಿಸಿ ದೂರು ಇದ್ದಲ್ಲಿ ಟೋಲ್‌ಫ್ರೀ ನಂ.155313 ಅಥವಾ ಮೊಬೈಲ್-9449007722ಗೆ ವಾಟ್ಸಾೃಪ್ ಮೂಲಕ ಸ್ಥಳದ ವಿವರದೊಂದಿಗೆ ದೂರು ಸಲ್ಲಿಸಬಹುದು ಎಂದು ಮೇಯರ್ ತಿಳಿಸಿದರು.

    ಉಪಮೇಯರ್ ಸುಮಂಗಲಾ ರಾವ್, ಜಂಟಿ ಆಯುಕ್ತ ಡಾ.ಸಂತೋಷ್ ಕುಮಾರ್, ಆರೋಗ್ಯ ಅಧಿಕಾರಿ ಮಂಜಯ್ಯ ಶೆಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

    ಕರೊನಾ ಸೋಂಕಿಗೊಳಗಾಗಿ ಕ್ವಾರಂಟೈನ್ ಹಾಗೂ ಐಸೊಲೇಶನ್‌ನಲ್ಲಿರುವವರು ಜೈವಿಕ ವೈದ್ಯಕೀಯ ತ್ಯಾಜ್ಯ ಪ್ರತ್ಯೇಕಿಸಿ ಆರೋಗ್ಯ ಇಲಾಖೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಾರ್ಗಸೂಚಿಯನ್ವಯ ಸಂಗ್ರಹಿಸಲು ಹಾಗೂ ನಿರ್ವಹಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ಪೇಪರ್‌ನಲ್ಲಿ ಸುತ್ತಿ ಅಥವಾ ಹಳದಿ ಬಣ್ಣದ ಬಯೋಬ್ಯಾಗ್‌ನಲ್ಲಿ ಹಾಕಿ ನೀಡಿಬೇಕು. ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗುವುದು.

    ಅಕ್ಷಿ ಶ್ರೀಧರ್
    ಆಯುಕ್ತರು, ಮನಪಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts