More

    ನಕಲಿ ಚಲನ್ ಸೃಜಿಸಿ 5.85 ಲಕ್ಷ ರೂ. ವಂಚನೆ

    ಹೊನ್ನಾಳಿ: ನಕಲಿ ಚಲನ್, ಬ್ಯಾಂಕ್ ಸೀಲು ಮತ್ತು ಸಹಿ ಸೃಜಿಸಿ, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಅಂದಾಜು 5.85 ಲಕ್ಷ ಮೊತ್ತವನ್ನು ಸರ್ಕಾರಕ್ಕೆ ಪಾವತಿಸದೇ ವಂಚಿಸಿರುವ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಗೆ ದೂರು ನೀಡಿರುವುದಾಗಿ ಉಪ ನೋಂದಣಾಧಿಕಾರಿ ಆರ್.ಎಲ್.ವೀಣಾ ಪತ್ರಿಕೆಗೆ ತಿಳಿಸಿದ್ದಾರೆ.

    ಆಗಸ್ಟ್ 19ರಂದು ಕಚೇರಿಯಲ್ಲಿ ಲೆಕ್ಕ ಮರು ಹೊಂದಾಣಿಕೆ ವೇಳೆ ಕೆ 2 ಚಲನ್ ಪ್ರತಿ, ಕೆಪಿಸಿ 25 ಬ್ಯಾಂಕ್ ಸ್ಕ್ರೋಲ್ ಒಳಗೊಂಡ ಪಟ್ಟಿಯಲ್ಲಿ ಕೆ 2 ಚಲನ್ ಮೊತ್ತವು ಬಿಂಬಿಸದಿರುವಾಗ ಎಸ್‌ಬಿಐ ಹೊನ್ನಾಳಿ ಶಾಖೆಗೆ ತೆರಳಿ ಪ್ರತಿಯನ್ನು ಲಗತ್ತಿಸಿ ಮಾಹಿತಿ ನೀಡುವಂತೆ ಮನವಿ ಮಾಡಿದ್ದೆವು.

    ಈ ಬಗ್ಗೆ ತಿಂಗಳಾದರೂ ಬ್ಯಾಂಕ್‌ನಿಂದ ಯಾವುದೇ ಮಾಹಿತಿ ಲಭ್ಯವಾಗಲಿಲ್ಲ. ಆದ್ದರಿಂದ ಪುನ: ಸೆಪ್ಟೆಂಬರ್ ಕೊನೆಯ ವಾರ ನಮ್ಮ ಸಿಬ್ಬಂದಿಯನ್ನು ಕಳಿಸಿ ಕೆ 2 ಚಲನ್ ಬಗ್ಗೆ ಮಾಹಿತಿ ಕೊಡುವಂತೆ ಬ್ಯಾಂಕಿನ ವ್ಯವಸ್ಥಾಪಕರಿಗೆ ಮತ್ತೊಮ್ಮೆ ಮನವಿ ಮಾಡಲಾಯಿತು. ಅ.1ರಂದು ಬ್ಯಾಂಕ್‌ನ ಸಿಬ್ಬಂದಿ ನಮ್ಮ ಕಚೇರಿಗೆ ಮುದ್ದಾಂ ಬಂದು ಮಾಹಿತಿ ನೀಡಿದ್ದಾಗಿ ಹೇಳಿದರು.

    ಈ ಪತ್ರದಲ್ಲಿ ಶಾಂತಪ್ಪ ಅಡಿವೆಪ್ಪ ಹಾಗೂ ಗಣೇಶ್ ಅವರು ಕೆ 2 ಚಲನ್ ಪ್ರತಿಯನ್ನು ನಕಲಿ ಸೃಜಿಸಿ, ನಿಮ್ಮಲ್ಲಿ ನೋಂದಣಿಗೆ ಸಲ್ಲಿಸಿರುತ್ತಾರೆ. ಮತ್ತು ಅವರಿಂದ ಬ್ಯಾಂಕಿನವರೇ ಅದೇ ಮೊತ್ತದ ಕೆ 2 ಚಲನ್‌ನ್ನು ಮರು ಸೃಜಿಸಿ ತಮ್ಮಲ್ಲಿ ಪಾವತಿಸಿಕೊಂಡು, ಚಲನ್ ಪ್ರತಿಯನ್ನು ಲಗತ್ತಿಸಿ ನಮಗೆ ಸಲ್ಲಿಸಿರುತ್ತಾರೆಂದು ಬ್ಯಾಂಕಿನವರು ನಮಗೆ ತಿಳಿಸಿದರು ಎಂದು ಅವರು ಹೇಳಿದ್ದಾರೆ.

    ಈ ಪತ್ರದನ್ವಯ ಕೆ2 ಚಲನ್ ಪ್ರತಿ ನಕಲಿಯಾಗಿದ್ದನ್ನು ನಾವು ಮನಗಂಡು, ಉಳಿದಂತೆ ಎಲ್ಲ ಪ್ರತಿಯನ್ನು ಮರು ಪರಿಶೀಲಿಸಿ ಜನವರಿ 2020 ರಿಂದ ಸೆಪ್ಟೆಂಬರ್ ಕೊನೆಯವರೆಗೆ ಎಲ್ಲ ಕೆ 2 ಚಲನ್ ಪ್ರತಿಯ ಲೆಕ್ಕ ಮರು ಹೊಂದಾಣಿಕೆ ಮಾಡಲಾಯಿತು ಎಂದು ಅವರು ತಿಳಿಸಿದರು. ಈ ಪ್ರಕರಣ ಸೇರಿ ಒಟ್ಟು 34 ಕೆ2 ಚಲನ್ ಪ್ರತಿ ನಕಲಿಯಾಗಿರುವುದು ಕಂಡು ಬಂದಿದೆ ಎಂದು ವಿವರಿಸಿದರು.

    ಈ ದಸ್ತಾವೇಜಿನ ಪಕ್ಷಗಾರರು ಎಲ್ಲ ಮೊತ್ತವನ್ನು ಕೆ2 ಚಲನ್ ಮರು ಸೃಜಿಸಿ ಸಂಪೂರ್ಣ ಮೊತ್ತವನ್ನು ಈಗಾಗಲೇ ಅವರೇ ಖುದ್ದಾಗಿ ಭರಿಸಿದ್ದು, ಅದರ ಪ್ರತಿಯನ್ನು ಕಚೇರಿಗೆ ಸಲ್ಲಿಸಿದ್ದಾರೆ. ಈ ಪ್ರತಿಯನ್ನು ಆಧಾರವಾಗಿಟ್ಟುಕೊಂಡು ನವೆಂಬರ್ 3ರಂದು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.

    ಇನ್ನೊಂದು ವಿಶೇಷವೇನೆಂದರೆ ಶಾಂತಪ್ಪ ಅಡಿವೆಪ್ಪ ಮತ್ತು ಗಣೇಶ್ ಅವರು ಅಧಿಕೃತ ಪತ್ರ ಬರಹಗಾರರಲ್ಲ. ಆದರೂ ಅವರಿಂದ ಇಂತಹ ವಂಚನೆ ನಡೆದಿದೆ ಎಂದರು. ಪ್ರಕರಣದ ತನಿಖೆಯಾಗಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts