More

    ಮನೆಯಲ್ಲಿ ಯಾರೂ ಇಲ್ಲ, ನಾನೊಬ್ಬಳೇ ಇದ್ದೀನಿ ಬಾ… ಎಂದಾಕೆಯ ಮನೆಗೆ ಹೋದವನಿಗೆ ನರಕ ದರ್ಶನ!

    ಬೆಂಗಳೂರು: ಮನೆಯಲ್ಲಿ ಯಾರೂ ಇಲ್ಲ. ನಾನೊಬ್ಬಳೇ ಇದ್ದೀನಿ ಬಾ… ಎಂದಾಕೆಯ ಮಾತಿಗೆ ಮರುಳಾಗಿ ಹೋದವನಿಗೆ ಅಲ್ಲಿ ಆಗಿದ್ದೇ ಬೇರೆ. ವಿಡಿಯೋ ಕಾಲ್​ ಮಾಡಿಕೊಂಡು ಯುವತಿಯನ್ನ ನೋಡಲೆಂದು ಮೂರನೇ ಮಹಡಿಗೆ ಹೋದಾತನಿಗೆ ನರಕ ದರ್ಶನವಾಗಿದೆ. ಅವರ ಕಾಟ ಸಹಿಸಲಾಗದೆ ಸುದ್ದುಗುಂಟೆಪಾಳ್ಯದ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ. ಈತನ ದೂರಿನ ಮೇರೆಗೆ ಪೊಲೀಸರು ಬೆಂಗಳೂರಿನಲ್ಲಿ ಯುವತಿ-ಈಕೆಯ ಪ್ರಿಯಕರ ಸೇರಿ ಐವರನ್ನ ಬಂಧಿಸಿದ್ದಾರೆ.

    ಏನಿದು ಪ್ರಕರಣ?: ಕಳೆದ ಅಕ್ಟೋಬರ್​ ತಿಂಗಳಲ್ಲಿ ಒಂದು ದಿನ ರಾತ್ರಿ ಸಮಯದಲ್ಲಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ಹೊಸೂರು ಸಮೀಪದ ತೆರುಪೇಟೆಯ ದಿಲೀಪ್​ಕುಮಾರ್​(32) ಮೊಬೈಲ್​ಗೆ ಅಪರಿಚಿತ ನಂಬರ್​ನಿಂದ ಹಾಯ್​ ಎಂದು ಮೆಸೇಜ್​ ಬಂದಿತ್ತು. ಹೆಸರು, ವಿಳಾಸ ಕೇಳಿದಾಗ ಯುವತಿ, ತಾನು “ಪ್ರಿಯಾ” ಎಂದು ಪರಿಚಯಿಸಿಕೊಂಡು ‘ತಮಿಳುನಾಡು ಮೂಲದವಳು. ಸದ್ಯ ಕೆಲಸ ಹುಡುಕುವ ಸಲುವಾಗಿ ಬೆಂಗಳೂರಿನ ಬಿಟಿಎಂ ಲೇಔಟ್​ನಲ್ಲಿ ನೆಲೆಸಿದ್ದೇನೆ’ ಎಂದು ಚಾಟ್​ ಶುರು ಮಾಡಿದ್ದಾಳೆ. ಫೇಸ್​ಬುಕ್​ನಲ್ಲೂ ಫ್ರೆಂಡ್​ ಆಗಿದ್ದಾಳೆ.

    ಇದಾದ ಮೇಲೆ ಅ.27ರಂದು ಸಲುಗೆಯಿಂದ ಮಾತನಾಡಲು ಶುರು ಮಾಡಿದ ಯುವತಿ, ‘ಮನೆಯಲ್ಲಿ ಯಾರೂ ಇಲ್ಲ. ಒಬ್ಬಳೇ ಇದ್ದೇನೆ. ಇಬ್ಬರೂ ಭೇಟಿ ಮಾಡೋಣ ಬಾ’ ಎಂದು ಕರೆದಿದ್ದಾಳೆ. ಕೆಲಸ ಇದ್ದ ಕಾರಣಕ್ಕೆ ದಿಲೀಪ್​ಕುಮಾರ್​, ಅಂದು ಯುವತಿಯನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ. ಮಾರನೇ ದಿನ ಮತ್ತೆ ಬೆಳಗ್ಗೆ 9 ಗಂಟೆಗೆ ದಿಲೀಪ್​ಕುಮಾರ್​ಗೆ ಕರೆ ಮಾಡಿದ ಯುವತಿ, ‘ಮನೆಯಲ್ಲಿ ಯಾರೂ ಇಲ್ಲ, ಬಾ’ ಎಂದು ಲೊಕೇಷನ್​ ಕಳುಹಿಸಿದ್ದಾಳೆ. ದಿಲೀಪ್​ ಮಧ್ಯಾಹ್ನ 12 ಗಂಟೆಗೆ ಹೊಸೂರಿನಿಂದ ಹೊರಟು ಬರುವಾಗ ಯುವತಿ ಪದೇಪದೆ ಕರೆ ಮಾಡಿ ‘ಎಲ್ಲಿದ್ದೀಯಾ? ಎಷ್ಟೊತ್ತಿಗೆ ಬರುತ್ತೀಯಾ?’ ಎಂದು ವಿಚಾರಿಸಿಕೊಂಡಿದ್ದಾಳೆ. ಇದಕ್ಕೆ ವಿಡಿಯೋ ಕಾಲ್​ ಮಾಡಿ ತಾನಿರುವ ಸ್ಥಳವನ್ನು ದಿಲೀಪ್​ ತೋರಿಸಿದ್ದಾನೆ. ಮಧ್ಯಾಹ್ನ 1.30ಕ್ಕೆ ಆಕೆಯ ಮನೆ ಸಮೀಪ ಬಂದು ಕಾರು ಪಾರ್ಕ್​ ಮಾಡುತ್ತಿದ್ದಂತೆ, ಅದನ್ನು ನೋಡಿದ ಯುವತಿ ಈತನಿಗೆ ಕರೆ ಮಾಡಿ, ಒಬ್ಬನೇ ಬಂದಿರುವ ಬಗ್ಗೆ ಖಚಿತ ಪಡಿಸಿಕೊಂಡು 3ನೇ ಮಹಡಿಯಿಂದ ಕೈ ಬೀಸಿ ಕರೆದಿದ್ದಾಳೆ.

    ಯುವತಿ ಇದ್ದ 3ನೇ ಮಹಡಿ ಮನೆಗೆ ದಿಲೀಪ್​ ಕುಮಾರ್​ ಹೋಗುತ್ತಿದ್ದಂತೆ ನಾಲ್ವರು ಆರೋಪಿಗಳು ಹಿಡಿದು ಹಲ್ಲೆ ನಡೆಸಿ ‘ನೀನು ಯಾರೋ? ಏಕೆ ಬಂದಿದ್ದೀಯಾ? ನಿನ್ನನ್ನು ಕರೆದಿರುವುದು ಯಾರು?’ ಎಂದು ಏರುಧ್ವನಿಯಲ್ಲಿ ದಬಾಯಿಸಿದ್ದಾರೆ. ಯುವತಿ ಆಹ್ವಾನ ನೀಡಿದ ಬಗ್ಗೆ ದಿಲೀಪ್​ ವಿವರಿಸಿದಾಗ ‘ನೀನು ಯಾವ ಕೆಲಸಕ್ಕೆ ಬಂದಿದ್ದೀಯಾ?’ ಎಂದು ನಮಗೆ ಗೊತ್ತು ಎನ್ನುತ್ತಾ ಮನಸೋಇಚ್ಛೆ ಥಳಿಸಿ ದಿಲೀಪ್​ರ​ ಜೇಬಿನಲ್ಲಿದ್ದ ಐಫೋನ್​, ಕಾರಿನ ಕೀ, 26 ಸಾವಿರ ರೂ. ಕಸಿದುಕೊಂಡಿದ್ದಾರೆ.

    ಇದಾದ ಮೇಲೆ ಯುವತಿಯ ಅಕ್ಕಪಕ್ಕ ನಿಲ್ಲಿಸಿ ಅರೆನಗ್ನ ವಿಡಿಯೋ ಸೆರೆ ಹಿಡಿದುಕೊಂಡು 1 ಲಕ್ಷ ರೂ.ಗೆ ಬ್ಲ್ಯಾಕ್​​ಮೇಲ್​ ಮಾಡಿದ್ದಾರೆ. ‘ಹಣ ಕೊಡದಿದ್ದರೆ ನಿನ್ನ ಹೆಂಡತಿಗೆ ಈ ವಿಡಿಯೋ ಕಳುಹಿಸುತ್ತೇವೆ’ ಎಂದು ಬೆದರಿಕೆವೊಡ್ಡಿದ್ದಾರೆ. ಭಯಗೊಂಡ ದಿಲೀಪ್​ಕುಮಾರ್​, ತನ್ನ ಅಣ್ಣನಿಗೆ ಕರೆ ಮಾಡಿ 25 ಸಾವಿರ ರೂ. ಮತ್ತು ಸ್ನೇಹಿತನಿಂದ 25 ಸಾವಿರ ರೂ. ಆನ್​ಲೈನ್​ನಲ್ಲಿ ವರ್ಗಾವಣೆ ಮಾಡಿಸಿಕೊಂಡು ಆರೋಪಿಗಳಿಗೆ ಕೊಟ್ಟಿದ್ದಾನೆ. ನಂತರ ಆರೋಪಿಗಳು, ದಿಲೀಪ್​ನನ್ನು ಬಿಟ್ಟು ಕಳುಹಿಸಿದ್ದರು. ಮಾರನೇ ದಿನ ಮತ್ತೆ ಕರೆ ಮಾಡಿದ ಆರೋಪಿಗಳು 60 ಸಾವಿರ ರೂ. ನೀಡಿದರೆ ಮಾತ್ರ ಕಾರನ್ನು ವಾಪಸ್​ ಕೊಡುವುದಾಗಿ ದಿಲೀಪ್​ಗೆ ಹೆದರಿಸಿದ್ದಾರೆ. ಈ ಬಗ್ಗೆ ಸ್ನೇಹಿತನ ಬಳಿ ದಿಲೀಪ್​ಕುಮಾರ್​ ನೋವು ಹಂಚಿಕೊಂಡಾಗ ಅಂತಿಮವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಹನಿಟ್ರ್ಯಾಪ್​ ಕೇಸ್​ನಲ್ಲಿ ಬಿಟಿಎಂ ಲೇಔಟ್​ ನಿವಾಸಿಗಳಾದ ಹಲೀಮಾ ಅಲಿಯಾಸ್​ ಪ್ರಿಯಾ, ಝಹೀದ್​, ಮುಕ್ತಿಹಾರ್​, ಫಾರನ್​ ಮತ್ತು ಇಸ್ಲಾಮ್​ ಎಂಬುವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಹಣ, ಕಾರು ಮತ್ತು ಮೊಬೈಲ್​ ಜಪ್ತಿ ಮಾಡಲಾಗಿದೆ.

    ಪ್ರಿಯಕರನೇ ಸಾಥ್​ : ಬಂಧಿತ ಹಲೀಮಾ ಅಲಿಯಾಸ್​ ಪ್ರಿಯಾ ಮತ್ತು ಝಹೀದ್​ ಪ್ರೇಮಿಗಳು. ಸುಲಭವಾಗಿ ಹಣ ವಸೂಲಿ ಮಾಡುವ ಉದ್ದೇಶಕ್ಕೆ ಝಹೀದ್​, ತನ್ನ ಪ್ರೇಯಸಿ ಮೂಲಕ ದಿಲೀಪ್​ಕುಮಾರ್​ಗೆ ಕರೆ ಮಾಡಿಸಿ ಸಲುಗೆಯಿಂದ ಮಾತನಾಡುವಂತೆ ಹೇಳಿದ್ದ. ಆನಂತರ ತನ್ನ ಮನೆಗೆ ಪ್ರೇಯಸಿಯನ್ನು ಕರೆಸಿಕೊಂಡು ಅಲ್ಲಿಗೆ ದಿಲೀಪ್​ಕುಮಾರ್​ನನ್ನು ಬರುವಂತೆ ಹೇಳಿ ಬಂದ ಮೇಲೆ ಹನಿಟ್ರ್ಯಾಪ್​ ಮಾಡಿದ್ದಾರೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಈ ಹಿಂದೆಯೂ ಕೃತ್ಯ: ಇದೇ ರೀತಿ ಯುವತಿ ಮೂಲಕ ಅಮಾಯಕರಿಗೆ ಬಲೆ ಬೀಸಿ ತಮ್ಮ ಜಾಗಕ್ಕೆ ಕರೆಸಿಕೊಂಡು ಹನಿಟ್ರ್ಯಾಪ್​ ಮಾಡಿ ಹಣ ವಸೂಲಿ ಮಾಡಿದ್ದಾರೆ. ಮರ್ಯಾದೆಗೆ ಹೆದರಿ ಹಣ ಕೊಟ್ಟು ಪೊಲೀಸರಿಗೆ ದೂರು ಕೊಡದೆ ಸುಮ್ಮನಾಗಿದ್ದಾರೆ. ಈ ಬಗ್ಗೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇದರ ಬಗ್ಗೆಯೂ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ಶಿವಮೊಗ್ಗದಲ್ಲಿ ಭೀಕರ ಅಪಘಾತ: ಅತ್ತೆ-ಸೊಸೆ-ಮೊಮ್ಮಗಳು ದುರ್ಮರಣ

    ಈಶ್ವರಪ್ಪ ಫೋಟೋವುಳ್ಳ ನೋಟು ಬಿಡುಗಡೆ ಮಾಡಿ ಅಣಕಿಸಿದ ಕಾಂಗ್ರೆಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts