More

    2023ರ ಅಂತ್ಯಕ್ಕೆ ಮನೆ ಮನೆಗೆ ಗಂಗೆ

    ಧಾರವಾಡ: ಗ್ರಾಮಗಳ ಉದ್ಧಾರಕ್ಕೆ ಕೇಂದ್ರ ಸರ್ಕಾರ ಹತ್ತಾರು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದೆ. ದೇಶಾದ್ಯಂತ ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿ ಯೋಜನೆ ಯೊಂದನ್ನು ಅನುಷ್ಠಾನಗೊಳಿಸುತ್ತಿದೆ. ಜಲ ಜೀವನ್ ಮಿಶನ್ ಅಡಿ ‘ಹರ್ ಘರ್ ನಲ್ ಸೇ ಜಲ್’ (ಪ್ರತಿ ಮನೆಗೂ ನೀರು) ಒದಗಿಸಲು ಮುಂದಾಗಿದೆ.

    ಕೇಂದ್ರ ಜಲಶಕ್ತಿ ಮಂತ್ರಾಲಯದ ಜಲಜೀವನ್ ಮಿಷನ್ ಅಡಿ ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಮೂಲಕ ಜಲಜೀವನ್ ಮಿಶನ್ ಅನುಷ್ಠಾನಗೊಳ್ಳುತ್ತಿದೆ. ಇದರೊಂದಿಗೆ ಗ್ರಾಮಗಳ ಪ್ರತಿ ಮನೆಮನೆಗೂ ಮೀಟರ್ ಅಳವಡಿಸಿದ ನಳದ ನೀರು ಸಂಪರ್ಕ ಒದಗಿಸುತ್ತಿರುವುದು ವಿಶೇಷ.

    ಜಿಲ್ಲೆಯಲ್ಲಿ 353 ಗ್ರಾಮಗಳಿದ್ದು, 1,79,130 ಮನೆಗಳಿವೆ. ಈಗಾಗಲೇ 80,167 ನಳದ ಸಂಪರ್ಕ (ಹೌಸ್​ಹೋಲ್ಡ್ ಟ್ಯಾಪ್ ಕನೆಕ್ಷನ್) ಹೊಂದಿವೆ. 94,840 ಹೊಸ ನಳದ ಸಂಪರ್ಕ ನೀಡಲು ಗುರುತಿಸಲಾಗಿದೆ. ಜಿಲ್ಲೆಯ 320 ಗ್ರಾಮಗಳ 388 ಜನವಸತಿಗಳಲ್ಲಿ 359 ಜನವಸತಿಗಳನ್ನು 2020- 21ನೇ ಸಾಲಿನ ಯೋಜನೆಗೆ ಆಯ್ದುಕೊಳ್ಳಲಾಗಿದೆ. ಈ ಪೈಕಿ ಧಾರವಾಡ ತಾಲೂಕಿನ 114, ಹುಬ್ಬಳ್ಳಿಯ 47, ಕಲಘಟಗಿ 88, ಕುಂದಗೋಳ 51, ನವಲಗುಂದ ತಾಲೂಕಿನಲ್ಲಿ 59 ಜನವಸತಿಗಳಿಗೆ ನಳದ ಮೂಲಕ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ. ಯೋಜನೆಯ ಸಂಪೂರ್ಣ ಅನುಷ್ಠಾನ 2023ರ ಅಂತ್ಯಕ್ಕೆ ಉಳಿದ ಜನವಸತಿಗಳ ಮನೆಮನೆಗೂ ನಳದ ನೀರು ಲಭ್ಯವಾಗಲಿದೆ.

    ಈಗಾಗಲೇ 348 ಜನವಸತಿಗಳ ಅಂದಾಜು ಪತ್ರಿಕೆ ತಯಾರಿಸಲಾಗಿದೆ. 303 ಅಂದಾಜು ಪತ್ರಿಕೆಗಳಿಗೆ ಆಡಳಿತಾತ್ಮಕ ಮತ್ತು ತಾಂತ್ರಿಕ ಮಂಜೂರಾತಿ ದೊರೆತಿದೆ. ಈ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆ ಪ್ರಗತಿ ಹಂತದಲ್ಲಿವೆ.

    2023ರ ಅಂತ್ಯಕ್ಕೆ ಜಿಲ್ಲೆಯ ಎಲ್ಲ ಗ್ರಾಮಗಳ ಪ್ರತಿ ಮನೆಯೂ ಶುದ್ಧ ಕುಡಿಯುವ ನೀರಿನಿಂದ ವಂಚಿತವಾಗದಂತೆ ನಳದ ಸಂಪರ್ಕ ಕಲ್ಪಿಸಿ, ಯೋಜನೆ ಅನುಷ್ಠಾನದ ಗುರಿ ನೀಡಲಾಗಿದೆ.

    334 ಕೋಟಿ ರೂ. ವೆಚ್ಚ

    ಜಿಲ್ಲೆಯ 388 ಜನವಸತಿಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಗೆ 334.39 ಕೋಟಿ ರೂ. ಅಂದಾಜು ವೆಚ್ಚ ನಿಗದಿಪಡಿಸಲಾಗಿದೆ. ಶೇ. 37.50 ಕೇಂದ್ರದ ಪಾಲು, ಶೇ. 37.50 ರಾಜ್ಯದ ಪಾಲು, ಶೇ. 10 ಗ್ರಾಮ ಸಮುದಾಯದ ಪಾಲು ಹಾಗೂ ಶೇ. 15ರಷ್ಟನ್ನು ಆಯಾ ಗ್ರಾ.ಪಂ.ಗಳು ಭರಿಸಲಿವೆ.

    ಜಿಲ್ಲೆಯ ಕೇಂದ್ರ- ರಾಜ್ಯ ಸಚಿವರು, ಶಾಸಕರ ಮಾರ್ಗದರ್ಶನದೊಂದಿಗೆ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಕೇಂದ್ರ ಜಲಶಕ್ತಿ ಮಂತ್ರಾಲಯ 2024ರ ವೇಳೆಗೆ ಗ್ರಾಮೀಣ ಭಾಗದ ಪ್ರತಿಯೊಂದು ಮನೆಗೂ ನಳದ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲು ‘ಹರ್ ಘರ್ ನಲ್ ಸೇ ಜಲ್’ ಕಾರ್ಯಕ್ರಮ ರೂಪಿಸಿದೆ. ರಾಜ್ಯ ಸರ್ಕಾರ 2023ರ ಅಂತ್ಯಕ್ಕೆ ಎಲ್ಲ ಗ್ರಾಮೀಣ ಕುಟುಂಬಗಳಿಗೆ ಕಾರ್ಯಾತ್ಮಕ ನಳ ಸಂಪರ್ಕ ಕಲ್ಪಿಸಲು ‘ಮನೆ ಮನೆಗೆ ಗಂಗೆ’ ಎಂಬ ಯೋಜನೆಯನ್ನು ಜಾರಿಗೆ ತಂದಿದೆ. ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಹಂತದಲ್ಲಿವೆ.

    | ಆರ್.ವಿ. ಮುನವಳ್ಳಿ ಇಇ, ಗ್ರಾಮೀಣ ಕುಡಿಯು ನೀರು ಮತ್ತು ನೈರ್ಮಲ್ಯ ವಿಭಾಗ

    ಏನಿದು ಯೋಜನೆ

    ಗ್ರಾಮಾಂತರ ಪ್ರದೇಶಗಳಲ್ಲಿ ನೆಲೆಸಿರುವ ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿದಿನಕ್ಕೆ 55 ಲೀ. ಶುದ್ಧ ಕುಡಿಯುವ ನೀರನ್ನು ಪೂರೈಸುವ ಉದ್ದೇಶ ಜಲಜೀವನ್ ಮಿಷನ್ ಹೊಂದಿದೆ. ಗ್ರಾಮಕ್ಕೆ ನೀರು ಪೂರೈಸುವ ಜಲಮೂಲಗಳ ನವೀಕರಣ ಮಾಡಲಾಗುತ್ತದೆ. ನೀರು ಪೂರೈಕೆಗೆ ಈಗಾಗಲೇ ಇರುವ ಓವರ್ ಹೆಡ್ ಟ್ಯಾಂಕ್​ಗಳ ನವೀಕರಣ, ಅಗತ್ಯವಾದರೆ ಹೊಸ ಓವರ್ ಹೆಡ್ ಟ್ಯಾಂಕ್​ಗಳನ್ನು ನಿರ್ವಿುಸಲಾಗುತ್ತದೆ. ಈ ಯೋಜನೆಯಡಿ ಆಯ್ಕೆಯಾದ ಎಲ್ಲ ಗ್ರಾಮಗಳ ಮನೆಗೂ ನಳದ ಸಂಪರ್ಕ ನೀಡಲಾಗುತ್ತದೆ. ಬಳಕೆಯಾಗುವ ನೀರಿಗೆ ಮೀಟರ್ ಅಳವಡಿಸುತ್ತಿರುವುದು ಗ್ರಾಮೀಣ ಪ್ರದೇಶದಲ್ಲಿ ಇದೇ ಮೊದಲು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts