More

    ಹೋಂ ಸ್ಟೇ, ರೆಸಾರ್ಟ್‌ಗಳು ಫುಲ್

    ಚಿಕ್ಕಮಗಳೂರು: ಹಚ್ಚಹಸಿರಿನ ಹೊದಿಕೆ ಹೊದ್ದು ಮಂಜಿನಿಂದಾವೃತವಾಗಿರುವ ಪರ್ವತ ಶ್ರೇಣಿಗಳು, ಕಣ್ಣು ಹಾಯಿಸಿದಲ್ಲೆಲ್ಲಾ ಕಾಣಸಿಗುವ ಕಾಫಿ ತೋಟಗಳು, ಮನಸಿಗೆ ಮುದ ನೀಡುವ ಝರಿ, ಜಲಪಾತಗಳ ಸಮೀಪ ಹೊಸ ವರ್ಷವನ್ನಾಚರಿಸಲು ಪ್ರವಾಸಿಗರ ದಂಡು ಪ್ರವಾಸಿಗರ ಸ್ವರ್ಗವೇ ಆಗಿರುವ ಕಾಫಿನಾಡಿಗೆ ದಾಂಗುಡಿಯಿಡುತ್ತಿದೆ.

    ಹೌದು. ಹೊಸ ವರ್ಷದ ಹಿನ್ನೆಲೆಯಲ್ಲಿ ಈ ಹಿಂದಿನ ವರ್ಷಗಳಿಗಿಂತ ಈ ಬಾರಿ ಹೆಚ್ಚಿನ ಪ್ರವಾಸಿಗರು ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದಾರೆ. ಒಂದು ತಿಂಗಳು ಮೊದಲೇ ಎಲ್ಲ ಹೋಂಸ್ಟೇಗಳು ಹಾಗೂ ರೆಸಾರ್ಟ್‌ಗಳು ಬುಕ್ ಆಗಿವೆ. ಡಿ. 24ರಿಂದ ಜ. 5ರವರೆಗೆ ಯಾವುದೇ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ರೂಮ್‌ಗಳು ಸಿಗಲು ಸಾಧ್ಯವೇ ಇಲ್ಲ.
    ಚಿಕ್ಕಮಗಳೂರು ಜಿಲ್ಲೆಯಲ್ಲಿ ನೋಂದಾಯಿತ 600ಕ್ಕೂ ಹೆಚ್ಚು ಹೋಂ ಸ್ಟೇಗಳಿವೆ. ನೋಂದಣಿ ಮಾಡಿಕೊಳ್ಳದ 1,400ಕ್ಕೂ ಹೆಚ್ಚು ಹೋಂ ಸ್ಟೇಗಳಿವೆ. ಇನ್ನು 200ಕ್ಕೂ ಹೆಚ್ಚು ರೆಸಾರ್ಟ್‌ಗಳು ಕಾಫಿ ನಾಡಿನಲ್ಲಿವೆ. ಆದರೆ ಇವೆಲ್ಲವೂ ಸಂಪೂರ್ಣ ಭರ್ತಿಯಾಗಿವೆ. ಈಗಲೂ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಲ್ಲಿ ರೂಮ್ ಬುಕ್ ಮಾಡಲು ನಿರಂತರವಾಗಿ ಫೋನ್ ಕರೆಗಳು ಬರುತ್ತಿವೆ. ಆದರೆ ಯಾವುದೇ ಸಣ್ಣ ಕೊಠಡಿಗಳೂ ಇಲ್ಲದಂತೆ ಎಲ್ಲವೂ ಬುಕ್ ಆಗಿವೆ ಎನ್ನುತ್ತಿದ್ದಾರೆ ಹೋಂ ಸ್ಟೇ ಮಾಲೀಕರು.
    ಕರೋನಾ ಸಂದರ್ಭದಲ್ಲಿ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳ ಮಾಲೀಕರು ಭಾರಿ ನಷ್ಟ ಅನುಭವಿಸಿದ್ದರು. ಪ್ರವಾಸಿಗರು ಬಾರದೇ ಇದ್ದರೂ ಕೊಠಡಿಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಅನಿವಾರ್ಯವಾಗಿತ್ತು. ಕರೋನಾ ನಿಯಂತ್ರಣಕ್ಕೆ ಬಂದ ಬಳಿಕವೂ ನಿರೀಕ್ಷೆಯಂತೆ ಪ್ರವಾಸಿಗರು ಬಾರದೆ ಇದ್ದಿದ್ದರಿಂದ ಲಾಭವೂ ಇಲ್ಲ ನಷ್ಟವೂ ಇಲ್ಲ ಎನ್ನುವ ಸ್ಥಿತಿ ಇತ್ತು. ಆದರೆ ಈ ಬಾರಿಯ ಹೊಸವರ್ಷಾಚರಣೆಗೆ ಭಾರಿ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿರುವುದು ಮುಂದಿನ ವರ್ಷದ ಪ್ರವಾಸೋದ್ಯಮ ಪ್ರಗತಿಯ ಮುನ್ಸೂಚನೆ ಎನ್ನಲಾಗುತ್ತಿದೆ.
    1.30 ಲಕ್ಷ ಜನರ ಆಗಮನದ ನಿರೀಕ್ಷೆ:
    ಡಿ. 31ರಂದು ಚಿಕ್ಕಮಗಳೂರು ಜಿಲ್ಲೆಗೆ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡಲಿದ್ದಾರೆ. ಹೋಂಸ್ಟೇ ಹಾಗೂ ರೆಸಾರ್ಟ್‌ಗಳ ಬುಕ್ಕಿಂಗ್ ಗಮನಿಸಿದರೆ ಬರೋಬ್ಬರಿ 1.30 ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸುವ ಸಾಧ್ಯತೆಯಿದೆ. ಪ್ರತಿಯೊಂದು ಹೋಂ ಸ್ಟೇನಲ್ಲಿ ಕನಿಷ್ಠ 15ರಿಂದ 40 ಜನರವರೆಗೆ ವಾಸ್ತವ್ಯ ಹೂಡಲಿದ್ದಾರೆ. ಇನ್ನು ದೊಡ್ಡ ರೆಸಾರ್ಟ್‌ಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ತಂಗಲಿದ್ದಾರೆ. ಈ ಎಲ್ಲ ಅಂಕಿ ಅಂಶಗಳ ಪ್ರಕಾರ 1.30 ಲಕ್ಷ ಪ್ರವಾಸಿಗರು ಕಾಫಿನಾಡಿಗೆ ಲಗ್ಗೆ ಇಡಲಿದ್ದಾರೆ.
    ಬೆಂಗಳೂರಿನಿಂದಲೇ ಹೆಚ್ಚಿನ ಆಗಮನ:
    ಬೆಂಗಳೂರಿನಿಂದಲೇ ಹೆಚ್ಚಿನ ಪ್ರವಾಸಿಗರು ಕಾಫಿನಾಡಿಗೆ ಆಗಮಿಸುತ್ತಿದ್ದಾರೆ. ಆನ್‌ಲೈನ್‌ನಲ್ಲಿ ರೂಮ್‌ಗಳನ್ನು ಬುಕ್ ಮಾಡಿರುವವರಲ್ಲಿ ಶೇ.60ರಷ್ಟು ಮಂದಿ ಬೆಂಗಳೂರಿನವರೇ ಎಂಬುದು ವಿಶೇಷ. ಇನ್ನುಳಿದಂತೆ ಮೈಸೂರು, ಉತ್ತರ ಕರ್ನಾಟಕ ಸೇರಿದಂತೆ ಕೇರಳದಿಂದಲೂ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಎಲ್ಲ ಪ್ರವಾಸಿಗರು ಗಿರಿಶ್ರೇಣಿಗಳಲ್ಲಿರುವ ಹಾಗೂ ಕಾಫಿ ತೋಟಗಳ ಮಧ್ಯೆ ಇರುವ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳನ್ನೇ ಆಯ್ಕೆ ಮಾಡಿಕೊಂಡಿರುವುದು ಇನ್ನೊಂದು ವಿಶೇಷ.
    ಪ್ರವಾಸಿಗರ ಸಂಖ್ಯೆ ಹೆಚ್ಚಲು ಕಾರಣ: ಕರೋನಾ ಬಳಿಕ ಬಂದ ವರ್ಷಗಳಲ್ಲಿ ಹೊಸ ವರ್ಷಾಚರಣೆ ವಾರದ ಮಧ್ಯದಲ್ಲಿ ಬಂದಿತ್ತು. ಹೀಗಾಗಿ ರಜೆ ಸಿಗದ ಕಾರಣ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ವಾರಾಂತ್ಯದಲ್ಲೇ ಡಿ. 31 ಬಂದಿರುವುದರಿಂದ ಡಿ. 29ರ ರಾತ್ರಿಯೇ ಪ್ರವಾಸಿಗರು ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಲಿದ್ದಾರೆ. ಡಿ. 30ರಂದು ಜಿಲ್ಲೆಯ ಪ್ರವಾಸಿ ತಾಣಗಳಿಗೆ ತೆರಳಲಿರುವ ಪ್ರವಾಸಿಗರು ಡಿ. 31ರಂದು ರಾತ್ರಿ ಹೊಸ ವರ್ಷಾಚರಣೆ ನಡೆಸಿ ಅಂದು ರಾತ್ರಿ ಅಥವಾ ಬೆಳಗ್ಗೆ ತಮ್ಮ ಮೂಲ ಸ್ಥಾನಕ್ಕೆ ತೆರಳಲಿದ್ದಾರೆ.
    ಇನ್ನೊಂದು ವಿಶೇಷವೆಂದರೆ ಹೊಸ ವರ್ಷಕ್ಕೆ ರೂಮ್‌ಗಳು ಸಿಗದ ಹಿನ್ನೆಲೆಯಲ್ಲಿ ಜ. 1ರಿಂದಲೂ ಕೆಲ ಪ್ರವಾಸಿಗರು ರೂಮ್‌ಗಳನ್ನು ಅಡ್ವಾನ್ಸ್ ಬುಕ್ಕಿಂಗ್ ಮಾಡಿಕೊಂಡಿದ್ದಾರೆ. ಹೀಗಾಗಿ ಜ. 5ರವರೆಗೆ ಕಾಫಿನಾಡಿನಲ್ಲಿ ಎಲ್ಲ ಹೋಂಸ್ಟೇ ಹಾಗೂ ರೆಸಾರ್ಟ್‌ಗಳು ಹೌಸ್ ಫುಲ್ ಎನ್ನುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts