More

    ಹಿಟ್ಟಣಗಿಯಲ್ಲಿ ಅಲಭ್ಯ ಮೂಲಸೌಲಭ್ಯ

    ಮುರಗೋಡ: ಸರ್ಕಾರ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಕೋಟ್ಯಂತರ ರೂ. ಅನುದಾನ ಬಿಡುಗಡೆ ಮಾಡುತ್ತದೆ. ಸಕಾಲಕ್ಕೆ ಅನುದಾನ ಪೂರ್ಣಪ್ರಮಾಣದಲ್ಲಿ ಸದ್ಬಳಕೆಯಾದರೆ ಗ್ರಾಮಗಳು ಅಭಿವೃದ್ಧಿ ಹೊಂದಿ ಸ್ಥಳೀಯ ಜನರ ಜೀವನಮಟ್ಟ ಸುಧಾರಣೆಯಾಗುತ್ತದೆ.

    ಆದರೆ, ಸವದತ್ತಿ ತಾಲೂಕಿನ ಹಿಟ್ಟಣಗಿ ಗ್ರಾಮ ಇದಕ್ಕೆ ವಿರುದ್ಧವಾಗಿದೆ. ಗ್ರಾಮದಲ್ಲಿ ಸೌಲಭ್ಯಗಳಿಗಿಂತ ಇಲ್ಲಗಳ ಸಂಖ್ಯೆ ಹೆಚ್ಚಿದೆ. ಬೆಳವಡಿ-ಸವದತ್ತಿ ಮುಖ್ಯ ರಸ್ತೆಯಿಂದ 5ಕಿ.ಮೀ. ದೂರದಲ್ಲಿರುವ ಈ ಗ್ರಾಮದಲ್ಲಿ 3,500ಕ್ಕೂ ಅಧಿಕ ಜನ ವಾಸಿಸುತ್ತಿದ್ದಾರೆ. ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತಗ್ಗು-ಗುಂಡಿ ಬಿದ್ದು ಹಾಳಾದ ಕಾರಣ ಬಸ್ ಸಂಚಾರ ಸ್ಥಗಿತವಾಗಿದೆ. ಪರಿಣಾಮ ಸ್ಥಳೀಯ ನಿವಾಸಿಗಳು ಸ್ವಂತ ವಾಹನ ಅಥವಾ ನಡಿಗೆ ಮೂಲಕ ಮುಖ್ಯರಸ್ತೆಗೆ ಬಂದು ಅಲ್ಲಿಂದ ಮುಂದಿನ ಸಂಚಾರ ಆರಂಭಿಸಬೇಕಾದ ಅನಿವಾರ್ಯತೆ ಇದೆ. ರಸ್ತೆ ಹದಗೆಟ್ಟ ಕಾರಣ ರಾತ್ರಿ ವೇಳೆ ಈ ಮಾರ್ಗದಲ್ಲಿ ಸಂಚಾರ ಮಾಡಲು ವಾಹನ ಸವಾರರು ಭಯಪಡುತ್ತಾರೆ.

    ಆನ್‌ಲೈನ್ ಶಿಕ್ಷಣಕ್ಕೆ ಸಮಸ್ಯೆ: ಕೋವಿಡ್-19 ಕಾರಣ ಆನ್‌ಲೈನ್ ತರಗತಿಗಳು ಆರಂಭವಾಗಿವೆ. ಆದರೆ ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಮಕ್ಕಳಿಗೆ ತರಬೇತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಇದರಿಂದ ಅವರ ಭವಿಷ್ಯಕ್ಕೆ ಸಮಸ್ಯೆಯಾಗುವ ಸಾಧ್ಯತೆಯಿದೆ ಎಂದು ಪಾಲಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

    ಹಿಟ್ಟಣಗಿ ಗ್ರಾಮವು ಆಡಳಿತಾತ್ಮಕ, ಶೈಕ್ಷಣಿಕವಾಗಿ ಸವದತ್ತಿಗೆ, ರಾಜಕೀಯವಾಗಿ ಬೈಲಹೊಂಗಲ ಕ್ಷೇತ್ರಕ್ಕೆ ಒಳಪಡುತ್ತದೆ. ಇದರಿಂದ ಸ್ಥಳೀಯರ ಬದುಕು ಅಡ್ಡಕತ್ತರಿಯಂತಾಗಿದೆ. ಸೌಲಭ್ಯ ಪಡೆಯಲು ಒಂದೆಡೆ ತೆರಳಬೇಕಾದರೆ, ಸರ್ಕಾರದ ಹಕ್ಕು ಚಲಾಯಿಸಲು ಮತ್ತೊಂದೆಡೆ ಹೋಗಬೇಕಾದ ಪರಿಸ್ಥಿತಿ ಸ್ಥಳೀಯರಿಗೆ ಇದೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮಕ್ಕೆ ಮುಂದಾಗಬೇಕು ಗ್ರಾಮಕ್ಕೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಸೆಯಾಗಿದೆ.

    ಕರೆ ಮಾಡಲು ಹತ್ತಬೇಕು ಮನೆಯ ಮಾಳಿಗೆ

    ಗ್ರಾಮದಲ್ಲಿ ನೆಟ್‌ವರ್ಕ್ ಸಮಸ್ಯೆ ಇರುವ ಕಾರಣ ಸ್ಥಳೀಯ ನಿವಾಸಿಗಳು ತಮ್ಮಮನೆಯ ಮಾಳಿಗೆ, ಮರಗಳ ಮೇಲೆ ಹತ್ತಿ ಬೇರೆಯವರ ಜತೆ ಸಂಭಾಷಣೆ ಮಾಡುತ್ತಾರೆ. ನೆಟ್‌ವರ್ಕ್ ಸಮಸ್ಯೆಯಿಂದ ಸ್ಥಳೀಯ ನಿವಾಸಿಗಳು ಸರ್ಕಾರದ ರೇಷನ್, ಆಧಾರ್ ಕಾರ್ಡ್, ಪೆನ್ಶನ್ ಮತ್ತಿತರ ಸೇವೆ ಪಡೆಯಲು ತಿಂಗಳುಗಳ ಕಾಲ ಪರದಾಡುತ್ತಾರೆ.

    ಗ್ರಾಮ ಅಗತ್ಯ ಸೌಲಭ್ಯಗಳಿಂದ ವಂಚಿತವಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ನಾವು ಸಮಸ್ಯೆ ಅನುಭವಿಸುವಂತಾಗಿದೆ. ಸಂಬಂಧಪಟ್ಟವರು ಕ್ರಮಕ್ಕೆ ಮುಂದಾಗದಿದ್ದರೆ ಹೋರಾಟ ಅನಿವಾರ್ಯ
    | ಸುರೇಶ ಪೂಜೇರಿ ಗ್ರಾಮಸ್ಥ

    ಮಳೆ ಕಾರಣದಿಂದ ರಸ್ತೆ ಹಾಳಾಗಿದೆ. ನೀರಾವರಿ ವ್ಯಾಪ್ತಿಗೆ ಗ್ರಾಮ ಒಳಪಟ್ಟ ಕಾರಣ ರಸ್ತೆ ಹಾಳಾಗಿದೆ. ಹೆಚ್ಚಿನ ಅನುದಾನಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ.
    | ಮಹಾಂತೇಶ ಕೌಜಲಗಿ ಶಾಸಕ, ಬೈಲಹೊಂಗಲ

    | ಮಹಾಂತೇಶ ಬಾಳಿಕಾಯಿ ಮುರಗೋಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts