More

    ಮತದಾನ ಬಹಿಷ್ಕರಿಸಲು ನಿರ್ಧಾರ

    ಕುಷ್ಟಗಿ: ಮೂಲ ಸೌಕರ್ಯ ಕಲ್ಪಿಸುವಂತೆ ಹಲವು ಬಾರಿ ಮನವಿ ಮಾಡಿಕೊಂಡು ಬೇಸತ್ತ ಪಟ್ಟಣದ 3ನೇ ವಾರ್ಡ್‌ನ ನಿವಾಸಿಗಳು ಸ್ವಂತ ಖರ್ಚಿನಲ್ಲಿ ರಸ್ತೆ ಸಮತಟ್ಟು ಮಾಡಿಕೊಂಡು ಪುರಸಭೆ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಮೂಲಕ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸುವ ಎಚ್ಚರಿಕೆ ನೀಡಿದ್ದಾರೆ.

    ರಸ್ತೆ, ಚರಂಡಿ ಹಾಗೂ ಪ್ರಮುಖವಾಗಿ ರಾಜಕಾಲುವೆಯ ಸಮಸ್ಯೆ ಎದುರಿಸುತ್ತಿರುವ ನಿವಾಸಿಗಳು, ವಾರ್ಡ್‌ನ ಅಭಿವೃದ್ಧಿಗಾಗಿ ಸಂಘ ರಚಿಸಿಕೊಂಡು ಕಳೆದ 2ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದಾರೆ. ರಾಜಕಾಲುವೆ ನಿರ್ಮಾಣಕ್ಕೆ ಎರಡು ವರ್ಷಗಳ ಹಿಂದೆಯೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಗುತ್ತಿಗೆದಾರರಿಗೆ ಕಾಮಗಾರಿ ಆದೇಶ ನೀಡಿದಾಗ್ಯೂ ಕಾಮಗಾರಿ ಆರಂಭಿಸದೆ ಪುರಸಭೆ ನಿರ್ಲಕ್ಷ್ಯ ವಹಿಸಿದೆ.

    ಸಂಘದಿಂದ ಹತ್ತಾರು ಬಾರಿ ಮನವಿ ಸಲ್ಲಿಸಿರುವ ನಿವಾಸಿಗಳು ಪುರಸಭೆಯ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕುತ್ತ ಬಂದಿದ್ದಾರೆ. ಕಚೇರಿ ಎದುರು ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಬಂದ ನಂತರ ಎರಡು ತಿಂಗಳ ಹಿಂದೆ ಸ್ಥಳ ಪರಿಶೀಲನೆ ನಡೆಸಿದ ಪುರಸಭೆ, ಕಾಮಗಾರಿ ಆರಂಭಿಸಲು ರಸ್ತೆ ಅಗೆದು ಕೈಬಿಟ್ಟಿದೆ. ಇದರಿಂದ ಮುಖ್ಯ ರಸ್ತೆಗೆ ಸಂಪರ್ಕಿಸಲು ರಸ್ತೆ ಇಲ್ಲದಂತಾಗಿದೆ. ಸದ್ಯ ಮಳೆಗಾಲ ಆರಂಭವಾಗಿರುವುದರಿಂದ ಅಗೆದು ಕೈಬಿಟ್ಟ ತಗ್ಗಿನಲ್ಲಿ ನೀರು ಸಂಗ್ರಹಗೊಂಡು ಸಮಸ್ಯೆ ಉಂಟಾಗಿದೆ.

    ಪುರಸಭೆ ನಿರ್ಲಕ್ಷ್ಯಕ್ಕೆ ಬೇಸತ್ತ ನಿವಾಸಿಗಳು ತಾವೇ ಹಣ ಸಂಗ್ರಹಿಸಿಕೊಂಡು ಮಳೆ ನೀರು ಸಾಗಿಸಲು ತಳಭಾಗದಲ್ಲಿ ಸಿಮೆಂಟ್ ಪೈಪ್ ಅಳವಡಿಸಿ ಜೆಸಿಬಿಯಿಂದ ರಸ್ತೆ ಸಮತಟ್ಟು ಮಾಡಿಕೊಂಡಿದ್ದಾರೆ. ಸಮಸ್ಯೆ ಇರುವ ಬಗ್ಗೆ ಶಾಸಕರು, ಮಾಜಿ ಶಾಸಕರ ಗಮನಕ್ಕೆ ತಂದಾಗ್ಯೂ ಯಾರೂ ಸ್ಪಂದಿಸುತ್ತಿಲ್ಲ ಎಂದು ನಿವಾಸಿಗಳು ಅಲವತ್ತುಕೊಂಡಿದ್ದಾರೆ.

    ಸ್ಪಂದನೆ ಶೂನ್ಯ: ವಾರ್ಡ್‌ನ ಸಮಸ್ಯೆಗೆ ಪುರಸಭೆಯಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸುತ್ತಿಲ್ಲ. ಹೀಗಾಗಿ ವಾರ್ಡ್‌ನವರೇ ಹಣ ಸಂಗ್ರಹಿಸಿ ರಸ್ತೆ ಸಮತಟ್ಟು ಮಾಡಿಕೊಂಡಿದ್ದೇವೆ. ಆಡಳಿತ ವರ್ಗದ ನಿರ್ಲಕ್ಷ್ಯಕ್ಕೆ ಬೇಸತ್ತು ಈ ಬಾರಿಯ ಲೋಕಸಭಾ ಚುನಾವಣೆ ಮತದಾನ ಬಹಿಷ್ಕರಿಸುವ ನಿರ್ಧಾರ ಮಾಡಿದ್ದೇವೆಂದು 3ನೇ ವಾರ್ಡ್‌ನ ರಹವಾಸಿಗಳ ಸಂಘದ ಅಧ್ಯಕ್ಷ ಡಿ.ಬಿ.ಗಡೇದ್, ಉಪಾಧ್ಯಕ್ಷ ಅಭಿನಂದನ್ ಗೋಗಿ, ಪ್ರಧಾನ ಕಾರ್ಯದರ್ಶಿ ಎ.ವೈ.ಲೋಕರೆ, ಸಹ ಕಾರ್ಯದರ್ಶಿ ಬಸವರಾಜ ಗಾಣಿಗೇರ, ಡಾ.ಬಾಬು, ರಾಘವೇಂದ್ರ ನೀಲಿ ಇತರರು ಎಚ್ಚರಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts