More

    ಇತಿಹಾಸ ಪ್ರಸಿದ್ಧ ಜಾಗಕ್ಕೆ ಸಮಸ್ಯೆ

    ವಿಜಯವಾಣಿ ಸುದ್ದಿಜಾಲ ವಿಟ್ಲ

    400 ಕೆವಿ ವಿದ್ಯುತ್ ಮಾರ್ಗದ ಯೋಜನೆ ಸಿದ್ಧಪಡಿಸುವ ಸಂದರ್ಭ ಮಣ್ಣು ಪರೀಕ್ಷೆ ಹಾಗೂ ವೈಮಾನಿಕ ಸಮೀಕ್ಷೆ ನಡೆಸಲಾಗಿತ್ತು. ಈಗ ಮತ್ತೆ ಕರ್ನಾಟಕ -ಕೇರಳ ಗಡಿ ಭಾಗದಲ್ಲಿ ಒಂದು ವಾರದಲ್ಲಿ ಎರಡು ಬಾರಿ ಹೆಲಿಕಾಪ್ಟರ್ ಹಾರಾಟ ನಡೆಸಿದ್ದು ಅನುಮಾನಕ್ಕೆ ಕಾರಣವಾಗಿದೆ.

    2015ರ ಜನವರಿಯಲ್ಲಿ ಕೇರಳ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಅಳಿಕೆ ಗ್ರಾಮದ ಕೆಲವು ಭಾಗದಿಂದ ಮಣ್ಣು ಪರೀಕ್ಷೆಯ ಮಾದರಿ ತೆಗೆದುಕೊಂಡು ಹೋಗಿದ್ದರು. ಆ ಸಂದರ್ಭ ಈ ಭಾಗದಲ್ಲಿ ಹೆಲಿಕಾಪ್ಟರ್‌ಗಳ ಹಾರಾಟ ನಡೆದಿತ್ತು. ಬಳಿಕ ಇದು ವಿದ್ಯುತ್ ಮಾರ್ಗದ ಸಮೀಕ್ಷೆ ಎಂಬುದು ಬಹಿರಂಗವಾಗಿತ್ತು. ಈಗ ಮತ್ತೆ ಹೆಲಿಕಾಪ್ಟರ್ ಹಾರಾಡಿರುವುದು ರೈತರಲ್ಲಿ ಆತಂಕ ಉಂಟುಮಾಡಿದೆ. ಕೈಗಾರಿಕೆಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ರೈತರನ್ನು ಒಕ್ಕಲೆಬ್ಬಿಸುವ ಕಾರ್ಯ ನಿರಂತರ ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ಪಟ್ಟಿದ್ದ ಶ್ರಮವನ್ನು ಸರ್ಕಾರ ಏಕಕಾಲದಲ್ಲಿ ಸ್ವಾಧೀನಪಡಿಸಿಕೊಳ್ಳುವ ಮೂಲಕ ರೈತನ ಬದುಕು ಕಿತ್ತುಕೊಳ್ಳುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಮಧ್ಯೆ ಕಳಂಜಿ ಮಲೆ ರಕ್ಷಿತಾರಣ್ಯ ಭಾಗದ ಸಮೀಪವೇ ವಿದ್ಯುತ್ ಮಾರ್ಗ ಹೋಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇಲ್ಲಿ ಇತಿಹಾಸ ಪ್ರಸಿದ್ದ ಬಕಾಸುರನ ಗುಹೆ ಇದ್ದು ವಿದ್ಯುತ್ ಮಾರ್ಗ ಇದೇ ದಾರಿಯಲ್ಲಿ ಹಾದುಹೋದರೆ ಐತಿಹಾಸಿಕ ಜಾಗಕ್ಕೇ ಸಮಸ್ಯೆ ಎದುರಾಗುವ ಸಾಧ್ಯತೆ ನಿಚ್ಚಳವಾಗಿದೆ. ಇದರ ಜತೆಗೆ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ಮೂಲ ಸ್ಥಾನದ ಬಳಿಯೂ ವಿದ್ಯುತ್ ಮಾರ್ಗ ಹಾದುಹೋಗುವಂತೆ ನಕ್ಷೆಯಲ್ಲಿ ಕಾಣುತ್ತಿದೆ. ಹೀಗಾದಲ್ಲಿ ಈ ಸ್ಥಳದ ಪಾವಿತ್ರ್ಯಕ್ಕೂ ಧಕ್ಕೆ ಬರುವ ಸಾಧ್ಯತೆ ಇದೆ ಎಂಬ ಆತಂಕ ಭಕ್ತರದ್ದು.

    ಕರ್ನಾಟಕದ ಭೂಭಾಗದಲ್ಲಿ 400ಕೆವಿ ವಿದ್ಯುತ್ ಮಾರ್ಗ ರಚನೆ ವಿಚಾರದಲ್ಲಿ ಮೂರು ಪ್ರತ್ಯೇಕ ಸರ್ವೇ ಕಾರ್ಯ ಈ ಹಿಂದೆ ಮಾಡಿದ್ದು, ಕೊನೆಯದಾಗಿ ಒಂದು ಮಾರ್ಗವನ್ನು ಅಂತಿಮಗೊಳಿಸಲಾಗಿತ್ತು. ಆದರೆ ಮಾರ್ಗ ಮೂರರ ಭಾಗದಲ್ಲಿ ಈಗ ವೈಮಾನಿಕ ಸಮೀಕ್ಷೆ ನಡೆಸಿರುವುದು 400 ಕೆವಿ ಮಾರ್ಗ ಬದಲಾವಣೆಯ ಸೂಚನೆಯಾ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಏಳಲಾರಂಭಿಸಿದೆ.

    ಮಾರ್ಗ ಮೂರು ಎಲ್ಲೆಲ್ಲಿ?: ಅಳಿಕೆ ಗ್ರಾಮದ ನೆಗಳಗುಳಿ, ಎರುಂಬು, ಸತ್ಯಸಾಯಿ ವಿಹಾರ, ಚೆಂಡುಕಳ, ಜಾರುಗುಡ್ಡ ಮೂಲಕ ಕಳಂಜಿ ಮಲೆ ರಕ್ಷಿತಾರಣ್ಯದ ಮಧ್ಯ ಭಾಗವಾಗಿ ವಿಟ್ಲ ಕಸಬಾ ಗ್ರಾಮದ ಸೇರಾಜೆ, ನೆತ್ರಕೆರೆ ಸಂಪರ್ಕಿಸಲಿದೆ. ಬಳಿಕ ನಗಾರಿಮೂಲೆ ಮೂಲಕ ಬಳ್ಳಮಲೆ ರಕ್ಷಿತಾರಣ್ಯಕ್ಕೆ ಸೇರಲಿದೆ.

    ರೈತರಿಂದ ತೀವ್ರ ವಿರೋಧ: ಉಡುಪಿ -ಕಾಸರಗೋಡು ವಿದ್ಯುತ್ ಮಾರ್ಗದ ಸರ್ವೇ ಕಾರ್ಯಕ್ಕೆ ಎಲ್ಲ ಗ್ರಾಮಗಳಲ್ಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಸ್ಥಳೀಯ ಸಂತ್ರಸ್ತ ರೈತರು ಜಿಲ್ಲಾಡಳಿತ ಸೇರಿ ಸರ್ಕಾರಕ್ಕೆ ಪತ್ರಗಳ ಮೂಲಕ ಯೋಜನೆ ಕೈಬಿಡುವಂತೆ ಆಗ್ರಹಿಸುತ್ತಿದ್ದಾರೆ. ಜತೆಗೆ ಜಮೀನಿಗೆ ಕಳ್ಳರಂತೆ ನುಗ್ಗುವ ಅಧಿಕಾರಿಗಳನ್ನು ರೈತರು ಹಿಂದಕ್ಕೆ ಕಳುಹಿಸುತ್ತಿದ್ದಾರೆ.

    ವಿವಿಐಪಿಗಳ ಆಗಮನ ಹಾಗೂ ಸ್ಥಳೀಯವಾಗಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಸಂದರ್ಭ ಮಾಹಿತಿಗಳು ಲಭಿಸುತ್ತವೆ. ಅಳಿಕೆ ಭಾಗದಲ್ಲಿ ಈ ಕುರಿತ ಯಾವುದೇ ಮಾಹಿತಿ ಇಲ್ಲ. 400ಕೆವಿ ವಿದ್ಯುತ್ ಮಾರ್ಗದ ವಿಚಾರದಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ದರ ನಿಗದಿಪಡಿಸುವ ಬಗ್ಗೆ ಈಗಾಗಲೇ ತಹಸೀಲ್ದಾರ್‌ಗೆ ಸ್ಥಳೀಯ ನೋಂದಣಿ ಕಚೇರಿಗಳಿಂದ ಮೂರು ವರ್ಷದ ದರ ಪಡೆದುಕೊಳ್ಳುವಂತೆ ಪತ್ರ ಬರೆಯಲಾಗಿದೆ.
    -ಮದನ್ ಮೋಹನ್
    ಸಹಾಯಕ ಆಯುಕ್ತರು ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts