More

    ಬಿಜೆಪಿಯಲ್ಲಿ ಬೆಳಗಿದ ಪೂರ್ಣಿಮಾ ಕಾಂಗ್ರೆಸ್‌ನತ್ತ ಪಯಣ? ಕಮಲ ಬಿಟ್ಟು ಕೈ ಹಿಡಿಯಲು ಶಾಸಕಿ ಸಜ್ಜು!

    ಖಂಡೇನಹಳ್ಳಿ ಬಸವರಾಜ್
    ಹಿರಿಯೂರು: ಕಾಂಗ್ರೆಸ್ ಕೊಟ್ಟ ಆಫರ್ ಒಪ್ಪಿಕೊಂಡು ಕೈ ಗೆ ಜೈ ಎನ್ನಬೇಕೋ ಅಥವಾ ರಾಜಕೀಯವಾಗಿ ಕೈ ಹಿಡಿದ ಬಿಜೆಪಿಯಲ್ಲಿ ಮುಂದುವರಿಯಬೇಕೋ ಎಂಬ ಸಂದಿಗ್ಧತೆಯಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಿಲುಕಿದ್ದಾರೆ.

    ಅಪ್ಪ ಸೋತ ಕ್ಷೇತ್ರದಲ್ಲಿ ಕಮಲ ಮುಡಿದು ಗೆಲುವಿನ ನಗೆ ಬೀರಿದ್ದ ಪೂರ್ಣಿಮಾ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಕಡೆ ಮುಖ ಮಾಡಿದ್ದರೂ ನಿರ್ಧಾರ ಕೈಗೊಳ್ಳಲಾಗದೆ ಸರಿ – ತಪ್ಪುಗಳ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.

    ಇದನ್ನೂ ಓದಿ: ಹಾಸನ | ಕರ್ಕಶ ಧ್ವನಿ ಮಾಡುತ್ತಾ ಬೈಕ್ ಚಾಲನೆ ಮಾಡಿದ್ದಕ್ಕೆ ಆರಂಭವಾದ ಜಗಳ ಓರ್ವನ ಹತ್ಯೆಯಲ್ಲಿ ಅಂತ್ಯ!

    ಸುಧಾಕರ್-ಸೋಮಶೇಖರ್ ನಡುವೆ ಕೈ ಟಿಕೆಟ್‌ಗೆ ಪೈಪೋಟಿ ನಡೆಯತ್ತಿರುವ ಹೊತ್ತಲ್ಲಿ ದಿಢೀರ್ ಪೂರ್ಣಿಮಾ ಹೆಸರು ಚಾಲ್ತಿಗೆ ಬಂದಿದ್ದರಿಂದ ಹಿರಿಯೂರು ರಾಜಕಾರಣ ರೋಚಕ ತಿರುವುಗಳಿಗೆ ಸಾಕ್ಷಿಯಾದರೂ ಅಚ್ಚರಿಯಿಲ್ಲ.

    ಬಿಜೆಪಿ ಕುರಿತು ಒಂದಷ್ಟು ಅಸಮಾಧಾನಗಳಿದ್ದರೂ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಸರ್ಕಾರ ಸಹಕಾರ ನೀಡಿದೆ ಎಂಬ ಸಮಾಧಾನವೂ ಇದೆ. ವಿಶೇಷವಾಗಿ ಬಿಎಸ್‌ವೈ ಬಗ್ಗೆ ಗೌರವ ಭಾವವಿದೆ. ಸಮುದಾಯಕ್ಕೆ ಹೆಚ್ಚು ಸಹಾಯ ಮಾಡಲಾಗಲಿಲ್ಲ ಎಂಬ ಕೊರಗೂ ಇದೆ.

    ಸುಧಾಕರ್‌ಗೆ ಶಾಕ್

    ಈ ಚುನಾವಣೆ ಮಾಜಿ ಸಚಿವ ಸುಧಾಕರ್‌ಗೆ ಮಾಡು ಇಲ್ಲವೆ ಮಡಿ ಹೋರಾಟ. ೨೦೧೮ರಲ್ಲಿ ಸೋತ ಬಳಿಕ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಹಳ್ಳಿ,ಹಳ್ಳಿಗೆ ಭೇಟಿ ನೀಡಿ ಪಕ್ಷ ಸಂಘಟಿಸಿದ ಫಲವಾಗಿ ಡಿಜಿಟಲ್ ಸದಸ್ಯತ್ವ ಅಭಿಯಾನದಲ್ಲಿ ಹಿರಿಯೂರು ರಾಜ್ಯಕ್ಕೆ ನಂ.1 ಸ್ಥಾನ ಪಡೆದಿತ್ತು.

    ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಘಟನೆ ಬಲವಾಗುತ್ತಿದ್ದ ವೇಳೆ ಸೋಮಶೇಖರ್-ಸುಧಾಕರ್ ಬೆಂಬಲಿಗರು ಕೈ- ಕೈ ಮಿಲಾಯಿಸಿದ್ದರಿಂದ ಬಣ ರಾಜಕೀಯ ಮುನ್ನೆಲೆಗೆ ಬಂದಿತ್ತು. ಈ ಮಧ್ಯೆ ಕಾಡುಗೊಲ್ಲರಿಗೆ ಟಿಕೆಟ್ ನೀಡಿದರೆ ಕಣದಿಂದ ಹಿಂದೆ ಸರಿಯುವೆ ಎಂಬ ಸೋಮಶೇಖರ್ ಹೇಳಿಕೆ ಪಕ್ಷದಲ್ಲಿ ಸಂಚಲನ ಮೂಡಿಸಿತ್ತು.

    ಪೂರ್ಣಿಮಾ ಅವರನ್ನು ಪಕ್ಷಕ್ಕೆ ಕರೆತಂದು ಹಿರಿಯೂರಿಂದ ಕಣಕ್ಕಿಳಿಸಿದರೆ ತುಮಕೂರು, ಚಿತ್ರದುರ್ಗ ಸೇರಿ ನಾಲ್ಕೈದು ಕ್ಷೇತ್ರಗಳಲ್ಲಿ ಗೊಲ್ಲ ಸಮುದಾಯ ಕಾಂಗ್ರೆಸ್ ಪರ ನಿಲ್ಲಬಹುದೆಂದು ಯೋಚಿಸಿದ್ದರ ಪರಿಣಾಮ ಈ ಹೆಸರು ಹೈಕಮಾಂಡ್ ಅಂಗಳದಲ್ಲಿ ಹರಿದಾಡಿತು.ಸಿದ್ದರಾಮಯ್ಯ ಪೂರ್ಣಿಮಾ ಪರ ಬ್ಯಾಟಿಂಗ್ ಮಾಡಿದರೆ, ಡಿ.ಕೆ.ಶಿವಕುಮಾರ್ ಸುಧಾಕರ್ ಪರ ಇದ್ದಾರೆ.

    ಹಿರಿಯೂರಿನಿಂದಲೇ ಟಿಕೆಟ್ ಖಾತ್ರಿ ಪಡಿಸಿದರೆ ಮಾತ್ರ ಪೂರ್ಣಿಮಾ ಕಾಂಗ್ರೆಸ್ ಸೇರಬಹುದು. ಹೀಗೆ ಮಾಡಿದರೆ ಸುಧಾಕರ್ ಒಪ್ಪುತ್ತಾರಾ? ಬಂಡಾಯ ಎದ್ದರೆ ಹೇಗೆ ಶಮನ ಮಾಡಬೇಕೆಂಬುದು ಪಕ್ಷಕ್ಕೆ ತಲೆನೋವಾಗಿದೆ.

    ಇದನ್ನೂ ಓದಿ: ಕೊಡವ ಶೈಲಿಯ ಉಡುಗೆ ಧರಿಸಿ ಫೋಸ್ ಕೊಟ್ಟ ಸಿಎಂ ಬೊಮ್ಮಾಯಿ; ಫೋಟೋ ವೈರಲ್

    ಪಕ್ಷೇತರ ಅಭ್ಯರ್ಥಿ?

    2008ಲ್ಲಿ ಡಿ.ಸುಧಾಕರ್ ಪಕ್ಷೇತರರಾಗಿ ರೈಲಿನ ಚಿಹ್ನೆಯಡಿ ಸ್ಪರ್ಧಿಸಿ ಗೆದ್ದು ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿ ಇತಿಹಾಸ ನಿರ್ಮಿಸಿದ್ದರು. ೨೦೧೩ರಲ್ಲಿ ಜೆಡಿಎಸ್‌ನ ಎ.ಕೃಷ್ಣಪ್ಪ ವಿರುದ್ಧ ಕೂದಲೆಳೆ ಅಂತರದಲ್ಲಿ ಗೆದ್ದಿದ್ದರು. ಸುಧಾಕರ್ ಹ್ಯಾಟ್ರಿಕ್ ಗೆಲುವಿನ ಓಟಕ್ಕೆ ೨೦೧೮ರಲ್ಲಿ ಪೂರ್ಣಿಮಾ ಬ್ರೇಕ್ ಹಾಕಿದ್ದರು.

    ಚಿತ್ರದುರ್ಗ-ತುಮಕೂರು ಜಿಲ್ಲೆಯಲ್ಲಿ ಯಾದವರ ಮತಗಳು ನಿರ್ಣಾಯಕ ಪಾತ್ರ ವಹಿಸುವ ಕಾರಣ ಪ್ರಬಲ ನಾಯಕಿ ಪೂರ್ಣಿಮಾ ಹಾಗೂ ರಾಜ್ಯ ಗೊಲ್ಲ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಅವರನ್ನು ಸೆಳೆಯಲು ಕಾಂಗ್ರೆಸ್ ಯೋಚಿಸಿದೆ.

    ಡಿ.ಕೆ.ಶಿವಕುಮಾರ್ ಅವರಿಗೆ ಆಪ್ತರಾಗಿರುವ ಸುಧಾಕರ್ ಈ ಬಾರಿ ಟಿಕೆಟ್ ಪಕ್ಕಾ ಎನ್ನುತಿದ್ದರೂ ಎಐಸಿಸಿ ಅಂಗಳದಲ್ಲಿ ಪೂರ್ಣಿಮಾ ಹೆಸರು ಹರಿದಾಡಿರುವುದು ಅವರ ನಿದ್ದೆಗೆಡಿಸಿದೆ. ಕಾಂಗ್ರೆಸ್ ಟಿಕೆಟ್ ಗಿಟ್ಟಿಸುತ್ತಾರೋ-ಪಕ್ಷೇತರರಾಗಿ ಕಣಕ್ಕಿಳಿಯುತ್ತಾರೋ-ತೆನೆ ಹೊರುತ್ತಾರೊ ಎಂಬ ಸುತ್ತ ಚರ್ಚೆ ನಡೆದಿದೆ.

    ಮೂರು ಪಕ್ಷದ ಆಕಾಂಕ್ಷಿಗಳು

    ಡಿ.ಸುಧಾಕರ್, ಬಿ.ಸೋಮಶೇಖರ್‌ಆರ್.ಮಂಜುನಾಥ್, ಸಿ.ಬಿ.ಪಾಪಣ್ಣ, ಪಾತಣ್ಣ, ಸಿ.ವೀರಭದ್ರ ಬಾಬು ಕಾಂಗ್ರೆಸ್ ಟಿಕೆಟ್ ಕೋರಿ ಅರ್ಜಿ ಸಲ್ಲಿಸಿದ್ದಾರೆ. ನಿವೃತ್ತ ಇಂಜಿನಿಯರ್ ರವೀಂದ್ರಪ್ಪ ಅವರಿಗೆ ಜೆಡಿಎಸ್ ಟಿಕೆಟ್ ಖಚಿತವಾಗಿದೆ. ಶಾಸಕಿ ಪೂರ್ಣಿಮಾ ಬಿಜೆಪಿ ತೊರೆದರೆ ಮುಖಂಡ ಸಿದ್ದೇಶ್ ಯಾದವ್, ಜಿಲ್ಲಾಧ್ಯಕ್ಷ ಮುರಳಿ, ಜಿಪಂ ಮಾಜಿ ಉಪಾಧ್ಯಕ್ಷ ದ್ಯಾಮಣ್ಣ, ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್.ಆರ್.ಲಕ್ಷ್ಮೀಕಾಂತ್ ಹೆಸರು ಮೂಂಚಣಿಗೆ ಬರಲಿದೆ.

    ನಡ್ಡಾ ಕಾರ್ಯಕ್ರಮಕ್ಕೆ ಗೈರು

    ಚಳ್ಳಕೆರೆ, ಮೊಳಕಾಲ್ಮೂರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಆಗಮಿಸಿದ್ದ ಕಾರ್ಯಕ್ರಮಕ್ಕೆ ಪೂರ್ಣಿಮಾ ಅವರು ಗೈರಾಗಿದ್ದು ಕಾಂಗ್ರೆಸ್ ಸೇರ್ಪಡೆ ಆಗುತ್ತಾರೆ ಎಂಬ ಸುದ್ದಿಗೆ ಪುಷ್ಟಿ ನೀಡಿತ್ತು. ಇಂದು ಹೊಳಲ್ಕೆರೆ, ಹೊಸದುರ್ಗಕ್ಕೆ ಜನಸಂಕಲ್ಪ ಯಾತ್ರೆ ಆಗಮಿಸಲಿದ್ದು ಸಿಎಂ ಬೊಮ್ಮಾಯಿ ಪಾಲ್ಗೊಳ್ಳುತ್ತಿದ್ದಾರೆ. ಈ ಸಭೆಗೂ ಪೂರ್ಣಿಮಾ ಗೈರಾದರೆ ಕಮಲ ಬಿಟ್ಟು ಕೈ ಹಿಡಿಯುವುದು ಖಚಿತ ಎಂದು ವಿಶ್ಲೇಷಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts