More

    ಹಿರಿಯೂರು ಸರ್ಕಾರಿ ಆಸ್ಪತ್ರೆಗೆ ನ್ಯಾಯಾಧೀಶರ ಭೇಟಿ

    ಹಿರಿಯೂರು: ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ನ್ಯಾಯಾಧೀಶ ಬಿ.ಕೆ.ಗಿರೀಶ್ ಶುಕ್ರವಾರ ದಿಢೀರ್ ಭೇಟಿ ನೀಡಿ, ಸ್ವಚ್ಛತೆ, ನಿರ್ವಹಣೆ, ಆರೋಗ್ಯ ಸೇವೆ ಕುರಿತು ಪರಿಶೀಲನೆ ನಡೆಸಿದರು.

    ಆಸ್ಪತ್ರೆಗೆ ಭೇಟಿ ನೀಡಿದ ನ್ಯಾಯಾಧೀಶರು, ಮಹಿಳಾ-ಪುರುಷರು ಹಾಗೂ ಬಾಣಂತಿಯರ ವಾರ್ಡ್‌ಗಳಿಗೆ ಭೇಟಿ ನೀಡಿ ವ್ಯವಸ್ಥೆ ವೀಕ್ಷಿಸಿದರು. ವೈದ್ಯರು ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆಯೇ? ಎಂದು ರೋಗಿಗಳನ್ನು ಪ್ರಶ್ನಿಸಿದರು.

    ಸ್ವಚ್ಛತೆ, ಶೌಚಾಲಯ ವ್ಯವಸ್ಥೆ, ಡಯಾಲಿಸಿಸ್ ಕೇಂದ್ರ, ವಾರ್ಡ್ ನಿರ್ವಹಣೆ, ಆರೋಗ್ಯ ಸೇವೆ, ವೈದ್ಯಕೀಯ ಸಿಬ್ಬಂದಿ, ಕುಡಿವ ನೀರು ಇತರೆ ಮೂಲ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು.

    ಆಸ್ಪತ್ರೆ ಉಗ್ರಾಣಕ್ಕೆ ಭೇಟಿ ನೀಡಿ, ಔಷಧಿ ದಾಸ್ತಾನು ಬಗ್ಗೆ ಮಾಹಿತಿ ಕೇಳಿದಾಗ ಸಿಬ್ಬಂದಿ ತಡಬಡಿಸಿದರು. ಹೀಗಾಗಿ ಸಂಬಂಧಿಸಿದ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡುವಂತೆ ತಾಕೀತು ಮಾಡಿದರು.

    ಪ್ರತಿ ನಿತ್ಯ ಕರ್ತವ್ಯನಿರತ ವೈದ್ಯರು ಹಾಗೂ ಸಿಬ್ಬಂದಿ ಮಾಹಿತಿ ಪ್ರಕಟಿಸಬೇಕು, ಸಿಬ್ಬಂದಿ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಎಂದು ಸೂಚಿಸಿದರಲ್ಲದೆ, ಗುರುತಿನ ಚೀಟಿ ಹಾಕಿಕೊಳ್ಳದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ಬೀಗ ಹಾಕಿದ್ದ ಶೌಚಗೃಹದ ಬಾಗಿಲು ತೆರೆಸಿ ಬಳಕೆಯಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು.

    ಸರ್ಕಾರಿ ಆಸ್ಪತ್ರೆಗೆ ಬರುವ ಬಡ ರೋಗಿಗಳ ಜತೆ ಸೌಜನ್ಯಯುತವಾಗಿ ವರ್ತಿಸಿ, ಮಾನವೀಯತೆ ದೃಷ್ಟಿಯಿಂದ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು ಎಂದು ಸೂಚಿಸಿದರು. ಈ ಸಂದರ್ಭದಲ್ಲಿ ಟಿಎಚ್‌ಒ ಡಾ.ವೆಂಕಟೇಶ್, ಡಾ.ಕುಮಾರ್ ನಾಯ್ಕ, ನಗರ ಸಭೆ ಪೌರಾಯುಕ್ತ ಉಮೇಶ್, ವಿನಯ್‌ಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts