More

    ವೃದ್ಧೆಗೆ ಜಿಲ್ಲಾ ನ್ಯಾಯಾಧೀಶೆ ಆಸರೆ  ಶಾಮನೂರು ಕೆಳಸೇತುವೆ ಬಳಿ ವಾಸವಿದ್ದ ಚಂದ್ರಮ್ಮ  ಚಿಕಿತ್ಸೆಯೊಂದಿಗೆ ಮಹಿಳಾ ರಕ್ಷಣಾಲಯಕ್ಕೆ ದಾಖಲು

    ದಾವಣಗೆರೆ: ರಸ್ತೆಯಲ್ಲೇ ವಾಸವಿದ್ದ ವಯೋವೃದ್ಧೆಯೊಬ್ಬರಿಗೆ ಪ್ರಾಥಮಿಕ ವೈದ್ಯಕೀಯ ಚಿಕಿತ್ಸೆ ಕಲ್ಪಿಸಿ ಶ್ರೀರಾಮನಗರ ಮಹಿಳಾ ರಕ್ಷಣಾಲಯಕ್ಕೆ ಕಳುಹಿಸಿಕೊಡುವ ಮೂಲಕ ಪ್ರಧಾನ ಜಿಲ್ಲಾ ನ್ಯಾಯಾಧೀಶೆ ರಾಜೇಶ್ವರಿ ಎನ್. ಹೆಗಡೆ ಅವರು ಮಾನವೀಯತೆ ಮೆರೆದಿದ್ದಾರೆ.
    ದಾವಣಗೆರೆ ಬಂಬೂಬಜಾರ್ ನಿವಾಸಿ, ಸುಮಾರು 60 ವರ್ಷದ ಚಂದ್ರಮ್ಮ, ಹೊರವಲಯದ ಶಾಮನೂರು ಕೆಳಸೇತುವೆ ಬಳಿ ನಾಯಿಮರಿಯೊಂದಿಗೆ ಅನೇಕ ದಿನಗಳಿಂದ ವಾಸವಿದ್ದರು.
    ಆ ಮಾರ್ಗದಲ್ಲಿ ಹೋಗುತ್ತಿದ್ದ ಕೆಲವರು ಅಜ್ಜಿಗೆ ಮಾತನಾಡಿಸಲು ಯತ್ನಿಸಿದ್ದಾರೆ. ಮತ್ತೆ ಕೆಲವರು ಕಣ್ಣಿಗೆ ಕಂಡರೂ ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಹೋಗಿದ್ದಾರೆ. ಆದರೆ, ಜಿಲ್ಲಾ ನ್ಯಾಯಾಧೀಶೆ ನ್ಯಾಯಾಲಯಕ್ಕೆ ಸಂಚರಿಸುವ ದಾರಿಯಲ್ಲಿ ಮಳೆ, ಗಾಳಿ ಮತ್ತು ಧೂಳಿನಲ್ಲೂ ಬದುಕು ಕಟ್ಟಿಕೊಂಡಿದ್ದ ವೃದ್ಧೆಯನ್ನು ಕಂಡಿದ್ದಾರೆ. ಅಜ್ಜಿಯ ಅಸಹಾಯಕತೆಗೆ ಸ್ಪಂದಿಸುವ ಮನಸ್ಸು ಮಾಡಿದ್ದಾರೆ.
    ಶನಿವಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ್ ಅವರೊಂದಿಗೆ ಬಂದು ವೃದ್ಧೆಯನ್ನು ಸಂಪರ್ಕಿಸಿದ್ದಾರೆ. ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಇತರೆ ಅಧಿಕಾರಿಗಳನ್ನು ಕರೆಸಿದ್ದಾರೆ.
    ಆರಂಭದಲ್ಲಿ ಪ್ರತಿರೋಧ ಒಡ್ಡಿದ ವೃದ್ಧೆ ಸಿಟ್ಟಿಗೆದ್ದರೂ ನ್ಯಾಯಾಧೀಶರು ಸಹನೆಯಿಂದಲೇ ಎಲ್ಲವನ್ನೂ ಗಮನಿಸಿ, ಮನವೊಲಿಸಿ ರಕ್ಷಣಾಲಯಕ್ಕೆ ಕರೆದೊಯ್ಯಲು ಕಾರಣರಾದರು.
    ಮಾನಸಿಕವಾಗಿ ನೊಂದಿದ್ದಾರೆ ಎನ್ನಲಾದ ವೃದ್ಧೆಗೆ ಕುಟುಂಬ ಸದಸ್ಯರಿದ್ದಲ್ಲಿ ಸಂಪರ್ಕಿಸಿ ಮಾಹಿತಿ ಪಡೆಯುವುದು. ನಂತರ ಆಕೆಗೆ ಅಗತ್ಯವಿರುವ ಮಾನಸಿಕ ಕೌನ್ಸಿಲಿಂಗ್ ಕಲ್ಪಿಸಿ ಚಿತ್ರದುರ್ಗದಲ್ಲಿನ ಸಂಸ್ಥೆಗೆ ಕಳುಹಿಸಲು ನ್ಯಾಯಾಧೀಶರು ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts