More

    ಬಾಡಿಗೆ ವಸೂಲಿಯಲ್ಲಿ ಪಾಲಿಕೆಗೆ ಹೊಡೆತ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಆದಾಯ ಸೋರಿಕೆ, ಸಿಬ್ಬಂದಿ ನಿರ್ಲಕ್ಷೃ ಮತ್ತಿತರ ಕಾರಣಗಳಿಂದ ಸಮಸ್ಯೆ ಅನುಭವಿಸುತ್ತಿರುವ ಪಾಲಿಕೆಗೆ ಇದೀಗ ಬೀದಿ ಬದಿ ವ್ಯಾಪಾರಿಗಳಿಂದ ಭೂ ಬಾಡಿಗೆ ವಸೂಲಿಯಲ್ಲಿ ಭಾರಿ ಹೊಡೆತ ಬಿದ್ದಿದೆ.

    ಪಾಲಿಕೆ ವ್ಯಾಪ್ತಿಯಲ್ಲಿ ನಿತ್ಯ 3,050 ಕ್ಕೂ ಅಧಿಕ ಹಣ್ಣು, ಕಾಯಿಪಲ್ಲೆ, ತಳ್ಳುವ ಗಾಡಿಗಳ ಮೂಲಕ ಬೀದಿ ಬದಿಯಲ್ಲಿ ವ್ಯಾಪಾರ ನಡೆಯುತ್ತಿದೆ. ಪಾಲಿಕೆ ಸಿಬ್ಬಂದಿ ಮಾ.1ರಿಂದ ಬೀದಿ ಬದಿ ಕಾಯಿಪಲ್ಲೆ ಮಾರುವವರಿಂದ 10 ರೂ., ತಳ್ಳುವ ಗಾಡಿಯ ಮೇಲೆ ಹಣ್ಣು, ತರಕಾರಿ ಹಾಗೂ ಇತರೆ ವ್ಯಾಪಾರ ಮಾಡುವವರಿಂದ 50 ರೂ. ಮತ್ತು ಪಾವಭಾಜಿ, ಬೇಲ್‌ಪುರಿ, ಐಸ್‌ಕ್ರಿಮ್, ಫಾಸ್ಟ್‌ಫುಡ್ ಸೇರಿ ಇತರೆ ಆಹಾರ ಪದಾರ್ಥ ಮಾರುವುವರಿಂದ 100 ರೂ. ಹಣವನ್ನು ಬಾಡಿಗೆ ರೂಪದಲ್ಲಿ ವಸೂಲಿ ಮಾಡಲು ನಿಯಮ ರೂಪಿಸಲಾಗಿದೆ.

    ನಿಯಮ ಮೀರಿ ಬಾಡಿಗೆ ವಸೂಲಿ ಮಾಡುತ್ತಿರುವ ಪಾಲಿಕೆ ಅಧಿಕಾರಿಗಳು: ಸಿಬ್ಬಂದಿ ಜೇಬು ಭರ್ತಿ ಮಾಡಿಕೊಳ್ಳುವ ಉದ್ದೇಶದಿಂದ ವ್ಯಾಪಾರಿಗಳಿಂದ 50 ರೂ.ಬಾಡಿಗೆ ಬದಲಾಗಿ 30 ರೂ., 100 ರೂ. ಬದಲಾಗಿ 60-70 ರೂ. ವಸೂಲಿ ಮಾಡುತ್ತಿದ್ದಾರೆ. ಕೆಲವು ಬೀದಿ ಬದಿಗಳಲ್ಲಿ ತರಕಾರಿ ಮಾರಾಟ ಮಾಡುವವರಿಂದ 10 ರೂ. ಬದಲಾಗಿ 30 ರೂ. ವಸೂಲಿ ಮಾಡುತ್ತಿದ್ದಾರೆ. ಪಡೆದ ಬಾಡಿಗೆ ಹಣಕ್ಕೆ ರಶೀದಿ ಕೇಳಿದರೆ ನಮಗೆ ವ್ಯಾಪಾರ ಮಾಡಲು ಅವಕಾಶ ನೀಡುವುದಿಲ್ಲ. ನಿಯಮ ಮೀರಿ ನಮ್ಮಿಂದ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂಬುದು ವ್ಯಾಪರಿಗಳ ದೂರು.

    ಪಾಲಿಕೆ ಸಿಬ್ಬಂದಿಗೆ ಹೆಗಲಿಗೆ ಬಾಡಿಗೆ ವಸೂಲಿ ಜವಾಬ್ದಾರಿ: ಪಾಲಿಕೆಗೆ ಭೂ ಬಾಡಿಗೆ ರೂಪದಲ್ಲಿ ನಿರ್ದಿಷ್ಟ ಆದಾಯ ಬರುವ ಉದ್ದೇಶದಿಂದ ಈ ಹಿಂದಿನ ಪಾಲಿಕೆಯ ಸ್ಥಾಯಿ ಸಮಿತಿಯು ಭೂ ಬಾಡಿಗೆಯನ್ನು ವಾರ್ಷಿಕ 60 ಲಕ್ಷ ರೂ. ವರೆಗೆ ನಿಗದಿ ಪಡಿಸಿ ಟೆಂಡರ್ ನೀಡಲಾಗುತಿತ್ತು. ಆದರೆ, ಸದ್ಯ ಪಾಲಿಕೆ ಸಿಬ್ಬಂದಿಗೆ ಬಾಡಿಗೆ ವಸೂಲಿ ಜವಾಬ್ದಾರಿ ವಹಿಸಿರುವುದಿರಂದ ಸಮಸ್ಯೆಯಾಗುತ್ತಿದೆ. ಇದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಭೂ ಬಾಡಿಗೆ ಬರುವುದಿಲ್ಲ. ಆಯುಕ್ತರು ಮುಂಜಾಗ್ರತ ಕ್ರಮ ವಹಿಸಬೇಕು ಎಂದು ಪಾಲಿಕೆಯ ಮಾಜಿ ಸದಸ್ಯರು ಆಗ್ರಹಿಸಿದ್ದಾರೆ.

    ತಪ್ಪದ ಹೆಚ್ಚುವರಿ ಕೆಲಸ

    ಈಗಾಗಲೇ ಪಾಲಿಕೆ ಸಿಬ್ಬಂದಿ ಕೊರತೆ ಎದುರಿಸುತ್ತಿದೆ. ಇದೀಗ ತೆರಿಗೆ ವಸೂಲಿ ಮಾಡುವ ಸಿಬ್ಬಂದಿಯಿಂದಲೇ ಬೀದಿ ವಾಪಾರಿಗಳಿಂದ ಭೂ ಬಾಡಿಗೆ ವಸೂಲಿ ಮಾಡಿಸುತ್ತಿರುವುದು ಹೆಚ್ಚುವರಿ ಹೊರೆಯಾಗುತ್ತಿದೆ. ಪರಿಣಾಮ ನಿರೀಕ್ಷಿತ ಪ್ರಮಾಣದಲ್ಲಿ ಭೂ ಬಾಡಿಗೆ ಸಂಗ್ರಹಿಸುವುದು ಕಷ್ಟವಾಗುತ್ತಿದೆ. ಭೂ ಬಾಡಿಗೆ ವಸೂಲಿಯನ್ನು ಈ ಹಿಂದೆ ಟೆಂಡರ್ ರೂಪದಲ್ಲಿ ವಸೂಲಿ ಮಾಡಲಾಗುತ್ತಿತ್ತು. ಆದರೆ, ಸದ್ಯ ಈ ಕಾರ್ಯವನ್ನು ಪಾಲಿಕೆ ಸಿಬ್ಬಂದಿಗೆ ವಹಿಸಲಾಗಿರುವುದರಿಂದ ಸಮಸ್ಯೆಯಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

    ನಗರ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಭೂ ಬಾಡಿಗೆ ವಸೂಲಿಯಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳಲಾಗುತ್ತಿದೆ. ಶುಲ್ಕದ ರಶೀದಿ ನೀಡದ ಹಾಗೂ ಹೆಚ್ಚು ಅಥವಾ ಕಡಿಮೆ ಭೂ ಬಾಡಿಗೆ ಪಡೆಯುವ ಸಿಬ್ಬಂದಿ ವಿರುದ್ಧ ಕ್ರಮ ವಹಿಸಲಾಗುವುದು. ಮುಂದಿನ ದಿನಗಳಲ್ಲಿ ನಿರ್ದಿಷ್ಟ ಆದಾಯ ಸಂಗ್ರಹಕ್ಕೆ ಆದ್ಯತೆ ನೀಡಲಾಗುವುದು.
    ಎಸ್.ಬಿ.ದೊಡ್ಡಗೌಡರ ಉಪ ಆಯುಕ್ತ (ಕಂದಾಯ )

    ನಗರದಲ್ಲಿ ಮಾ.1ರಿಂದ ನಿಗದಿಪಡಿಸಿದ ದರದಂತೆ ಭೂ ಬಾಡಿಗೆ ವಸೂಲಾತಿಯ ಜವಾಬ್ದಾರಿಯನ್ನು ಪಾಲಿಕೆಯ ಕಂದಾಯ ಶಾಖೆಯ ಸಿಬ್ಬಂದಿಗೆ ವಹಿಸಲಾಗಿದೆ. ವ್ಯಾಪಾರಿಗಳು ನಿಗದಿತ ಶುಲ್ಕ ಮಾತ್ರ ಸಂದಾಯ ಮಾಡಬೇಕು.
    ಜಗದೀಶ ಕೆ.ಎಚ್. ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts